ಮುನಿರಾಬಾದ್: ಸಮೀಪದ ಹುಲಿಗಿಯ ಹುಲಿಗೆಮ್ಮದೇವಿ ದೇವಸ್ಥಾನದ ರಾಜಬೀದಿ ಸೇರಿದಂತೆ ಗ್ರಾಮದ ವಿವಿಧ ರಸ್ತೆಗಳ ಒತ್ತುವರಿ ತೆರವು ಕಾರ್ಯಾಚರಣೆ ಜಿಲ್ಲಾ ಆಡಳಿತದಿಂದ ಶನಿವಾರ ಆರಂಭವಾಗಿದ್ದು, ಭಾನುವಾರ ಕೂಡ ಮುಂದುವರಿದಿದೆ.
ಭಾನುವಾರ ಗ್ರಾಮದ ನಂದಿವೃತ್ತದಿಂದ ಶಿವಪುರ ರಸ್ತೆಯ ಇಕ್ಕೆಲಗಳಲ್ಲಿ, ಚರಂಡಿಯ ಮೇಲೆ ನಿರ್ಮಿಸಿಕೊಂಡ ಮನೆ, ಶೆಡ್ಡುಗಳನ್ನು ತೆರವುಗೊಳಿಸಲಾಯಿತು.
ಐತಿಹಾಸಿಕ ಕಟ್ಟಡ ಉಳಿಸಿರಿ:
ಹುಲಿಗಿ ಗ್ರಾಮದ ಮಧ್ಯ ಭಾಗದಲ್ಲಿರುವ ಹೈದರಾಬಾದ್ ನಿಜಾಮರ ಕಾಲದ (ಗೋಲ್ ಬಂಗ್ಲೆ ) ಐತಿಹಾಸಿಕ, ಪಾರಂಪರಿಕ ಕಟ್ಟಡವಿದ್ದು ಅದನ್ನು ತೆರವುಗೊಳಿಸದಂತೆ ಗ್ರಾಮದ ಕೆಲವರು ಮನವಿ ಮಾಡಿದ್ದಾರೆ. ನಿಜಾಮ ಆಳರಸರ ಕಾಲದಲ್ಲಿ ಕಂದಾಯ ವಸೂಲಿ ಮತ್ತು ಮದ್ದು ಗುಂಡುಗಳ ಸಂಗ್ರಹಣೆಗೆ ಈ ಕಟ್ಟಡವನ್ನು ಬಳಸಲಾಗುತ್ತಿತ್ತು ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಇದನ್ನು ಸಂರಕ್ಷಿಸಿ, ಸ್ಥಳೀಯ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಬೇಕು. ಸಾರ್ವಜನಿಕ ಗ್ರಂಥಾಲಯ ಸೇರಿದಂತೆ ವಿವಿಧ ಉದ್ದೇಶಕ್ಕೆ ಸಾರ್ವಜನಿಕ ಬಳಕೆಗೆ ಉಪಯೋಗಿಸಬಹುದು ಎಂದು ಗ್ರಾಮದ ಬಸವರಾಜ ಮೇಟಿ, ಶಿವು ದಳಪತಿ, ಸಂಜೀವ ನಾಯಕ್ ಸೇರಿದಂತೆ ಇತರರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ತೆರವು ಕಾರ್ಯಾಚರಣೆ ನಿವಾಸಿಗಳಿಗೆ ಶಿಕ್ಷೆ: ಶನಿವಾರದಿಂದ ಆರಂಭವಾದ ಒತ್ತುವರಿ ತೆರವು ಕಾರ್ಯಾಚರಣೆಯ ನೆಪದಲ್ಲಿ ವಿದ್ಯುತ್ ಪೂರೈಕೆ ಕಡಿತಗೊಳಿಸಲಾಗುತ್ತಿದೆ. ಇದರಿಂದ ಕುಡಿಯುವ ನೀರು ಪೂರೈಕೆಯ ಸಮಸ್ಯೆ, ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ದಯವಿಟ್ಟು ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.