ADVERTISEMENT

ಗಂಗಾವತಿ: ಹನುಮಮಾಲಾ ಧರಿಸಿದ ಶಾಸಕ ಜಿ. ಜನಾರ್ದನರೆಡ್ಡಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2023, 16:11 IST
Last Updated 22 ಡಿಸೆಂಬರ್ 2023, 16:11 IST
ಗಂಗಾವತಿ ತಾಲ್ಲೂಕಿನ ಪಂಪಾಸರೋವರದಲ್ಲಿ ಶುಕ್ರವಾರ ಶಾಸಕ ಜಿ.ಜನಾರ್ದನರೆಡ್ಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹನುಮಮಾಲಾ ಧರಿಸಿದರು.
ಗಂಗಾವತಿ ತಾಲ್ಲೂಕಿನ ಪಂಪಾಸರೋವರದಲ್ಲಿ ಶುಕ್ರವಾರ ಶಾಸಕ ಜಿ.ಜನಾರ್ದನರೆಡ್ಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹನುಮಮಾಲಾ ಧರಿಸಿದರು.   

ಗಂಗಾವತಿ: ತಾಲ್ಲೂಕಿನ ಪಂಪಾಸರೋವರ ದೇವಸ್ಥಾನದಲ್ಲಿ ಶುಕ್ರವಾರ ಧಾರ್ಮಿಕ ವಿಧಿ-ವಿಧಾನ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಶಾಸಕ ಜಿ.ಜನಾರ್ದನರೆಡ್ಡಿ ಅವರು ಹನುಮ ಮಾಲೆಯನ್ನು ಧರಿಸಿದರು. ನಂತರ ಅಂಜನಾದ್ರಿ ಬೆಟ್ಟದ ಆಂಜನೇಯ ಪಾದಗಟ್ಟೆಯ ಬಳಿಗೆ ತೆರಳಿ, ಆಂಜನೇಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದು, ಪೂರ್ವ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ ವರ್ಷ ಹನುಮಮಾಲಾ ಧರಿಸಿ, ಆಂಜನೇಯನ ಮತ್ತು ಗಂಗಾವತಿ ಜನರ ಆಶೀರ್ವಾದದಿಂದ ಗಂಗಾವತಿ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆಂಜನೇಯನ ಆರ್ಶಿವಾದ ಸದಾ ನನ್ನ ಮೇಲಿದ್ದು, ಅಂಜನಾದ್ರಿಬೆಟ್ಟ ಮತ್ತು ಕ್ಷೇತ್ರದ ಅಭಿವೃದ್ಧಿ ಶ್ರಮಿಸುತ್ತೇನೆ ಎಂದು ಹೇಳಿದರು.

ಲೋಕಸಭೆ ಚುನಾವಣೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಜನವರಿ 11ರಂದು ಕೊಪ್ಪಳದಲ್ಲಿ 6 ಜಿಲ್ಲೆಯ ಕೆಆರ್‌ಪಿಪಿ ಕಾರ್ಯಕರ್ತರನ್ನು ಒಳಗೊಂಡಂತಹ ಬೃಹತ್ ಸಭೆ ಆಯೋಜಿಸಿ, ಎಲ್ಲರಿಂದ ಮಾಹಿತಿ ಪಡೆದು, ನಂತರ 5ರಿಂದ 6 ಕ್ಷೇತ್ರಗಳಲ್ಲಿ ಲೋಕಸಭೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇನೆ. ಸ್ಪರ್ಧೆಗಿಳಿದ ನಂತರ ಯಾವ ಪಕ್ಷದ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ನಾನಾಗಲಿ, ನನ್ನ ಕುಟುಂಬಸ್ಥರಾಗಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಮಾಹಿತಿ ನೀಡಿದರು.

ADVERTISEMENT

ಬಳ್ಳಾರಿ ಜಿಲ್ಲಾಧ್ಯಕ್ಷ ದಮ್ಮೂರ ಶೇಖರ, ಜಿಲ್ಲಾಧ್ಯಕ್ಷ ಸಂಗಮೇಶ ಬಾದಾವಾಡಗಿ, ಯಮನೂರು ಚೌಡಕಿ, ನಾಗರಾಜ ಚಳಗೇರಿ, ವೀರೇಶ ಬಲಕುಂದಿ, ಆನಂದಗೌಡ, ಬಸವರಾಜ ಇದ್ದರು.

ಅಂಜನಾದ್ರಿ ಸುತ್ತ ಮದ್ಯ ನಿಷೇಧ ಆದೇಶ:

ಗಂಗಾವತಿ ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಅಂಜನಾದ್ರಿ ಬೆಟ್ಟದಲ್ಲಿ ಡಿ. 22ರಿಂದ 24ರವರೆಗೆ ಹನುಮಮಾಲಾ ವಿಸರ್ಜನೆಯ ಕಾರ್ಯಕ್ರಮಗಳು ಜರುಗಲಿದ್ದು, ಅಂಜನಾದ್ರಿ ಸುತ್ತಮುತ್ತ 10 ಕಿ.ಮೀ ಅಂತರದಲ್ಲಿ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಹನುಮಮಾಲಾ ವಿಸರ್ಜನೆಯ ನಿಮಿತ್ತ ಅಂಜನಾದ್ರಿಯಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಶಾಂತಿ ಪಾಲನೆಗಾಗಿ, ಅಹಿತಕರ ಘಟನೆ ನಡೆಯದಂತೆ ತಡೆಯಲು ಜಿಲ್ಲಾಧಿಕಾರಿ ನಲೀನ್‌ ಅತುಲ್ ಅವರು ಅಂಜನಾದ್ರಿ ಸುತ್ತ 3 ದಿನ ಮದ್ಯ ಮಾರಾಟಕ್ಕೆ ನಿಷೇಧ ಹೇರಿ, ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.