ADVERTISEMENT

ಕೊಪ್ಪಳ | ತೋಟಗಾರಿಕೆ ಇಲಾಖೆ ಸಮಾವೇಶ: ₹500 ಕೋಟಿ ವಹಿವಾಟು ಒಪ್ಪಂದದ ನಿರೀಕ್ಷೆ

ಪ್ರಮೋದ
Published 27 ಫೆಬ್ರುವರಿ 2024, 6:29 IST
Last Updated 27 ಫೆಬ್ರುವರಿ 2024, 6:29 IST
ಕೊಪ್ಪಳದ ಬ್ರ್ಯಾಂಡ್‌ ಕೊಪ್ಪಳ ಕೇಸರ್‌ ಮಾವಿನ ಹಣ್ಣುಗಳು
ಕೊಪ್ಪಳದ ಬ್ರ್ಯಾಂಡ್‌ ಕೊಪ್ಪಳ ಕೇಸರ್‌ ಮಾವಿನ ಹಣ್ಣುಗಳು   

ಕೊಪ್ಪಳ: ತೋಟಗಾರಿಕಾ ಇಲಾಖೆ ತನ್ನ ಜಿಲ್ಲೆಯಲ್ಲಿನ ಉತ್ಪನ್ನಗಳಿಗೆ ಬ್ರ್ಯಾಂಡ್ ಮೌಲ್ಯ ಕಲ್ಪಿಸಿದ್ದರ ಪರಿಣಾಮ ಇಲ್ಲಿನ ಉತ್ಪನ್ನಗಳು ವಿದೇಶಗಳಲ್ಲಿಯೂ ಖ್ಯಾತಿ ಪಡೆದಿವೆ. ಅವುಗಳಿಗೆ ಇನ್ನಷ್ಟು ಮಾರುಕಟ್ಟೆ ಕಲ್ಪಿಸಲು ಇಲಾಖೆ ಮೊದಲ ಬಾರಿಗೆ ರಫ್ತುದಾರರ, ಖರೀದಿದಾರರ ಹಾಗೂ ಮಾರಾಟಗಾರರ ಸಮಾವೇಶ ಹಮ್ಮಿಕೊಂಡಿದ್ದು, ₹500 ಕೋಟಿ ವಹಿವಾಟು ಒಪ್ಪಂದವಾಗುವ ನಿರೀಕ್ಷೆಯಿದೆ.

ತೋಟಗಾರಿಕಾ ಇಲಾಖೆಯಿಂದ ವಿವಿಧ ಸೌಲಭ್ಯಗಳನ್ನು ಪಡೆದಿರುವ ರೈತರು ವಿಭಿನ್ನ ಕೃಷಿ ಪ್ರಯೋಗಗಳನ್ನು ಮಾಡಿದ್ದರ ಪರಿಣಾಮ ಇಲ್ಲಿ ಬೆಳೆದ ತರಹೇವಾರಿ ಮಾವಿನ ಹಣ್ಣುಗಳು ಬ್ರ್ಯಾಂಡ್‌ ಆಗಿ ತನ್ನ ಮೌಲ್ಯ ಹೆಚ್ಚಿಸಿಕೊಂಡಿವೆ. ಮಾವಿನ ಫಸಲುಗಳಿಗೆ ‘ಕೊಪ್ಪಳ ಕೇಸರ್‌’ ಎನ್ನುವ ಖ್ಯಾತಿಯೂ ಲಭಿಸಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿರುವ ರೈತರ ಸಂಖ್ಯೆ ಹಾಗೂ ವ್ಯಾಪ್ತಿ ಎರಡೂ ಹೆಚ್ಚಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಸಮಾವೇಶ ಮಹತ್ವ ಪಡೆದುಕೊಂಡಿದ್ದು, ಜಿಲ್ಲೆಯಲ್ಲಿ ತೋಟಗಾರಿಕಾ ಕ್ಷೇತ್ರವನ್ನು ಮತ್ತಷ್ಟು ಹೆಚ್ಚಿಸಲು ನೆರವಾಗಬಹುದು ಎನ್ನುವ ನಿರೀಕ್ಷೆ ಗರಿಗೆದರಿದೆ. ಇಲಾಖೆ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸ್ಥಳೀಯ ರೈತರ ಜೊತೆಗೆ ದೆಹಲಿ, ಮುಂಬೈ ಹಾಗೂ ಹೈದರಾಬಾದ್‌ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ವಹಿವಾಟುದಾರರು ಬರಲಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

