ಕುಷ್ಟಗಿ 13ನೇ ವಾರ್ಡಿನಲ್ಲಿ ಕಾಂಕ್ರೀಟ್ ರಸ್ತೆಯನ್ನು ಮರಳಿನ ಅಕ್ರಮ ದಂಧೆಗೆ ಬಳಸಿಕೊಂಡಿರುವುದು
ಕುಷ್ಟಗಿ: ಮರಳನ್ನು ಫಿಲ್ಟರ್ ಮಾಡುವ ಅಕ್ರಮ ದಂಧೆ ಪಟ್ಟಣದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವುದು ಕಂಡುಬಂದರೂ ಈ ಅಕ್ರಮ ತಡೆಯಲು ಅಧಿಕಾರಿಗಳು ಮುಂದಾಗದಿರುವುದು ಸಾರ್ವಜನಿಕರ ಶಂಕೆಗೆ ಕಾರಣವಾಗಿದೆ.
ಪಟ್ಟಣದ 13ನೇ ವಾರ್ಡ್‌ನಲ್ಲಿ ಅನೇಕ ದಿನಗಳಿಂದಲೂ ನಿಯಮಬಾಹಿರ ಚಟುವಟಿಕೆ ನಡೆಯುತ್ತಿದೆ. ಹಗಲು ರಾತ್ರಿ ಎನ್ನದೇ ಟ್ರ್ಯಾಕ್ಟರ್‌ಗಳು ನಿರಂತರವಾಗಿ ಮಣ್ಣು ತರುವುದು ಮತ್ತು ಫಿಲ್ಟರ್ ಮಾಡಿ ಮರಳನ್ನು ಬೇರೆ ಕಡೆ ಸಾಗಿಸುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ರಾಜಕೀಯ ಪ್ರಭಾವ ಬಳಸಿಕೊಂಡು ಈ ಅಕ್ರಮ ದಂಧೆಯಲ್ಲಿ ನಿರತರಾಗಿರುವ ಕೆಲ ವ್ಯಕ್ತಿಗಳನ್ನು ನಿಯಂತ್ರಿಸುವುದಕ್ಕೆ ಸಾಧ್ಯವಾಗದೆ ಅಧಿಕಾರಿಗಳು ಅಸಹಾಯಕರಾಗಿದ್ದಾರೆಯೆ? ಎಂದು ಪಟ್ಟಣದ ಜನ ಪ್ರಶ್ನಿಸುತ್ತಿದ್ದಾರೆ.
ಅಕ್ರಮ ಹೇಗೆ: ಸರ್ಕಾರ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಮರಳನ್ನು ತೆಗೆದು ನಿಯಮಗಳ ಅನುಸಾರ ಪರವಾನಗಿ ಪಡೆದು ಸಾಗಿಸಬೇಕು. ಆದರೆ, ಇಲ್ಲಿ ಹಾಗಾಗಿಲ್ಲ. ಯಾವ ನಿಯಮಗಳೂ ಅಕ್ರಮ ದಂಧೆಕೋರರಿಗೆ ಅಡ್ಡಿಯಾಗುವುದಿಲ್ಲ. ಎಲ್ಲಿಂದಲೊ ಮಣ್ಣನ್ನು ತರುವುದು, ಅದನ್ನು ತೊಳೆದನಂತರ ಉಳಿಯುವ ಮರಳನ್ನು ಸಂಗ್ರಹಿಸಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
ಮಿತಿಮೀರಿದ ಹಾವಳಿ: ಅಕ್ರಮ ಮರಳು ಸಾಗಣೆ ಹಾವಳಿ ಮಿತಿಮೀರಿದ್ದು ನಿತ್ಯ ನೂರಾರು ಟ್ರ್ಯಾಕ್ಟರ್‌ಗಳು ಸಂಚರಿಸುತ್ತಿರುವುದು ಸುತ್ತಲಿನ ನಿವಾಸಿಗಳ ನಿದ್ದೆಗೆಡಿಸಿದೆ. ಕಿರಿದಾದ ರಸ್ತೆಯಲ್ಲಿಯೇ ಟ್ರ್ಯಾಕ್ಟರ್‌ಗಳು ಓಡಾಡುತ್ತಿದ್ದು ಸಣ್ಣಮಕ್ಕಳು ಜೀವಕೈಯಲ್ಲಿ ಹಿಡಿದು ರಸ್ತೆಯಲ್ಲಿ ಆಟವಾಡುವಂತಾಗಿದೆ. ತಹಶೀಲ್ದಾರ್ ಕಚೇರಿ ಮುಂದೆಯೇ ಈ ಅಕ್ರಮ ದಂಧೆ ನಡೆಯುತ್ತಿದ್ದರೂ ಕಡಿವಾಣ ಬಿದ್ದಿಲ್ಲ ಎಂಬ ಆರೋಪ ಅಲ್ಲಿಯ ಜನರದು.
