
ಕೊಪ್ಪಳ: ‘ಪ್ರಸ್ತುತ ಸಜ್ಜನರು ನಿಷ್ಕ್ರಿಯವಾಗಿರುವ ಕಾರಣಕ್ಕಾಗಿಯೇ ದುರ್ಜನರು ಸಕ್ರಿಯವಾಗಿದ್ದಾರೆ. ಆದ್ದರಿಂದ ಜಾತಿ, ಭಾಷೆ, ಧರ್ಮಗಳ ಕಚ್ಚಾಟ ಬಿಟ್ಟು, ನಿಮ್ಮ ಧರ್ಮದ ಆಚರಣೆ ಮನೆಗೆ ಸೀಮಿತವಾಗಿಟ್ಟು ಹಿಂದೂ ಎನ್ನುವ ಐಕ್ಯ ಮಂತ್ರವೇ ಮುಂದಾಗಬೇಕು’ ಎಂದು ಹಿಂದೂ ಪ್ರಚಾರಕ ಮನೋಹರ ಮಠದ ಪ್ರತಿಪಾದಿಸಿದರು.
ಇಲ್ಲಿನ ಭಾಗ್ಯನಗರದಲ್ಲಿ ಮಂಗಳವಾರ ನಡೆದ ಹಿಂದೂ ಸಮ್ಮೇಳನದಲ್ಲಿ ಮುಖ್ಯಭಾಷಣ ಮಾಡಿದ ಅವರು ಮಾತಿನುದ್ದಕ್ಕೂ ಹಿಂದೂತ್ವದ ಗಟ್ಟಿಬೇರುಗಳು ಭಾರತವನ್ನು ಹೇಗೆ ಬಲಿಷ್ಠಗೊಳಿಸುತ್ತಿವೆ ಎನ್ನುವುದನ್ನು ಒತ್ತಿ ಹೇಳಿದರು. ‘ಭಾರತವನ್ನು ಮೊದಲು ಹಾವಾಡಿಗರ ದೇಶ ಎನ್ನುವಂತೆ ನೋಡಲಾಗುತ್ತಿತ್ತು. ಈಗ ಜಗತ್ತು ಭಾರತದ ಪ್ರತಿ ನಡೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ನಾಗರಿಕರಾಗಿ ಬದುಕಲು ಭಾರತ ಬೇಕು ಎನ್ನುವ ಸ್ಥಿತಿ ಈಗ ನಿರ್ಮಾಣವಾಗಿದೆ’ ಎಂದರು.
ದೇಶಕ್ಕೆ ಭಾವೈಕ್ಯದ ಸಂದೇಶ ನೀಡಿದ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವವನ್ನು ಪ್ರಸ್ತಾಪಿಸಿದ ಅವರು, ‘ಜಾತಿ, ಮತ, ಪಕ್ಷಬೇಧ ಎಲ್ಲವನ್ನೂ ದೂರ ಮಾಡಿ ಜಾತ್ರೆ ಎಲ್ಲರನ್ನೂ ಒಂದು ಮಾಡಿದೆ. ಇಂಥ ನಾಡಿನಲ್ಲಿ ವಿಘಟನೆ ಬಿಟ್ಟು ಎಲ್ಲರ ಏಳಿಗೆಯನ್ನೂ ಬಯಸುವ ಹಿಂದೂ ಸಮಾಜ ಜಾಗೃತಗೊಳ್ಳಬೇಕಿದೆ. ಯಾವ ಹಿಂದೂ ಹಿಂಸೆಯನ್ನು, ಕೋಮುವಾದವನ್ನು ಪ್ರತಿಪಾದಿಸಿಲ್ಲ. ಒಂದು ವೇಳೆ ಹಿಂದೂ ಕೋಮುವಾದಿಯಾಗಿದ್ದರೆ ಭಾರತದಲ್ಲಿ ಒಬ್ಬ ಮುಸಲ್ಮಾನ ಹಾಗೂ ಕ್ರಿಶ್ಚಿಯನ್ ಬದುಕಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಹೇಳಿದರು.
ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಮೇಶ ಹ್ಯಾಟಿ ಮಾತನಾಡಿ, ‘ಮಾತೃಭಾಷೆಯ ಪ್ರೀತಿ, ಸಾಮರಸ್ಯ ಹಿಂದೂ ಸಮಾಜದ ಗುರಿ. ಹಿಂದೂ ಧರ್ಮ ಸದಾ ಹರಿಯುವ ಮಹಾನದಿ. ಎಲ್ಲರ ಕಾಲದಲ್ಲಿ ಶೋಷಣೆಗೆ ಒಳಗಾದಾಗಲೂ ಸ್ವಂತ ಶಕ್ತಿಯಿಂದ ಪುಟಿದೆದ್ದು ಬಂದಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಿತಿಯ ಉಪಾಧ್ಯಕ್ಷ ಜವಾಹರಲಾಲ್ ಸಾ ಅಂಠಾಳಮರದ, ಭಾಗ್ಯನಗರದ ಮಹಿಳಾ ಪ್ರತಿನಿಧಿಯಾಗಿ ಪಾನಘಂಟಿ ಫೌಂಡೇಷನ್ ಅಧ್ಯಕ್ಷೆ ಶಾರದಾ ಪಾನಘಂಟಿ, ಗಿರೀಶ ಪಾನಘಂಟಿ ವೇದಿಕೆ ಮೇಲಿದ್ದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್, ಮುಖಂಡ ಮಹಾಂತೇಶ ಮೈನಳ್ಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಸನಾತನ ಸಂಸ್ಕೃತಿ ಪರಂಪರೆ ಉಳಿವಿಗೆ ಹಿಂದೂ ಧರ್ಮ ಜಾಗೃತಗೊಳ್ಳಬೇಕು. ಅನಂತ ಜನ್ಮದ ಪುಣ್ಯದ ಫಲದಿಂದಾಗಿ ಭಾರತದಲ್ಲಿ ಜನಿಸಿದ್ದೇವೆಶಿವಪ್ರಕಾಶನಾಂದ ಸ್ವಾಮೀಜಿ ಭಾಗ್ಯನಗರದ ಶಂಕರಾಚಾರ್ಯ ಮಠ
ಹಿಂದೂ ಸಮಾಜ ಎಲ್ಲರನ್ನೂ ಒಳಗೊಳ್ಳಬೇಕು. ಸಾಮರಸ್ಯ ಎಲ್ಲರ ಬದುಕಿನ ಕ್ರಮವಾಗಬೇಕು. ಈ ಕಾರ್ಯಕ್ರಮ ಆಯೋಜಿಸಲು ಎಲ್ಲರೂ ಸಾಕಷ್ಟು ಶ್ರಮಿಸಿದ್ದಾರೆಕೊಟ್ರೇಶ ಶೆಡ್ಮಿ ಹಿಂದೂ ಸಮಾವೇಶ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.