ADVERTISEMENT

ಕೊಪ್ಪಳದ ತುಂಬಾ ಬಣ್ಣದ ಬಿಂಬ

ನಗರಸಭೆಯಿಂದ ಕಾಮದಹನಕ್ಕೆ ತಂದ ಕಟ್ಟಿಗೆ ವಶ, ಕೆಲವು ಕಡೆ ಬಂದ್: ಜನರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 2:08 IST
Last Updated 29 ಮಾರ್ಚ್ 2021, 2:08 IST
ಕೊಪ್ಪಳದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಭಾನುವಾರ ಬಾಲಕಿಯರು ಬಣ್ಣ ಎರಚಿ ಸಂಭ್ರಮಿಸಿದರು
ಕೊಪ್ಪಳದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಭಾನುವಾರ ಬಾಲಕಿಯರು ಬಣ್ಣ ಎರಚಿ ಸಂಭ್ರಮಿಸಿದರು   

ಕೊಪ್ಪಳ: ಜಿಲ್ಲೆಯ ಎಲ್ಲೆಡೆ ಭಾನುವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ವಿವಿಧ ಬಡಾವಣೆಗಳಲ್ಲಿ ಮಕ್ಕಳು ಮನೆ ಮುಂದೆಯೇ ಬಣ್ಣ ಎರಚಿ ಸಂಭ್ರಮಿಸಿದರು. ಶನಿವಾರ ರಾತ್ರಿ ಕಾಮದಹನ ಕಾರ್ಯಕ್ರಮ ನಡೆಯಿತು.

‘ಕಾಮಣ್ಣ ಮಕ್ಕಳು.. ಕಳ್ಳ ಸುಳ್ಳ ಮಕ್ಕಳು, ಏನೇನು ಕದ್ದರು ಕಟಿಗಿ ಕುಳ್ಳು ಕದ್ದರು, ಯಾತಕ್ಕೆ ಕದ್ದರು, ಕಾಮಣ್ಣನ ಸುಡಾಕ ಕದ್ದರು..’ ಎಂದು ಹಾಡುತ್ತ ಯುವಕರು ಹಲಗೆ ಬಡಿಯುತ್ತ, ಬೀದಿಗಳಲ್ಲಿ ಬಣ್ಣ ಎರಚುತ್ತ ಸಂಚರಿಸಿದರು. ಚಿಣ್ಣರು ಬೆಳಿಗ್ಗೆಯಿಂದಲೇ ಓಕುಳಿಯಾ
ಟದಲ್ಲಿ ನಿರತರಾಗಿದ್ದು ಕಂಡುಬಂತು. ನಗರದ ಕೆಲ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ ಜನರು ಕಾಮದಹನ ಮಾಡಿದ ಜಾಗದಲ್ಲಿನ ಅಗ್ಗಿಷ್ಟಿಕೆಯನ್ನು ಮನೆಗೆ ಕೊಂಡೊಯ್ದು ಒಲೆ ಉರಿಸಿ ಹಬ್ಬಕ್ಕೆ ಚಾಲನೆ ನೀಡಿದರು. ಹಿರಿಯರು ಮಾತ್ರ ಬಣ್ಣ ಆಡಲು ನಿರಾಸಕ್ತಿ ವಹಿಸಿದಂ
ತಿತ್ತು. ಆದರೂ ಕೂಡ ಕೆಲವೆಡೆ ಓಕುಳಿಯಾಟದ ಸಂಭ್ರಮ ಮನೆ ಮಾಡಿತ್ತು.

ADVERTISEMENT

ಕಾಮದಹನಕ್ಕೆ ಅಡ್ಡಿ: ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಬಣ್ಣ ಆಡದಂತೆ ಸೂಚನೆ ಹೊರಡಿಸಲಾಗಿತ್ತು. ಪ್ರಮುಖ ವೃತ್ತಗಳಲ್ಲಿ ಜನರು ಸೇರದಂತೆ ತಡೆಯಲು ಪೊಲೀಸ್

ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನಗರದ ಕೆಲವೆಡೆ ಕಾಮದಹನಕ್ಕೆಂದು ತಂದು ಹಾಕಲಾಗಿದ್ದ ಕಟ್ಟಿಗೆಗಳನ್ನು ನಗರಸಭೆ ಸಿಬ್ಬಂದಿ ಶನಿವಾರ ಬೇರೆಡೆಗೆ ಸಾಗಿಸಿದರು. ಅಲ್ಲದೆ ಕಾಮದಹನ ನಡೆಯುತ್ತಿರುವಾಗಲೇ ಪೊಲೀಸರು ಸ್ಥಳಕ್ಕಾಗಮಿಸಿ ನೀರು ಸುರಿದು ನಂದಿಸಿದ ಘಟನೆ ಸಹ ನಡೆದಿದೆ. ಇದು ಜನರಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿತ್ತು.