ಕೊಳಚೆ ನೀರು, ಮದ್ಯ ಸರಬರಾಜು: ಮರಳು ಫಿಲ್ಟರ್ ಮಾಡುವುದಕ್ಕೆ ಚರಂಡಿ ಕೊಳಚೆ ನೀರೇ ದಂಧೆಕೋರರಿಗೆ ಅನಿವಾರ್ಯವಾಗಿದೆ. ರಾಜಕಾಲುವೆ ಮೂಲಕ ಹರಿಯುವ ನೀರನ್ನು ಅಡ್ಡಗಟ್ಟಿ ಡಿಸೇಲ್ ಎಂಜಿನ್‌ಗಳನ್ನು ಬಳಸಿ ಮಣ್ಣು ತೊಳೆಯಲಾಗುತ್ತಿದೆ. ದೇಹಕ್ಕೆ ತೀರಾ ಅಪಾಯಕಾರಿಯಾಗಿರುವ ಕೊಳಚೆಯಲ್ಲಿಯೇ ಅನೇಕ ಕಾರ್ಮಿಕರು ತಮ್ಮ ಆರೋಗ್ಯ ಲೆಕ್ಕಿಸದೆ ಇಡೀದಿನ ಕೊಳಚೆಯಲ್ಲಿಯೇ ಕೆಲಸ ನಿರ್ವಹಿಸುವುದು ಕಂಡುಬರುತ್ತಿದೆ. ಅಷ್ಟೇ ಅಲ್ಲ ಈ ಕೆಲಸ ಮಾಡುವುದು ಅಷ್ಟು ಸುಲಭವಲ್ಲ, ಸುತ್ತಲಿನ ಹಳ್ಳಿಗಳ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ. ಅಷ್ಟೇ ಅಲ್ಲ ದುರ್ವಾಸನೆ ಕಾರಣಕ್ಕೆ ಕಾರ್ಮಿಕರಿಗೆ ಮರಳು ದಂಧೆಕೋರರು ಮದ್ಯಪಾನದ ವ್ಯವಸ್ಥೆಯ ಮಾಡಿ ಕೊಳಚೆಗೆ ಇಳಿಸುತ್ತಾರೆ ಎಂಬ ಮಾಹಿತಿ ತಿಳಿದುಬಂದಿತು. ಮತ್ತು ಚರಂಡಿ ನೀರು ಹರಿಯದಂತೆ ಮಾಡಿದ್ದಾರೆ ಎಂದು ಜನ ದೂರಿದರು.
ಅಕ್ರಮಕ್ಕೆ ರಾಜಕಾರಣಿಗಳ ಶ್ರೀರಕ್ಷೆ: ಮರಳು ದಂಧೆಗೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ ಮದಲಟ್ಟಿ ಬಳಿಯ ನಿಡಶೇಸಿ ಕೆರೆಯಲ್ಲಿನ ಮಣ್ಣನ್ನು ಅಕ್ರಮವಾಗಿ ಬಗೆದು ಸಾಗಿಸಲಾಗುತ್ತಿದೆ ಎನ್ನಲಾಗಿದೆ.
ಕೆರೆಯಲ್ಲಿ ಮೇಲ್ಮಣ್ಣನ್ನು ತೆಗೆದು ಒಳಗೆ ಮರಳುಮಿಶ್ರಿತ ಮಣ್ಣನ್ನು ನಿರಂತರವಾಗಿ ಸಾಗಿಸಲಾಗುತ್ತಿದೆ. ಇದರಲ್ಲಿ ಮುಚ್ಚುಮರೆ ಇಲ್ಲ, ಆದರೆ ಅಕ್ರಮ ಚಟುವಟಿಕೆ ವ್ಯವಸ್ಥಿತವಾಗಿಯೇ ನಡೆಯುತ್ತಿದೆ. ದಂಧೆಕೋರರಿಗೆ ರಾಜಕೀಯ ಪಕ್ಷಗಳ ಮುಖಂಡರ ಶ್ರೀರಕ್ಷೆ ಇದೆ. ನಿಡಶೇಸಿ ಹಳೆಯ ರಸ್ತೆಯಲ್ಲಿ ಈದ್ಗಾ ಮೈದಾನ, ಸ್ಮಶಾನದ ದಾರಿಯೂ ಇದೆ. ರೈತರು ಹೊಲಗಳಿಗೆ ಹೋಗಿ ಬರುವುದಕ್ಕೆ ಅನುಕೂಲಕ್ಕೆಂದೆ ಸರ್ಕಾರ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಯನ್ನೇ ಮರಳು ಸಂಗ್ರಹಕ್ಕೆ ಬಳಸಿಕೊಂಡಿದ್ದಾರೆ ಎಂದು ಹೆಸರು ಬಹಿರಂಗಪಡಿಸದ ಸಾರ್ವಜನಿಕರು ಅಸಮಾಧಾನ ಹೊರಹಾಕಿದರು.
ಮರಳು ಫಿಲ್ಟರ್ ಅಕ್ರಮ ದಂಧೆ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ.-ಅಶೋಕ ಶಿಗ್ಗಾವಿ ತಹಶೀಲ್ದಾರ್
ಅಕ್ರಮ ಚಟುವಟಿಕೆ ನಡೆದಿದ್ದರೆ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುತ್ತೇವೆ.-ಯಶವಂತ ಬಿಸನಳ್ಳಿ ಸಿಪಿಐ.
ಸರ್ಕಾರಿ ಸಿಸಿ ರಸ್ತೆಯಲ್ಲಿಯೇ ಅಕ್ರಮವಾಗಿ ಮರಳು ಸಂಗ್ರಹಿಸಲಾಗುತ್ತಿದ್ದು ರೈತರು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದೆ.-ಹನುಮಂತಪ್ಪ ರೈತ
ಮರಳು ಸಾಗಿಸುವ ಟ್ರ್ಯಾಕ್ಟರ್‌ಗಳ ನಿರಂತರ ಓಡಾಟದಿಂದ ಸಾಕಾಗಿಹೋಗಿದೆ ಜಾನುವಾರಗಳ ಸಾಕಣೆಯೂ ಕಷ್ಟವಾಗಿದೆ.-ಅಲ್ತಾಫ್ ಮಾಟಲದಿನ್ನಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.