ADVERTISEMENT

ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ: ಹಂಪಿಗೆ ಬೆಣ್ಣೆ, ಆನೆಗೊಂದಿಗೆ ಸುಣ್ಣ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 6:13 IST
Last Updated 28 ಏಪ್ರಿಲ್ 2025, 6:13 IST
ಆನೆಗೊಂದಿ ಗ್ರಾಮದ ತಳವಾರಘಟ್ಟದ ಬಳಿಯ ಗಣೇಶನ ದೇವಸ್ಥಾನದ ಗರ್ಭಗುಡಿಯಲ್ಲಿ ಕೊಳಚೆ ನೀರು ಸಂಗ್ರಹವಾಗಿದೆ
ಆನೆಗೊಂದಿ ಗ್ರಾಮದ ತಳವಾರಘಟ್ಟದ ಬಳಿಯ ಗಣೇಶನ ದೇವಸ್ಥಾನದ ಗರ್ಭಗುಡಿಯಲ್ಲಿ ಕೊಳಚೆ ನೀರು ಸಂಗ್ರಹವಾಗಿದೆ   

ಗಂಗಾವತಿ: ಪ್ರವಾಸೋದ್ಯಮ ಅಭಿವೃದ್ಧಿ ನೆಪದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಅನಧಿಕೃತ ರೆಸಾರ್ಟ್, ಹೋಂ ಸ್ಟೇ, ಬಾಡಿಗೆ ಬೈಕ್, ಹರಿಗೋಲು ಸವಾರಿ, ಕ್ಲೀಪ್ ಜಂಪಿಂಗ್‌ನಂತಹ ಅಕ್ರಮ ಚಟುವಟಿಕೆಗಳಿಗೆ ತೋರುವ ಆಸಕ್ತಿ ಆನೆಗೊಂದಿ ಭಾಗದ ಸ್ಮಾರಕ, ಮಂಟಪ, ದೇವಾಲಯಗಳ ನಿರ್ವಹಣೆ ಹಾಗೂ ರಕ್ಷಣೆಗೆ ತೋರದ ಕಾರಣ ಇಲ್ಲಿನ ಐತಿಹಾಸಿಕ ಸ್ಥಳಗಳು ಅಧ್ವಾನ ಸ್ಥಿತಿಗೆ ತಲುಪಿವೆ ಎನ್ನುವ ದೂರು ವ್ಯಾಪಕವಾಗಿದೆ.

ಆನೆಗೊಂದಿ ಭಾಗದ ಐತಿಹಾಸಿಕ ಮಂಟಪ, ಸ್ಮಾರಕ, ದೇವಸ್ಥಾನಗಳು ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರಿ ಹೇಳುತ್ತವೆ. ಆ ಕಾಲಘಟ್ಟದ ಇತಿಹಾಸದ ಕಥನಕ್ಕೆ ಸಾಕ್ಷಿಯೂ ಆಗಿವೆ. ಮಹತ್ವ ಹೊಂದಿದ ಸ್ಥಳಗಳು ಇದೀಗ ಪಡ್ಡೆಹುಡುಗರ ಅನೈತಿಕ ಚಟುವಟಿಕೆ ತಾಣಗಳಾಗಿ ಮಾರ್ಪಟ್ಟಿವೆ.

ಆನೆಗೊಂದಿ, ಅಂಜನಾದ್ರಿ, ಹಂಪಿ ಭಾಗದ ಐತಿಹಾಸಿಕ ತಾಣಗಳು ಜಗದ್ವಿಖ್ಯಾತಿ ಪಡೆದಿವೆ. ದೇಶ ಹಾಗೂ ವಿದೇಶಗಳ ಪ್ರವಾಸಿಗರು ಆಗಮಿಸಿ ಇತಿಹಾಸದ ಮಾಹಿತಿ ಪಡೆದು, ವೀಕ್ಷಣೆ ಮಾಡಿ ಕಣ್ತುಂಬಿಕೊಂಡು ಖುಷಿಪಡುತ್ತಾರೆ. ಆದರೆ ಈ ಸ್ಥಳದಲ್ಲಿ ಕೆಲವರು ಮದ್ಯಪಾನ, ಧೂಮಪಾನ, ಗುಟ್ಕಾ ಸೇವನೆ ಜೊತೆಗೆ ಇಸ್ಪೀಟ್ ಆಡುತ್ತಾರೆ. ಸ್ಥಳದ ಮೌಲ್ಯ ಹಾಳು ಮಾಡುತ್ತಿದ್ದಾರೆ.