‘ಜಿಲ್ಲಾಡಳಿತ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿತ್ತು. ಅಲ್ಲದೆ ನಮಗೆ ಮೊದಲೇ ಕಾಮದಹನ ನಡೆಸದಂತೆ ಮಾಹಿತಿ ನೀಡಬೇಕಿತ್ತು. ಹೀಗೆ ಏಕಾಏಕಿ ಸಂಗ್ರಹಿಸಿದ್ದ ಕಟ್ಟಿಗೆಗಳನ್ನು ಕಸದಂತೆ ಹೊತ್ತೊಯ್ದಿರುವುದು ನಮ್ಮ ಭಾವನೆಗಳಿಗೆ ಧಕ್ಕೆ ತಂದಿದೆ’ ಎಂದು ಕೋಟೆಯ ನಿವಾಸಿ ಉಮೇಶ ಕೊಪ್ಪಳ ಅಸಮಾಧಾನ ಹೊರಹಾಕಿದರು.

ಭಾಗ್ಯನಗರ ಸೇರಿದಂತೆ ಕೆಲ ಹಳ್ಳಿಗಳಲ್ಲಿ ಹೋಳಿ ಹಬ್ಬದ ಆಚರಣೆ ಸೋಮವಾರ ನಡೆಯಲಿದೆ. ಕೆಲವರು ನೈಸರ್ಗಿಕ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಕೆರೆ, ಕಟ್ಟೆ, ಕಾಲುವೆಗಳಲ್ಲಿ ಮಧ್ಯಾಹ್ನದ ಸ್ನಾನ ಮಾಡಿದರು. ಗ್ರಾಮೀಣ ಭಾಗದಲ್ಲಿ ಸಂಭ್ರಮ ಎಂದಿನಂತೆ ಇತ್ತು. ಯಾವುದೇ ಅಹಿತಕರ ಘಟನೆ ಜರುಗದಂತೆ ಸೂಕ್ಷ್ಮ ಪ್ರದೇಶದಲ್ಲಿ ಬಿಗಿಪೊಲೀಸ್‌ ಬಂದೋಬಸ್ತ್‌ ಕೂಡಾ ಮಾಡಲಾಗಿತ್ತು.

ಎಲ್ಲ ಮದ್ಯದಂಗಡಿಗಳನ್ನು ಶುಕ್ರವಾರ ಮಧ್ಯರಾತ್ರಿಯಿಂದಲೇ ಬಂದ್‌ ಮಾಡಲಾಗಿತ್ತು. ಆದರೂ ಕೆಲವು ಯುವಕರು ಮೊದಲೇ ಸಂಗ್ರಹಿಸಿ ಊರ ಹೊರವಲಯಗಳಲ್ಲಿ ಪಾರ್ಟಿ ಮಾಡುವುದು ಕಂಡು ಬಂತು. ಕಳೆದ ಎರಡು ವರ್ಷಗಳ ಹಿಂದಿನ ಸಂಭ್ರಮ ಮಾತ್ರ ಇದ್ದಿಲ್ಲ. ಎಲ್ಲೆಡೆ ಕೊರೊನಾ ವೈರಸ್ ಹರಡುವ ಆತಂಕ ಇರುವುದರಿಂದ ಜನರು ಅಷ್ಟೊಂದು ಆಸಕ್ತಿ ತೋರಿಸಲಿಲ್ಲ. ಸಂಪ್ರದಾಯಕ್ಕೆ ತಕ್ಕ ಹಾಗೆ ಮಕ್ಕಳು ಮತ್ತು ಮಹಿಳೆಯರು ತಮ್ಮ ಬಡಾವಣೆಗಳಲ್ಲಿ ಬಣ್ಣದ ಓಕುಳಿ ಆಡಿ ಸಂಭ್ರಮಿಸಿದರು.

ಬೈಕ್‌ ಮೇಲೆ ಯುವಕರು ಕೂಗಾಡುತ್ತಾ ಸಂಚರಿಸುವುದು ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.