ಕುಕನೂರು: ‘ಗ್ರಾಮ ಮಟ್ಟದಲ್ಲಿರುವ ಅಧಿಕಾರಿಗಳು, ಗ್ರಾಮಸ್ಥರ ಅಹವಾಲುಗಳಿಗೆ ತ್ವರಿತವಗಿ ಸ್ಪಂದಿಸಬೇಕು. ಅದಕ್ಕಾಗಿ ಸರ್ಕಾರ ಜನಸ್ಪಂದನ ಜಾರಿಗೊಳಿಸಿದೆ. ಜನರ ಅಹವಾಲುಗಳಿಗೆ ಸ್ಪಂದಿಸಲು ಜಿಲ್ಲಾಡಳತವು ಗ್ರಾಮಸ್ಥರ ಮನೆ ಬಾಗಿಲಿಗೆ ಬಂದಿದೆ’ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ತಾಲ್ಲೂಕಿನ ಮಂಗಳೂರ ಗ್ರಾಮದ ಬಾಪೂಜಿ ಡಿ.ಇಡಿ ಕಾಲೇಜಿನ ಆವರಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
‘ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕಾಲಕಾಲಕ್ಕೆ ಸಭೆ ನಡೆಸಿ, ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಕ್ರಮಕೈಗೊಳ್ಳಲಾಗುತ್ತದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸರ್ಕಾರದ ನಿರ್ದೇಶನದಂತೆ ಗ್ರಾಮ ಮತ್ತು ಹೋಬಳಿಗೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ತೆರಳಿ ಜನಸ್ಪಂದನ ನಡೆಸಿ ಗ್ರಾಮಸ್ಥರ ಅಹವಾಲು ಆಲಿಸಲಾಗುತ್ತದೆ’ ಎಂದು ತಿಳಿಸಿದರು.
‘ತಾಲ್ಲೂಕಿನ ಕುಕನೂರು 23,781 ಹಾಗೂ ಮಂಗಳೂರ ಹೋಬಳಿಯಲ್ಲಿ 8,026 ಜನರು ಜಿಲ್ಲೆಗೆ ಅನ್ನಭಾಗ್ಯ ಯೋಜನೆಯಡಿ ಜುಲೈ 2023ರಿಂದ ಏಪ್ರಿಲ್ 2024ರವರೆಗೆ ಅರ್ಹ ಫಲಾನುಭವಿಗಳಿಗೆ ಅನುದಾನವನ್ನು ಡಿಬಿಟಿ ತಂತ್ರಾಂಶದ ಮೂಲಕ ವರ್ಗಾಯಿಸಲಾಗಿದೆ’ ಎಂದು ತಿಳಿಸಿದರು.
ರೈತರಲ್ಲಿ ಮನವಿ: ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್ ಮಾತನಾಡಿ, ‘ಜುಲೈ 31ರೊಳಗೆ ಖುದ್ದು ರೈತರು ಅಥವಾ ಖಾಸಗಿ ನಿವಾಸಿಗಳ ಮೂಲಕ ಬೆಳೆ ಸಮೀಕ್ಷೆಯನ್ನು ಕಡ್ಡಾಯವಾಗಿ ಆ್ಯಪ್ ಮೂಲಕ ಮಾಡಿಕೊಳ್ಳಬೇಕು. ಬೆಳೆ ಪರಿಹಾರ, ಬೆಳೆ ವಿಮೆ, ಬೆಂಬಲ ಬೆಲೆ ಬ್ಯಾಂಕ್‌ನ ಬೆಳೆ ಸಾಲ ಪಡೆಯಲು ಈ ಬೆಳೆ ಸಮೀಕ್ಷೆಯ ಡಾಟಾ ಅತೀ ಅವಶ್ಯವಾಗಿರುತ್ತದೆ’ ಎಂದು ಮನವಿ ಮಾಡಿದರು.
