ADVERTISEMENT

ಮನೆಗಳಿಗೆ ನುಗ್ಗಿದ ಹಿರೇಹಳ್ಳದ ನೀರು

ಬೆಳೆಗಳಿಗೆ ಹಾನಿ, ಮನೆ ಮುಂದೆಯೇ ಬಂದಂತಾಯಿತು ಹಳ್ಳ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 4:27 IST
Last Updated 3 ಅಕ್ಟೋಬರ್ 2022, 4:27 IST
ಕೊಪ್ಪಳ ತಾಲ್ಲೂಕಿನ ಹಳೇ ಗೊಂಡಬಾಳ ಗ್ರಾಮದಲ್ಲಿ ನುಗ್ಗಿರುವ ನೀರು
ಕೊಪ್ಪಳ ತಾಲ್ಲೂಕಿನ ಹಳೇ ಗೊಂಡಬಾಳ ಗ್ರಾಮದಲ್ಲಿ ನುಗ್ಗಿರುವ ನೀರು   

ಕೊಪ್ಪಳ: ತಾಲ್ಲೂಕಿನ ಹಿರೇಹಳ್ಳ‌ ಜಲಾಶಯದಿಂದ ಹಳ್ಳದ ಪಾತ್ರಕ್ಕೆ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಭಾನುವಾರ ಹಳೇ ಗೊಂಡಬಾಳ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿದೆ.

ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು ಹಳ್ಳ ಕೊಳ್ಳಗಳು ಭರ್ತಿಯಾಗಿ ಹರಿಯುತ್ತಿವೆ. ಜಾನುವಾರುಗಳಿಗೆ ಸಂಗ್ರಹಿಸಿ ಇಟ್ಟಿದ್ದ ಮೇವಿನ ಬಣವೆ ಹಾಗೂ ಅಂಗನವಾಡಿ ನೀರಿನಲ್ಲಿ ಜಲಾವೃತವಾಗಿವೆ.

ಅಳವಂಡಿ ವರದಿ: ನಾಲ್ಕು ದಿನಗಳಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿರುವದರಿಂದ ವಲಯದ ವ್ಯಾಪ್ತಿಯಲ್ಲಿ ಕೆರೆ ಹಳ್ಳಕೊಳ್ಳಗಳು ತುಂಬಿಹರಿಯುತ್ತಿವೆ ಹಾಗೂ ಜನಜೀವನ ಅಸ್ಯವ್ಯಸ್ತಗೊಂಡಿದೆ. ಹಿರೇಹಳ್ಳದ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಟ್ಟಿರುವದರಿಂದ ವ್ಯಾಪ್ತಿಯ ಗ್ರಾಮಗಳ ಜಮೀನುಗಳು ನೀರಿನಿಂದ ಆವೃತವಾಗಿದೆ.

ADVERTISEMENT

ಹಿರೇಹಳ್ಳ ವ್ಯಾಪ್ತಿಯ ಗ್ರಾಮಗಳ ನೂರಾರು ಎಕರೆ ಜಮೀನಿನಲ್ಲಿ ಬೆಳೆದ ಬೆಳೆಗಳು ಹಿರೇಹಳ್ಳದ ನೀರಿನ ಪ್ರವಾಹದಿಂದ ಜಲಾವೃತವಾಗಿದ್ದು, ಬೆಳೆಯನ್ನು ನಂಬಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರೈತ ಕಬೀರಸಾಬ ಗೊಂಡಬಾಳ ರೈತ ಮಾತನಾಡಿ ‘ಲಕ್ಷಾಂತರ ಹಣ ಖರ್ಚು ಮಾಡಿ ಕಬ್ಬು, ಮೆಕ್ಕೆಜೋಳ ಬೆಳೆಗಳನ್ನು ಹಾಕಿದ್ದು ಹಿರೇಹಳ್ಳದ ನೀರಿನ ಪ್ರವಹದಿಂದ ಜಮೀನು ನೀರಿನಿಂದ ಆವೃತವಾಗಿ ಲಕ್ಷಾಂತರ ಹಣ ಹಾನಿಯಾಗಿದೆ. ಸರ್ಕಾರ ಶೀಘ್ರವೇ ಬೆಳೆನಾಶದ ಬಗ್ಗೆ ಪರಿಶೀಲಿಸಿ ಪರಿಹಾರ ನೀಡಬೇಕು’ ಎಂದರು.

ಗೊಂಡಬಾಳದ ಇನ್ನೊಬ್ಬ ರೈತ ಸೋಮಶೇಖರಯ್ಯ ಇನಾಮದಾರ ‘ಹಿರೇಹಳ್ಳದಿಂದ ಬಿಟ್ಟ ಅಪಾರ ಪ್ರಮಾಣದ ನೀರು ಹಳೆ ಗೊಂಡಬಾಳ ಗ್ರಾಮದ ಸುಮಾರು 60ಕ್ಕೂ ಹೆಚ್ಚು ಮನೆ ಹಾಗೂ ರಸ್ತೆಯಲ್ಲಿ ಆವೃತವಾಗಿ ಜನಜೀವನ ಅಸ್ತವ್ಯಸ್ಥವಾಗಿದೆ’ ಎಂದು ನೋವು ತೋಡಿಕೊಂಡರು.

ಮಳೆ: ಶನಿವಾರ ರಾತ್ರಿಯೂ ಜಿಲ್ಲೆಯ ಹಲವು ಕಡೆ ಮಳೆಯಾಗಿದೆ. ಗಂಗಾವತಿ ತಾಲ್ಲೂಕಿನ ವೆಂಕಟಗಿರಿ 4.1 ಸೆಂ.ಮೀ.,ಕುಷ್ಟಗಿ ತಾಲ್ಲೂಕಿನ ಹನುಮಸಾಗರ 1.62 ಸೆಂ.ಮೀ., ಹನುಮನಾಳ್ 2.62 ಸೆಂ.ಮೀ., ಕಿಲ್ಲಾರಹಟ್ಟಿ 1.76 ಸೆಂ.ಮೀ., ತಾವರಗೇರಾ 1.6 ಸೆಂ.ಮೀ., ಕೊಪ್ಪಳದಲ್ಲಿ 3.54 ಸೆಂ.ಮೀ., ತಾಲ್ಲೂಕಿನ ಇರಕಲ್ ಗಡ 2.9 ಸೆಂ.ಮೀ., ಕಿನ್ನಾಳದಲ್ಲಿ 4 ಸೆಂ.ಮೀ., ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.