
ಗಂಗಾವತಿ ತಾಲ್ಲೂಕಿನ ಹಿರೇಜಂತಕಲ್, ಮಲ್ಲಾಪುರ ಭಾಗದಲ್ಲಿ ಹವಮಾನ ವೈಪರೀತ್ಯದಿಂದ ಹಾಳಾದ ಭತ್ತದ ಬೆಳೆಗಳ ಸ್ಥಳಕ್ಕೆ ಶಾಸಕ ಜಿ.ಜನಾರ್ದನರೆಡ್ಡಿ ಭೇಟಿ ನೀಡಿ, ಪರಿಶೀಲಿಸಿದರು.
ಗಂಗಾವತಿ: ತಾಲ್ಲೂಕಿನ ಹಿರೇಜಂತಕಲ್ ಮತ್ತು ಮಲ್ಲಾಪುರ ಭಾಗದಲ್ಲಿ ಮಳೆಯಿಂದಾಗಿ ಹಾಳಾದ ಭತ್ತದ ಹೊಲಗಳಿಗೆ ಶಾಸಕ ಜಿ.ಜನಾರ್ದನರೆಡ್ಡಿ ಭೇಟಿ ನೀಡಿ, ಪರಿಶೀಲಿಸಿದರು. ನಷ್ಟದ ಕುರಿತು ರೈತರಿಂದ ಮಾಹಿತಿ ಪಡೆದರು.
ನಂತರ ಮಾತನಾಡಿ, ‘ಹವಾಮಾನ ವೈಪರಿತ್ಯದಿಂದ ಭತ್ತದ ಬೆಳೆಗಳು ಹಾಳಾಗಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಸೂಕ್ತ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ತಾಲ್ಲೂಕು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹಾನೀಯ ವರದಿ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪ್ರಾಮಾಣಿಕವಾಗಿ ಯತ್ನಿಸುತ್ತೇನೆ’ ಎಂದು ಹೇಳಿದರು.
ಇನ್ನೂ ತಾಲ್ಲೂಕು ಆಡಳಿತದ ಸಂಬಂಧಪಟ್ಟ ಅಧಿಕಾರಿಗಳು ಭತ್ತದ ಗದ್ದೆಗಳಿಗೆ, ಬೆಳೆ ನಷ್ಟದ ಬಗ್ಗೆ ವರದಿ ಮಾಡಿಕೊಳ್ಳಬೇಕು. ಬೆಳೆ ನಷ್ಟ ವರದಿ ರಚನೆಯಲ್ಲಿ ಯಾವೊಬ್ಬ ರೈತನು ತಪ್ಪಿಹೋಗಿರಬಾರದು. ಈ ಬಗ್ಗೆ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಬೇಕು’ ಎಂದು ಹೇಳಿದರು.
ಒಂದು ವಾರದಿಂದ ತಾಲ್ಲೂಕಿನಲ್ಲಿ ಬಿಟ್ಟು, ಬಿಟ್ಟು ಮಳೆ ಸುರಿಯುತ್ತಿದೆ. ಗಾಳಿ ಬೀಸುತ್ತಿದ್ದು, ಬಹುತೇಕ ಭತ್ತದ ಬೆಳೆ ನೆಲಕಚ್ಚಿ, ನೆಲ್ಲು ಮೊಳಕೆ ಒಡೆದಿವೆ. ಇದರಿಂದ ರೈತರು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಕಟಾವಿಗೆ ಬಂದ ಭತ್ತದ ಬೆಳೆಗಳು ಕಂಡು ರೈತರು ಕಣ್ಣಿರು ಹಾಕುತ್ತಿದ್ದಾರೆ.
ತಹಶೀಲ್ದಾರ್ ಯು.ನಾಗರಾಜ, ನಗರಸಭೆ ಸದಸ್ಯ ಪರಶುರಾಮ ಮಡ್ಡೇರ, ಎಸ್.ರಾಘವೇಂದ್ರ ಶ್ರೇಷ್ಠಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಚಂದ್ರ ಹೀರೂರ, ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ. ಆಗೋಲಿ, ಮುಖಂಡರಾದ ಮನೋಹರಗೌಡ ಹೇರೂರು, ವೀರೇಶ ಬಲ್ಕುಂದಿ, ವಲೀಸಾಬ ವಿಶ್ವನಾಥ ಗಂಜಿಪೇಟೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.