ಆಯ್ದ ಉತ್ಪನ್ನಗಳನ್ನು ನೇರವಾಗಿ ರೈತರೇ ಕಂಪನಿಗಳಿಗೆ ಮಾರಾಟ ಮಾಡಲು ಜಿಲ್ಲೆಯ ಎಫ್‌ಪಿಒಗಳಿಗೆ ಸಂಪರ್ಕ ಕಲ್ಪಿಸುವುದು, ಜಿಲ್ಲೆಯ ಎಫ್‌ಪಿಒಗಳು ಕೈಗೊಳ್ಳುವ ವ್ಯವಹಾರದಲ್ಲಿ ಸಂಧಾನ ಕೌಶಲ ಅಭಿವೃದ್ಧಿ ಪಡಿಸುವುದು, ಕೃಷಿ ವ್ಯವಹಾರ ಸಂಬಂಧಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ, ಆಯಾ ಪ್ರದೇಶಗಳಲ್ಲಿ ಆಯ್ದ ಬೆಳೆ ಬೆಳೆಯುವ ಎಲ್ಲಾ ಜಿಲ್ಲೆಯ ಎಫ್‌ಪಿಒಗಳನ್ನು ಒಂದೇ ವೇದಿಕೆಯಡಿ ತರುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಂಡಿದೆ.

ತೋಟಗಾರಿಕೆ ಇಲಾಖೆ ಪ್ರತಿವರ್ಷ ಸ್ಥಳೀಯವಾಗಿ ವಿವಿಧ ಹಣ್ಣುಗಳ ಮೇಳಗಳನ್ನು ಹಮ್ಮಿಕೊಂಡು ರೈತರಿಗೆ ನೇರವಾಗಿ ಗ್ರಾಹಕರ ಮೂಲಕ ಮಾರುಕಟ್ಟೆ ಕಲ್ಪಿಸಿಕೊಡುತ್ತಿತ್ತು. ಈಗ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಸಮಾವೇಶ ಹಮ್ಮಿಕೊಂಡಿದ್ದು, ಈ ಕ್ಷೇತ್ರದಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ದೊಡ್ಡ ನಿರೀಕ್ಷೆಯೊಂದಿಗೆ ಸಮಾವೇಶ ಹಮ್ಮಿಕೊಂಡಿದ್ದೇವೆ. ಎಲ್ಲ ತಯಾರಿ ಮಾಡಿಕೊಂಡಿದ್ದು ಜಿಲ್ಲೆಯ ತೋಟಗಾರಿಕಾ ಕ್ಷೇತ್ರದ ಪ್ರಗತಿಗೆ ಅನುಕೂಲವಾಗಲಿದೆ.
ಕೃಷ್ಣ ಉಕ್ಕುಂದ ಉಪನಿರ್ದೇಶಕ ತೋಟಗಾರಿಕಾ ಇಲಾಖೆ
ಗುಂಪು ಚರ್ಚೆ ವಿವಿಧ ಕಾರ್ಯಕ್ರಮ
ಕೊಪ್ಪಳ: ಇಲ್ಲಿನ ಹೊಸಪೇಟೆ ರಸ್ತೆಯಲ್ಲಿರುವ ಮಧುಶ್ರೀ ಗಾರ್ಡನ್‌ನಲ್ಲಿ ಮಂಗಳವಾರ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಬದಲು ಸಂಸದ ಸಂಗಣ್ಣ ಕರಡಿ ಕಾರ್ಯಕ್ರಮ ಉದ್ಘಾಟಿಸುವರು. ಒಂದು ಸಾವಿರ ರೈತರು ಪಾಲ್ಗೊಳ್ಳುವ ನಿರೀಕ್ಷೆಯಲ್ಲಿ ಇಲಾಖೆ ಹೊಂದಿದೆ. ಬೆಳಿಗ್ಗೆ 9 ಗಂಟೆಗೆ ರೈತರ ನೋಂದಣಿ 11.45ಕ್ಕೆ ರಫ್ತುದಾರರ ಮಾರಾಟಗಾರರ ಪರಿಚಯ ಉಪನ್ಯಾಸ ಮ. 2ಕ್ಕೆ ಭೋಜನ ವಿರಾಮ 2.30ಕ್ಕೆ ರೈತರೊಂದಿಗೆ ಗುಂಪು ಚರ್ಚೆ ಮತ್ತು ಸಂಜೆ 4.30ಕ್ಕೆ ಸಮಾರೋಪ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.