ADVERTISEMENT

ಕೊಪ್ಪಳ | ಕಾರ್ಖಾನೆಗಳ ವಿಸ್ತರಣೆಗೆ ವಿರೋಧ: ಗಾಂಧಿ ಬಳಗದ ಮೌನ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 7:15 IST
Last Updated 24 ನವೆಂಬರ್ 2025, 7:15 IST
ಕೊಪ್ಪಳದಲ್ಲಿ ಭಾನುವಾರ ಜಂಟಿ ಕ್ರಿಯಾ ವೇದಿಕೆ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಗಾಂಧಿ ಬಳಗದ ಸದಸ್ಯರು ಉಪವಾಸ ಹಾಗೂ ಮೌನ ಸತ್ಯಾಗ್ರಹ ಮಾಡಿದರು  
ಕೊಪ್ಪಳದಲ್ಲಿ ಭಾನುವಾರ ಜಂಟಿ ಕ್ರಿಯಾ ವೇದಿಕೆ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಗಾಂಧಿ ಬಳಗದ ಸದಸ್ಯರು ಉಪವಾಸ ಹಾಗೂ ಮೌನ ಸತ್ಯಾಗ್ರಹ ಮಾಡಿದರು     

ಕೊಪ್ಪಳ: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆಗೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿ ಜಿಲ್ಲಾ ಬಚಾವೊ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ಜಂಟಿ ಕ್ರಿಯಾ ವೇದಿಕೆ ನಗರದಲ್ಲಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಭಾನುವಾರ 24ನೇ ದಿನಗಳನ್ನು ಪೂರ್ಣಗೊಳಿಸಿತು.

ಬಲ್ಡೋಟಾ, ಕಿರ್ಲೋಸ್ಕರ್‌, ಕಲ್ಯಾಣಿ, ಮುಕುಂದ ಸುಮಿ ಹಾಗೂ ಎಕ್ಸ್ಇಂಡಿಯಾ ಸೇರಿದಂತೆ ಇತರೆ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಧರಣಿಗೆ ಭಾನುವಾರ ಗಾಂಧಿ ಬಳಗದ ಸದಸ್ಯರು ನೈತಿಕ ಬೆಂಬಲ ವ್ಯಕ್ತಪಡಿಸಿ ಬೆಳಿಗ್ಗೆಯಿಂದ ಸಂಜೆ ತನಕ ಮೌನವಾಗಿ ಉಪವಾಸ ಸತ್ಯಾಗ್ರಹ ಮಾಡಿದರು.

ಧರಣಿ ಸ್ಥಳಕ್ಕೆ ಬರುವ ಮೊದಲು ಇಲ್ಲಿನ ತಾಲ್ಲೂಕು ಪಂಚಾಯಿತಿ ಬಳಿಯ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮೆರವಣಿಗೆ ಮೂಲಕ ಶ್ವೇತವಸ್ತ್ರಧಾರಿಗಳಾಗಿ ಬಂದು ರಾಷ್ಟ್ರಧ್ವಜ ಬಣ್ಣದ ಖಾದಿ ನೂಲಿನ ಹಾರ ಧರಿಸಿದರು.

ADVERTISEMENT

ಉಪವಾಸ ಮಾಡಿದ ಕೃಷಿ ಬರಹಗಾರ ಆನಂದತೀರ್ಥ ಪ್ಯಾಟಿ ಮಾತನಾಡಿ ‘ಮನುಷ್ಯ ಅಥವಾ ಜಿಲ್ಲೆಯ ಧಾರಣ ಸಾಮರ್ಥ್ಯ ಪರೀಕ್ಷಿಸಿ ಅದರ ಮೇಲೆ ಭಾರ ಹಾಕಬೇಕು. ಆದರೆ ಜಿಲ್ಲೆಯಲ್ಲಿ ಧಾರಣ ಸಾಮರ್ಥ್ಯ ಪರೀಕ್ಷಿಸದೆ ಮೇಲಿಂದ ಮೇಲೆ ಕೈಗಾರಿಕೆಗಳನ್ನು ತರಲಾಗುತ್ತಿದೆ. ಮುಂದಿನ ದಿನಗಳಲ್ಲಿಯಾದರೂ ನೆಲ, ಜಲ, ಜಾನುವಾರು ಮತ್ತು ಪರಿಸರಕ್ಕೆ ಹಾನಿ ಉಂಟು ಮಾಡುವ ಕಾರ್ಖಾನೆಗಳಿಗೆ ಅನುಮತಿ ಕೊಡಬಾರದು’ ಎಂದು ಆಗ್ರಹಿಸಿದರು.

ಆನಂದತೀರ್ಥ ಪ್ಯಾಟಿ, ಬಸವರಾಜ್ ಸವಡಿ, ಶಿವಪ್ಪ ಹಡಪದ, ಮೌನೇಶ್ ಹೊಸಕೇರಿ, ನಿವೃತ್ತ ಮುಖ್ಯ ಶಿಕ್ಷಕ ಯುವರಾಜ್ ಬಡಿಗೇರ, ಭೀಮಪ್ಪ ಹೂಗಾರ, ವೆಂಕಪ್ಪ ಕಟ್ಟಿ ಉಪವಾಸ ಸತ್ಯಾಗ್ರಹ ಮಾಡಿದರೆ, ಮಲ್ಲನಗೌಡ, ಈರಣ್ಣ ಬಡಿಗೇರ, ಬಸವಂತಪ್ಪ ಆಡೂರು, ಕೆ.ಬಿ. ಗೋನಾಳ, ಮಹಾಂತೇಶ ಕೊತಬಾಳ ಸೇರಿದಂತೆ ಅನೇಕರು ಮೌನ ಪ್ರತಿಭಟನೆ ನಡೆಸಿದರು. ಎಲ್ಲರಿಗೂ ಸಂಜೆ ಎಳೆನೀರು ಕುಡಿಯುವ ಮೂಲಕ ಉಪವಾಸ ಮುಗಿಸಿದರು. ಕ್ರಿಯಾ ವೇದಿಕೆಯ ಪದಾಧಿಕಾರಿಗಳು ಹೋರಾಟದಲ್ಲಿ ಭಾಗಿಯಾಗಿದ್ದರು.

ಗಾಂಧೀಜಿ ಬ್ರಿಟಿಷರನ್ನು ಓಡಿಸಲು ಯಾವುದೇ ಶಸ್ತ್ರಾಸ್ತ್ರಗಳನ್ನು ಹಿಡಿಯಲಿಲ್ಲ. ಅವರು ಅಹಿಂಸಾ ಅಸ್ತ್ರದಿಂದ ಬ್ರಿಟಿಷರು ಕಾಲು ಕೀಳುವಂತೆ ಹೋರಾಡಿದರು. ನಮ್ಮ ಹೋರಾಟವೂ ಶಾಂತಿಯುತವಾಗಿಯೇ ಇರುತ್ತದೆ.
ಅಲ್ಲಮಪ್ರಭು ಬೆಟ್ಟದೂರು ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕ  
ದೊಡ್ಡ ಕೈಗಾರಿಕೆಗಳು ಪರಿಸರ ಮಾಲಿನ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುವುದು. ನವೀನ ತಂತ್ರಜ್ಞಾನ ಇದ್ದರೂ ಅಳವಡಿಸಿಕೊಳ್ಳುವುದಿಲ್ಲ. ಜನಬೆಂಬಲ ಇರುವ ಚಳವಳಿ ಹೆಚ್ಚಾಗಬೇಕು.
ಬಸವರಾಜ ಸವಡಿ ಗಾಂಧಿ ಬಳಗದ ಪ್ರಮುಖರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.