ADVERTISEMENT

ಖಾಸಗಿಯವರ ವಶಕ್ಕೆ ಡಾ.ರಾಜ್ ಕಲ್ಯಾಣ ಮಂಟಪ

ಕುಷ್ಟಗಿ ಪುರಸಭೆ ನಿರ್ಧಾರಕ್ಕೆ ಸಾರ್ವಜನಿಕರ ವಿರೋಧ

​ಪ್ರಜಾವಾಣಿ ವಾರ್ತೆ
Published 28 ಜನವರಿ 2022, 12:10 IST
Last Updated 28 ಜನವರಿ 2022, 12:10 IST
ಕುಷ್ಟಗಿ ಪುರಸಭೆಗೆ ಸೇರಿದ ಡಾ.ರಾಜ್‌ಕುಮಾರ್‌ ಕಲ್ಯಾಣ ಮಂಟಪ
ಕುಷ್ಟಗಿ ಪುರಸಭೆಗೆ ಸೇರಿದ ಡಾ.ರಾಜ್‌ಕುಮಾರ್‌ ಕಲ್ಯಾಣ ಮಂಟಪ   

ಕುಷ್ಟಗಿ: ಇಲ್ಲಿಯ ಡಾ.ರಾಜ್‌ಕುಮಾರ್ ಹೆಸರಿನ ಕಲ್ಯಾಣ ಮಂಟಪವನ್ನು ಪುರಸಭೆ ಆಡಳಿತ ಮಂಡಳಿ ಶಾಶ್ವತ ವ್ಯಾಪಾರ ಮಳಿಗೆಯನ್ನಾಗಿಸುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಮೂಲ ಆಶಯದಂತೆ ಈ ಹಿಂದೆ ಈ ಕಟ್ಟಡವನ್ನು ಕಲೆ, ಸಾಹಿತ್ಯ, ಸಾಂಸ್ಕೃತಿಕ, ಸಾರ್ವಜನಿಕ, ಸರ್ಕಾರದ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ವಿವಿಧ ಇಲಾಖೆಗಳು ಮತ್ತು ಇಲ್ಲಿಯ ಸಂಘ ಸಂಸ್ಥೆಗಳು ಬಳಕೆ ಮಾಡಿಕೊಳ್ಳುತ್ತಿದ್ದವು. ವಾಣಿಜ್ಯ ಉದ್ದೇಶ ಹೊಂದಿರದ ಕಾರಣಕ್ಕೆ ಈ ಕಟ್ಟಡಕ್ಕೆ ವಿವಿಧ ಸಂಘಟನೆಗಳ ಬೇಡಿಕೆಯಂತೆ ಡಾ.ರಾಜ್‌ಕುಮಾರ್ ಅವರ ಹೆಸರು ಇಡಲಾಗಿದೆ.

ಆದರೆ ಕೆಲ ವರ್ಷಗಳಿಂದ ಮೂಲ ಉದ್ದೇಶವನ್ನೇ ಮರೆತು ಅಂಗಡಿ ಮುಂಗಟ್ಟುಗಳಿಗೆ ಬಾಡಿಗೆ ನೀಡುವ ಮೂಲಕ ಈ ಕಟ್ಟಡವನ್ನೂ ಪುರಸಭೆ ತನ್ನ ಆದಾಯ ಮೂಲವನ್ನಾಗಿಸಿಕೊಂಡಿದೆ. ಇದಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ಸಾರ್ವಜನಿಕರು ಪುರಸಭೆಗೆ ಅಷ್ಟೊಂದು ಬಡತನ ಬಂದಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ.

ADVERTISEMENT

ಸಾರ್ವಜನಿಕರ ತೆರಿಗೆ ಹಣದಲ್ಲಿ ಈಗ ಮತ್ತೆ ಕಟ್ಟಡವನ್ನು ಸುಣ್ಣ ಬಣ್ಣದಿಂದ ಅಂದಗೊಳಿಸಿರುವ ಪುರಸಭೆ ಬಟ್ಟೆ ಅಂಗಡಿ ಇಟ್ಟುಕೊಳ್ಳುವುದಕ್ಕೆ ಬಾಡಿಗೆ ಒಪ್ಪಂದ ಮಾಡಿಕೊಂಡಿದೆ. ವಾಣಿಜ್ಯ ಬಳಕೆಗೆ ನೀಡುವುದಕ್ಕೆ ಸಾರ್ವಜನಿಕರ ವಿರೋಧವಿದ್ದರೂ ಪುರಸಭೆ ಅದನ್ನು ಲೆಕ್ಕಿಸದೆ ವ್ಯಾಪಾರಿಗಳಿಗೆ ವಹಿಸುವ ಮೂಲಕ ಮೂಲ ಆಶಕ್ಕೆ ಧಕ್ಕೆ ತಂದಿದೆ. ಇದಕ್ಕೆ ಪುರಸಭೆಯ ಕೆಲ ಸದಸ್ಯರ ಕುಮ್ಮಕ್ಕು ಇದೆ ಎಂದು ಜನರು ಆರೋಪಿಸಿದರು.