ADVERTISEMENT

ಆನೆಗೊಂದಿಯ ಚಿಂತಾಮಣಿ, ಆನೆಸಾಲು, ಒಂಟೆ ಸಾಲು ಕೋಟೆ, ಶಿವನದೇವಸ್ಥಾನ, ಮಲೆದೇವರ ಗುಡಿ, ಆನೆಗೊಂದಿ ಉತ್ಸವ ಮೈದಾನ, ತುಂಗಭದ್ರಾ ನದಿಪಾತ್ರಗಳು ಕುಡುಕರ ತಾಣಗಳಾಗಿವೆ. ಸಂಜೆಯಾದರೆ ಸಾಕು ಹಾವಳಿ ಕಂಡುಬರುತ್ತದೆ.  

ಅಸ್ವಚ್ಛತೆ:

ಆನೆಗೊಂದಿ ಭಾಗದ ವಿಜಯನಗರ ಕಾಲದ ಐತಿಹಾಸಿಕ ತಾಣಗಳ ಬಳಿ ಎತ್ತ ಕಣ್ಣು ಹಾಯಿಸಿದರೂ ಗುಟ್ಕಾ, ಮದ್ಯದ ಪ್ಯಾಕೆಟ್‌, ಪ್ಲಾಸ್ಟಿಕ್ ಪೇಪರ್, ಬಾಟಲ್, ಊಟದ ಪತ್ರೋಳಿ, ಚಿಪ್ಸ್ ಪ್ಯಾಕೆಟ್‌, ಟೀ ಕಪ್, ಬಟ್ಟೆ, ಪ್ಲಾಸ್ಟಿಕ್ ತ್ಯಾಜ್ಯಗಳೇ  ಕಾಣುತ್ತಿವೆ. ಕೆಲವರು ಪ್ಲಾಸ್ಟಿಕ್ ಬಿಸಾಡಿ ಹೋಗುತ್ತಿರುವುದರಿಂದ ತ್ಯಾಜ್ಯ ಸಂಗ್ರಹವಾಗುತ್ತಿದೆ. ಕೆಲವು ಸ್ಥಳಗಳು ಮೂತ್ರವಿಸರ್ಜನೆ, ಶೌಚದ ಸ್ಥಳಗಳಾಗಿ ಬದಲಾಗಿವೆ.

ಪ್ರೀ ವೆಡ್ಡಿಂಗ್‌: ಚಿಕ್ಕರಾಂಪುರ ಸಮೀಪ ಬೆಟ್ಟದ ಮೇಲಿನ ಗವಿರಂಗನಾಥ ದೇವಸ್ಥಾನದಲ್ಲಿ ಪ್ರಿ ವೆಡ್ಡಿಂಗ್ ಶೂಟ್‌ ಮಾಡುವ ಜೋಡಿ ಅಲ್ಲಿಯೇ ಬಟ್ಟೆ ಬದಲಾಯಿವುದು ಮೂತ್ರ ವಿಸರ್ಜನೆ ಮಾಡೊದು, ಪ್ಲಾಸ್ಟಿ‌ಕ್ ತ್ಯಾಜ್ಯ ಎಸೆಯುವುದು ಸಾಮಾನ್ಯವಾಗಿದೆ ಎನ್ನುವುದು ಸ್ಥಳೀಯರ ದೂರು.

ಐತಿಹಾಸಿಕ ಸ್ಮಾರಕಗಳ ವಿರೂಪ, ನಾಶಕ್ಕೆ ಮೂರು ತಿಂಗಳ ಜೈಲು,₹2 ಸಾವಿರ ದಂಡ ಎಂಬ ನಾಮಫಲಕಗಳನ್ನು ಐತಿಹಾಸಿಕ ಸ್ಥಳಗಳ ಬಳಿ ನೆಪಮಾತ್ರಕ್ಕೆ ಹಾಕಿದಂತಿವೆ.

ಆನೆಗೊಂದಿ ಗ್ರಾಮದ ಚಿಂತಾಮಣಿಗೆ ರಸ್ತೆ ಮಾರ್ಗದಲ್ಲಿರುವ ಗೋಪುರದಲ್ಲಿ ನಿವಾಸಿಗಳು ನಿರುಪಯುಕ್ತ ವಸ್ತುಗಳನ್ನು ಸಂಗ್ರಹಿಸಿರುವುದು