ಮನವಿಗಳು: ಕುಕನೂರು- ಮಂಗಳೂರ ಮತ್ತು ಮಂಗಳೂರ- ಮುಂಡರಗಿಗೆ ಹೆಚ್ಚುವರಿ ಬಸ್ ಓಡಿಸಬೇಕು ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ಮುಸ್ಲಿಂ ಸಮುದಾಯಕ್ಕೆ ಖಬರಸ್ಥಾನ ಬೇಕು ಎಂದು ಅಂಜುಮನ್ ಸಮಿತಿ ಅಧ್ಯಕ್ಷರು, ಭೂಮಿ ಮಂಜೂರಿ ಮಾಡಬೇಕು ಎಂದು ನಬಿಸಾಬ ಹುಸೇನಸಾಬ, ಆಶ್ರಯ ಯೋಜನೆಯಡಿ ಮನೆ ಮಂಜೂರಿ ಮಾಡಬೇಕು ಎಂದು ಲಲಿತಮ್ಮ ಪೂಜಾರ, ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ರಸ್ತೆ ನಿರ್ಮಿಸಿಕೊಡುವ ಬಗ್ಗೆ ಉಮಚಗಿಯ ಗವಿಸಿದ್ದಪ್ಪ ಛಟ್ಟಿ ಮನವಿ ಸಲ್ಲಿಸಿದರು.
ಪೂರ್ವ ಮುಂಗಾರು ಬರ ಘೋಷಣೆ ಮಾಡಬೇಕು ಎಂದು ಶರಣಪ್ಪ ಬಸಪ್ಪ, ಕೆಪಿಎಸ್ ಶಾಲೆಯ ಶಾಲಾ ಸುಧಾರಣಾ ಸಮಿತಿ, ಗ್ರಾಮದಲ್ಲಿ ಹೋಬಳಿ ಮಟ್ಟದ ಕ್ರೀಡಾಂಗಣ ನಿರ್ಮಿಸಬೇಕು ಎಂದು ಮಂಜುನಾಥ ವಿವೇಕಿ, ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಸ್ಥಳ ನಿಗದಿ ಮಾಡಬೇಕು ಎಂದು ಜಾವೇದ್ ಬಾಷಾಸಾಬ್, ಡಾ.ಅಂಬೇಡ್ಕರ್ ವೃತ್ತವನ್ನು ಅಗಲೀಕರಣ ಮಾಡಬೇಕು ಎಂದು ಮರಿಸ್ವಾಮಿ ಪೂಜಾರ, ಗಂಗಾ ಕಲ್ಯಾಣ ಯೋಜನೆಯ ಜಮೀನಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮನವಿ ಸಲ್ಲಿಸಿದರು.
ಪ್ರಾಣಿವಧೆ ತಡೆಯಿರಿ: ಹುಲಿಗಿ ಸೇರಿದಂತೆ ವಿವಿಧೆಡೆ ಅವ್ಯಾಹತವಾಗಿ ನಡೆಯುವ ಪ್ರಾಣಿವಧೆಯನ್ನು ತಡೆಯಬೇಕು ಎಂದು ಮುಖಂಡರಾದ ಎಂ.ಬಿ.ಅಳವಂಡಿ ಅವರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಒಟ್ಟು 187 ಅರ್ಜಿಗಳು ಸಾರ್ವಜನಿಕರಿಂದ ವಿವಿಧ ಇಲಾಖೆಗಳಿಗೆ ಕಾರ್ಯಕ್ರಮದಲ್ಲಿ ಸ್ವೀಕಾರವಾಗಿವೆ.
ಜಿ.ಪಂ ಸಿಇಒ ರಾಹುಲ್ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್.ಅರಸಿದ್ದಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಶೀಲ್ದಾರ್ ಪ್ರಾಣೇಶ, ತಾ.ಪಂ ಇಒ ಸಂತೋಷ ಬಿರಾದಾರ ಪಾಟೀಲ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.