
ಕನಕಗಿರಿ: ₹43 ಕೋಟಿ ಮೊತ್ತದ ರಾಜೀವಗಾಂಧಿ ಬಹುಗ್ರಾಮ ಶುದ್ದ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರದಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ಸಮೀಪದ ಸುಳೇಕಲ್ ಗ್ರಾಮದ ಬೃಹನ್ಮಠಕ್ಕೆ ಭಾನುವಾರ ಭೇಟಿ ನೀಡಿ ಭುವನೇಶ್ವರಯ್ಯ ಅವರ ಅಶೀರ್ವಾದ ಪಡೆದ ನಂತರ ಮಾತನಾಡಿದರು.
‘ಈ ಹಿಂದೆ ತಾವು ಸಚಿವರಾಗಿದ್ದ ಸಮಯದಲ್ಲಿ ಹುಲಿಹೈದರ ಹಾಗೂ 12 ಗ್ರಾಮಗಳು ಮತ್ತು ಹೇರೂರು ಹಾಗೂ14 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಶ್ರಮವಹಿಸಲಾಗಿದೆ. ಕಾಮಗಾರಿ ಪೂರ್ಣಗೊಂಡಿದ್ದು ಸೂಳೇಕಲ್ ಕೆರೆಗೆ ತುಂಗಾಭದ್ರ ಕಾಲುವೆ ಮೂಲಕ ಭರ್ತಿ ಮಾಡಲಾಗುತ್ತಿದೆ. ಆರು ತಿಂಗಳೊಳಗೆ ಲೋಕಾರ್ಪಣೆ ಮಾಡಲಾಗುವುದು’ ಎಂದು ಹೇಳಿದರು.
‘ಸುಳೇಕಲ್ ಗ್ರಾಮದ ಯಾತ್ರಿನಿವಾಸ ನಿರ್ಮಾಣಕ್ಕೆ ₹50 ಲಕ್ಷ ಅನುದಾನ ನೀಡಲಾಗಿತ್ತು. ಕಳೆದ ಅವಧಿಯ ಸರ್ಕಾರ ನಯಾಪೈಸೆ ನೀಡಿರಲಿಲ್ಲ. ಈಗ ₹25 ಲಕ್ಷ ಬಿಡುಗಡೆಯಾಗಿದೆ, ಕೆಲಸ ಆರಂಭಿಸಲಾಗುವುದು’ ಎಂದರು.
‘ಜನ್ಮ ಗ್ರಾಮದಲ್ಲಿ ಶಾದಿಮಹಲ್ ನಿರ್ಮಾಣ ಮಾಡಲಾಗುವುದು. 220 ಕೆವಿ ವಿದ್ಯುತ್ ಪೂರೈಕೆ ಕೇಂದ್ರದಿಂದ ಸುಳೇಕಲ್ ಗ್ರಾಮಕ್ಕೆ ಬರುವ ರಸ್ತೆಯನ್ನು ಡಾಂಬರೀಕರಣಗೊಳಿಸಲಾಗುವುದು. ಈಗಾಗಲೇ ಇಲ್ಲಿ ಬ್ರಿಡ್ಜ್ ಕಮ್ ಬ್ಯಾರೆಜ್ ಕಾಮಗಾರಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.
ಭುವನೇಶ್ವರಯ್ಯ ತಾತ, ಪ್ರಮುಖರಾದ ಸಿದ್ದನಗೌಡ ಕೆ, ಮಲ್ಲಿಕಾರ್ಜುನ ಗೌಡ ಪಾಟೀಲ, ಬಸಂತಗೌಡ ಪಾಟೀಲ, ಜಗದೀಶ ಅಂಗಡಿ, ವಿರೂಪಾಕ್ಷಗೌಡ, ಮೈನುಸಾಬ, ಬಸವರಾಜ ಅಂಗಡಿ, ಆರ್. ಮಲ್ಲಿಕಾರ್ಜುನ, ಅಜಮೀರ, ಮೈಬೂಬಸಾಬ, ಗಂಗಣ್ಣ, ವಿರುಪಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.