ಕಾಯಕಲ್ಪಕ್ಕೆ ಕಾದ ದೇವಸ್ಥಾನಗಳು: ಇಲ್ಲಿನ ಐತಿಹಾಸಿಕ ದೇವಸ್ಥಾನಗಳು ಗ್ರಾ.ಪಂ, ಪ್ರವಾಸೋದ್ಯಮ ಇಲಾಖೆ, ಹಂಪಿ ಪ್ರಾಧಿಕಾರ ನಿರ್ಲಕ್ಷ್ಯತೆಯಿಂದ ಹಾಳಾದ ಸ್ಥಿತಿಗೆ ತಲುಪಿವೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಚಿಂತಾಮಣಿಗೆ ತೆರಳುವ ರಸ್ತೆಯಲ್ಲಿನ ಗೋಪುರ, ತಳವಾರ ಘಟ್ಟಕ್ಕೆ ಹೋಗುವ ರಸ್ತೆಯಲ್ಲಿನ ಮಂಟಪ, ಮಲೆದೇವರ ಗುಡಿ, ಕಡೆಬಾಗಿಲು ಸಮೀಪ ಚಿಕ್ಕ ಮಂಟಪದ ಮೇಲೆ ಗಿಡ-ಗಂಟಿ, ಮುಳ್ಳು ಕಂಟಿಗಳು ಬೆಳೆದಿದ್ದು, ತಳವಾರಘಟ್ಟದ ಬಳಿಯ ಗಣೇಶನ ಗರ್ಭಗುಡಿಯಲ್ಲಿ ಕೊಳಚೆ ನೀರು ಸಂಗ್ರಹವಾಗಿ ಗಬ್ಬುನಾರುತ್ತಿವೆ.

ಇತ್ತೀಚೆಗೆ ವಿಜಯನಗರ ಕಾಲದ ಪ್ರಮುಖ ರಾಜ ಕೃಷ್ಣದೇವರಾಯನ ಸಮಾಧಿ ಸ್ಮಾರಕ (64 ಕಲ್ಲುಗಳ ಮಂಟಪ) ಮೇಲೆ ಪ್ರಾಣಿ ವಧೆ ಮಾಡಿದ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಖುದ್ದು ಪ್ರವಾಸೋದ್ಯಮ ಸಚಿವರೇ ಭೇಟಿ ನೀಡಿ ಪರಿಶೀಲಿಸಿದರು. ಇಲ್ಲಿನ ಸ್ಮಾರಕಗಳು ಹೊರದೇಶಗಳ ಪ್ರವಾಸಿಗರು ಕಣ್ಣರಳಿಸುವಂತೆ ಮಾಡಿದರೂ ಸ್ಥಳೀಯರ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಎಂದು ಇತಿಹಾಸ ಪ್ರಿಯರು ಬೇಸರ ವ್ಯಕ್ತಪಡಿಸುತ್ತಾರೆ. ಇವುಗಳು ತುರ್ತು ಕಾಯಕಲ್ಪ ಮಾಡಬೇಕಾದ ಅಗತ್ಯವಿದೆ.

ಆನೆಗೊಂದಿ ಗ್ರಾಮದ ಹೊರವಲಯದಲ್ಲಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ವಿಜಯನಗರ ಕಾಲದ ಕಲ್ಲು ಅಗಸಿ (ಮಂಟಪ) ಬಳಿ ಮದ್ಯ ಸೇವನೆ ಮಾಡಿ ಬಾಟಲ್ ಬಿಸಾಡಿರುವುದು
ಆನೆಗೊಂದಿ ಗ್ರಾಮದಿಂದ ತಳವಾರಘಟ್ಟಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿರುವ ಮಂಟಪದಲ್ಲಿ ಗಿಡ-ಗಂಟಿಗಳು ಬೆಳೆದಿರುವುದು
ಆನೆಗೊಂದಿ ಗ್ರಾಮದ ಚಿಂತಾಮಣಿ ಬಳಿ ಖಾಲಿ ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲ ಬಟ್ಟೆ ಎಸೆದು ಗಲೀಜು ಮಾಡಲಾಗಿದೆ

ಅಕ್ರಮ ರೆಸಾರ್ಟ್‌ಗಳ ರಕ್ಷಣೆಯಲ್ಲೇ ಆಸಕ್ತಿ ಹೆಚ್ಚು

‘ಆನೆಗೊಂದಿ ಭಾಗದಲ್ಲಿ ವಿಜಯನಗರ ಸಾಮ್ರಾಜ್ಯ ಮತ್ತು ರಾಮಾಯಣ ಕಾಲಕ್ಕೆ ಸಂಬಂಧಿಸಿದ ಸಾಕಷ್ಟು ಐತಿಹಾಸಿಕ ಸ್ಥಳಗಳಿದ್ದು ಇವು ನಿರ್ವಹಣೆಯಿಲ್ಲದೆ ಹಂತ-ಹಂತವಾಗಿ ಸ್ವರೂಪ ಕಳೆದುಕೊಳ್ಳುತ್ತಿವೆ. ಜನಪ್ರತಿನಿಧಿಗಳು ಅಧಿಕಾರಿಗಳು ಪ್ರವಾಸೋದ್ಯಮ ನೆಪದಲ್ಲಿ ಕಾನೂನಿಗೆ ವಿರುದ್ಧವಾಗಿ ಆಕ್ರಮ ರೆಸಾರ್ಟ್‌ಗಳನ್ನು ನಿರ್ಮಿಸಿಕೊಳ್ಳುತ್ತಾರೆ. ಆದರೆ ಸ್ಮಾರಕಗಳ ರಕ್ಷಣೆಗೆ ಯಾವ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