ಬಾಡಿಗೆ ಒಪ್ಪಂದ ಮಾಡಿಕೊಂಡಿರುವ ವ್ಯಾಪಾರಿಯೊಬ್ಬರು ಕಟ್ಟಡದಲ್ಲಿ ಬಟ್ಟೆ ಅಂಗಡಿಗೆ ಅಗತ್ಯವಾದ ರೀತಿಯಲ್ಲಿ ಶಾಶ್ವತ ರೀತಿಯಲ್ಲಿ ಫ್ಲೈವುಡ್ ಮೂಲಕ ಒಳ ವಿನ್ಯಾಸ ಮಾಡಿಕೊಳ್ಳುತ್ತಿರುವುದು ಕಂಡುಬಂದಿತು. ಅಲ್ಲದೆ ಕಟ್ಟಡದ ಚಾವಣಿ ಅನೇಕ ಬಾರಿ ಲಕ್ಷಾಂತರ ವೆಚ್ಚದಲ್ಲಿ ದುರಸ್ತಿಗೊಳಿಸುತ್ತ ಬಂದಿದ್ದರೂ ಮಳೆ ಬಂದರೆ ಮತ್ತೆ ನೀರು ಒಳಗೆ ಇಳಿಯುತ್ತದೆ ಎಂದು ತಿಳಿಸಲಾಗಿದೆ.

ದ್ವಂದ್ವ ಹೇಳಿಕೆ: ಈ ವಿಷಯದ ಕುರಿತು ಮಾಹಿತಿಗಾಗಿ ಸಂಪರ್ಕಿಸಿದರೆ ಇನ್ನೂ ಯಾರಿಗೂ ಬಾಡಿಗೆ ನೀಡುವ ವಿಚಾರ ಮಾಡಿಲ್ಲ ಎಂದು ಮುಖ್ಯಾಧಿಕಾರಿ ಉಮೇಶ ಹಿರೇಮಠ ಹೇಳಿದರು. ಆದರೆ ಈಗಾಗಲೇ ವ್ಯಾಪಾರಿಯೊಬ್ಬರೊಂದಿಗೆ ಒಂದು ವರ್ಷದ ಅವಧಿಗೆ ಬಾಡಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ನೈರ್ಮಲ್ಯ ನಿರೀಕ್ಷಕ ಮಹೇಶ ಅಂಗಡಿ ಸ್ಪಷ್ಟಪಡಿಸಿದರು.

ಒಳ ವಿನ್ಯಾಸಕ್ಕೆ ಲಕ್ಷಾಂತರ ಹಣ ಖರ್ಚು ಮಾಡಿರುವ ವ್ಯಾಪಾರಿ ಒಂದೇ ವರ್ಷದಲ್ಲಿ ಮಳಿಗೆ ಖಾಲಿ ಮಾಡಲು ಸಾಧ್ಯವೇ ಎಂಬುದಕ್ಕೆ ‘ಆ ರೀತಿಯಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದ್ದು, ವರ್ಷದ ನಂತರ ಕಟ್ಟಡ ಖಾಲಿ ಮಾಡಲೇಬೇಕು’ ಎಂದು ಮಹೇಶ ವಿವರಿಸಿದರು.

ಮಳಿಗೆ ಬಾಡಿಗೆ ನೀಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಪ್ರಮುಖ ಮುತ್ತಣ್ಣ ಬಾಚಲಾಪುರ, ಪುರಸಭೆಗೆ ಆದಾಯಕ್ಕೆ ಪಟ್ಟಣದಲ್ಲಿ ಸಾಕಷ್ಟು ಮೂಲಗಳಿವೆ. ಆದರೂ ಈ ಕಟ್ಟಡವನ್ನೂ ಕೂಡ ಸಾರ್ವಜನಿಕರ ಅನುಕೂಲಕ್ಕೆ ಬಿಡದೆ ಬಾಡಿಗೆ ನೀಡುತ್ತಿರುವುದು ಸರಿಯಲ್ಲ. ಮೂಲ ಸೌಕರ್ಯ ಕಲ್ಪಿಸಿ ಸಾರ್ವಜನಿಕರು, ಕನ್ನಡಪರ ಕಾರ್ಯಕ್ರಮಗಳಿಗೆ ನೀಡಬೇಕು. ಸಾವಿರಾರು ರೂಪಾಯಿ ಬಾಡಿಗೆ ನೀಡಿ ಖಾಸಗಿ ಕಲ್ಯಾಣ ಮಂಟಪಗಳಲ್ಲಿ ಕಾರ್ಯಕ್ರಮ ನಡೆಸುವುದಕ್ಕೆ ಪಟ್ಟಣದ ಸಂಘ ಸಂಸ್ಥೆಗಳಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಕಟ್ಟಡವನ್ನು ಸಾರ್ವಜನಿಕ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಲು ಉಳಿಸಿಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.