ಗಂಗಾವತಿ: ತಾಲ್ಲೂಕಿನ ಮಲ್ಲಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾನಾ ಗ್ರಾಮಗಳಲ್ಲಿ ಅಕ್ರಮವಾಗಿ ಕಲ್ಲು ಸಾಗಣೆ ಮಾಡುತ್ತಿದ್ದ ಲಾರಿಗಳನ್ನು ಶುಕ್ರವಾರ ಕಂದಾಯ, ಹಂಪಿ ಪ್ರಾಧಿಕಾರ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ವಶ ಪಡಿಸಿಕೊಂಡರು.
ತಾಲ್ಲೂಕಿನ ರಾಂಪೂರ, ಸಂಗಾಪೂರ, ಗೂಗಿಬಂಡಿ ಕ್ಯಾಂಪ್, ಮಲ್ಲಾಪೂರ, ಬಸವನದುರ್ಗಾ ಗ್ರಾಮಗಳಲ್ಲಿ ಇರುವ ಸರ್ಕಾರಿ ಭೂಮಿಯಲ್ಲಿನ ಬೆಟ್ಟಗುಡ್ಡಗಳಲ್ಲಿ ಪ್ರಭಾವಿ ವ್ಯಕ್ತಿಗಳು ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸಿ, ಕಲ್ಲುಗಳು ಬೇರೆ ರಾಜ್ಯಗಳಿಗೆ ಸಾಗಣೆ ಮಾಡುತ್ತಿದ್ದರು. ಇದರಿಂದ ಸ್ಥಳೀಯರಿಗೆ ತೊಂದರೆಯಾಗಿದೆ ಎಂದು
ದೂರು ಕೇಳಿಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಲಾರಿಗಳನ್ನು ವಶಪಡಿಸಿಕೊಂಡರು.
ಕಲ್ಲುಗಳನ್ನು ತುಂಬಿದ್ದ ಮೂರು ಲಾರಿಗಳನ್ನು ವಶಪಡಿಸಿಕೊಂಡಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಫಯಾಜ್, ಹಂಪಿ ಪ್ರಾಧಿಕಾರ ಇಲಾಖೆಯ ಅಧಿಕಾರಿಗಳಾದ ಧನಂಜಯ್, ನರೇಂದ್ರ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಗ್ರಾಮೀಣಾ ಠಾಣಾ ಪಿಎಸ್‌ಐ ದೊಡ್ಡಪ್ಪ ಜೆ, ಗ್ರಾಮ ಲೆಕ್ಕಾಧಿಕಾರಿ ಮಹಾಲಕ್ಷ್ಮೀ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.