ಎಚ್ಚೆತ್ತುಕೊಳ್ಳದ ಇಲಾಖೆ

ಈಚೆಗೆ 64 ಸಾಲಿನ ಕಲ್ಲಿನ ಮಂಟಪದಲ್ಲಿ ಸ್ಥಳೀಯ ನಿವಾಸಿಗಳು ಮೇಕೆ ಚರ್ಮ ಸುಲಿದು ಮಾಂಸ ಮಾರಾಟ ಮಾಡಿದ ಘಟನೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಆದರೂ ಇಲ್ಲಿನ ಸ್ಮಾರಕಗಳ ರಕ್ಷಣೆಗೆ ಪ್ರವಾಸೋದ್ಯಮ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ‘ಹಂಪಿ-ಆನೆಗೊಂದಿ ಭಾಗದ ತಾಣಗಳ ರಕ್ಷಣೆಯಲ್ಲಿ ತಾರತಮ್ಯ ನೀತಿ ಅನುಸರಿಸುವುದು ಸರಿಯಲ್ಲ’ ಎಂದು ಆನೆಗೊಂದಿ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳಾದ ಪುನೀತಕುಮಾರ ರಾಜ ಅಚೋಳಿ ರಾಮಾಂಜಿನೇಯ ರಾಮಕೃಷ್ಣ ಲೋಹಿತ್ ಕಾರ್ತಿಕ್ ಆಕ್ರೋಶ ವ್ಯಕ್ತಪಡಿಸಿದರು.

ಯಾರು ಏನಂತಾರೆ...?

ಆನೆಗೊಂದಿ ಭಾಗದ ಸ್ಮಾರಕಗಳಿಗೆ ಆದ್ಯತೆ ನೀಡಲಾಗುವುದು. ಕೃಷ್ಣದೇವರಾಯ ಸಮಾಧಿ ಸ್ಮಾರಕ ಸೇರಿ ಎಲ್ಲ ಐತಿಹಾಸಿಕ ಸ್ಥಳಗಳ ರಕ್ಷಣೆಗೆ ಒತ್ತು ಕೊಡಲಾಗುವುದು
ಎಚ್‌.ಕೆ. ಪಾಟೀಲ ಪ್ರವಾಸೋದ್ಯಮ ಸಚಿವ
ಆನೆಗೊಂದಿ ಗ್ರಾಮದ ಮಂಟಪ, ಸ್ಮಾರಕ, ಗೋಪುರಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೇ ಕಾಣಸಿಗುತ್ತದೆ. ಇವುಗಳ ರಕ್ಷಣೆಗೆ ಮುಂದಾಗಬೇಕು
ವಿಜಯಕುಮಾರ ಆನೆಗೊಂದಿ ನಿವಾಸಿ
ಸ್ಮಾರಕ, ದೇವಾಲಯಗಳ ರಕ್ಷಣೆಗೆ ಸಿಬ್ಬಂದಿ ನಿಯೋಜನೆ ಜೊತೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಐತಿಹಾಸಿಕ ಸ್ಥಳಗಳಿದ್ದರೆ ಮಾತ್ರ ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯ
ಹರಿಹರದೇವರಾಯ ಆನೆಗೊಂದಿ, ರಾಜವಂಶಸ್ಥ
ಆನೆಗೊಂದಿ, ವಿಜಯನಗರ ಸಾಮ್ರಾಜ್ಯದ ಮಾತೃಸ್ಥಾನ. ಆದರೆ ಹಂಪಿಗೆ ಸಿಕ್ಕಷ್ಟು ಪ್ರಾಧಾನ್ಯತೆ ಆನೆಗೊಂದಿಗೆ ದೊರೆಯದೆ ಇರುವುದು ವಿಷಾದಕರ. ಸ್ಮಾರಕಗಳ ಸಂರಕ್ಷಣೆಗೆ ಸಂಬಂಧಿಸಿದ ಇಲಾಖೆಗಳು ಯೋಜನೆ ರೂಪಿಸಬೇಕಾಗಿದೆ. ಇದಕ್ಕೆ ಜಿಲ್ಲಾಡಳಿತ ಮುತುವರ್ಜಿ ವಹಿಸಲಿ
ಶರಣಬಸಪ್ಪ ಕೋಲ್ಕಾರ ಸಂಶೋಧಕ, ಗಂಗಾವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.