ADVERTISEMENT

ಬಿಜೆಪಿ ಶಾಸಕ ಬಸವರಾಜ ದಢೇಸೂಗೂರು ಧಮ್ಕಿ; ಮತ್ತೊಂದು ಆಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 13:30 IST
Last Updated 6 ಸೆಪ್ಟೆಂಬರ್ 2022, 13:30 IST
ಬಸವರಾಜ ದಢೇಸೂಗೂರು
ಬಸವರಾಜ ದಢೇಸೂಗೂರು   

ಕೊಪ್ಪಳ: ವ್ಯಕ್ತಿಯೊಬ್ಬರಿಗೆ ₹15 ಲಕ್ಷ ವಾಪಸ್‌ ಕೊಡುವ ಸಂಬಂಧ ನಡೆದ ಮಾತುಕತೆಯ ವೇಳೆ ಜಿಲ್ಲೆಯ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸೂಗೂರು ಹಣ ಕೊಡಬೇಕಾದ ವ್ಯಕ್ತಿಗೆ ಧಮ್ಕಿ ಹಾಕಿದ ಮತ್ತೊಂದು ಆಡಿಯೊ ಮಂಗಳವಾರ ವೈರಲ್‌ ಆಗಿದೆ.

ಮೊದಲ ಆಡಿಯೊದಲ್ಲಿ ನಿವೃತ್ತ ಪೊಲೀಸ್‌ ಪರಸಪ್ಪ ಶಾಸಕರಿಗೆ ಪೋನ್ ಮಾಡಿ ‘ನನ್ನ ಮಗನ ಪಿಎಸ್ಐ‌ ನೇಮಕಾತಿಗೆ ಕೊಟ್ಟ ₹15 ಲಕ್ಷ ಹಣ ವಾಪಸ್ ಕೊಡಿ’ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ದಢೇಸೂಗೂರು ‘ಹೌದು ನೀನು ದುಡ್ಡು ‌ಕೊಟ್ಟಿದ್ದೀಯಾ. ಅದನ್ನು ‌ಹೇಗೆ ಕೇಳಬೇಕು ಎನ್ನುವ ಸೌಜನ್ಯವಿಲ್ಲವಾ?’ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ಎರಡನೇ ಆಡಿಯೊದಲ್ಲಿ ದಢೇಸೂಗೂರು ’ಪ್ರೆಸ್‌ಮೀಟ್‌ ಮಾಡ್ತಿಯಾ, ದೊಡ್ಡವರ ಮುಂದೆ ಹೋಗಿ ಹೇಳ್ತಿಯಾ, ಹೇಳು ಹೋಗು’ ಎಂದಿದ್ದಾರೆ. ಅದಕ್ಕೆ ಅಕ್ಕಪಕ್ಕದಲ್ಲಿದ್ದವರು ‘ಪತ್ರಿಕಾಗೋಷ್ಠಿ ಮಾಡಿದರೆ ಶಾಸಕರ ಮರ್ಯಾದೆ ಏನಾಗುತ್ತದೆ ಎನ್ನುವುದನ್ನು ತಿಳಿದುಕೊಂಡು ಮಾತಾಡು’ ಎಂದು ಪರಸಪ್ಪನಿಗೆ ಹೇಳಿದ ಮಾತುಗಳು ಆಡಿಯೊದಲ್ಲಿ ದಾಖಲಾಗಿವೆ.

ADVERTISEMENT


ದಢೇಸೂಗೂರು ಹಾಗೂ ಪರಸಪ್ಪ ಸಂಭಾಷಣೆ

ಶಾಸಕ: ಏನಪ್ಪ ಪ್ರೆಸ್‌ಮೀಟ್‌ ಮಾಡ್ತೀನಿ ಅಂದೆಯಂತಲ್ಲ?

ಪರಸಪ್ಪ: ಪ್ರೆಸ್‌ಮೀಟ್‌ ಅಂತ ನಾನು ಹೇಳಿಲ್ಲ ಸರ್. ದೊಡ್ಡವರ ಹತ್ತಿರ ಹೋಗ್ತೀನಿ ಎಂದಿದ್ದೇನೆ ಅಷ್ಟೇ.

ಶಾಸಕ: ಯಾರಪ್ಪ ದೊಡ್ಡವರು?

ಪರಸಪ್ಪ: ದೊಡ್ಡನಗೌಡ್ರ (ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ), ಸಂಸದರ ಹತ್ರ ಹೋಗ್ತೀನಿ.

ಶಾಸಕ: ಹೋಗಬೇಕಾಗಿತ್ತು.

ಪರಸಪ್ಪ: ನನಗೆ ಕಷ್ಟ ಐತಿ. ಹೋಗಿ ಅಂದ್ರ ಹೋಗ್ತಿನಿ ಸರ್‌.

ಶಾಸಕ: ಏ ಬೇಕೂಪ್‌, ಯಾವಾನ್‌ ಜೊತೆ ಮಾತಾಡ್ತೀಯಾ? ನಾನೇನ್‌ ಹಣ ತೆಗೆದುಕೊಂಡು ಬಾ ಎಂದು ನಿನಗೆ ಹೇಳಿದ್ದೆನಾ. ಯಾರ ಮರ್ಯಾದೆ ಕಳೆಯಬೇಕು ಎಂದು ಮಾಡಿದ್ದೀಯಾ? ನಿನ್ನ ಒದಿತೀನಿ ನೋಡಲೇ. ಪ್ರೆಸ್‌ಮೀಟ್‌ ಮಾಡಿ ದೊಡ್ಡತನ ತೋರಿಸಬೇಕು ಅಂದುಕೊಂಡಿದ್ದೀಯಾ.

ಪರಸಪ್ಪ: ಸರ್‌, ನನಗೂ ರಾಜಕಾರಣ ಗೊತ್ತಿದೆ. ಎರಡು ವರ್ಷ ಹಣಕ್ಕಾಗಿ ನಿಮ್ಮ ಹತ್ತಿರ ಅಲೆದಾಡಿದ್ದೇನೆ. ಕೈ ಕಾಲು ಬಿದ್ದಿದ್ದೇನೆ.

ಶಾಸಕ: ಮಗನೇ ನಿನಗೆ ಓದಿತೀನಿ ನೋಡಿ. ಪ್ರೆಸ್‌ಮೀಟ್‌ ಮಾಡ್ತಿಯಾ?

ಪರಸಪ್ಪ: ನನಗೆ ಹೊಡಿತೀರಾ? ಹೊಡಿರೀ ನೋಡೊಣ. ನನಗೆ ಕಷ್ಟ ಇದೆ, ಕಾಲು ಬಿದ್ದು ಹಣ ವಾಪಸ್‌ ಕೊಡಿ ಅಂತ ಕೇಳಿದೀನಿ. ನಾನೂ ಪೊಲೀಸ್‌ ಇಲಾಖೆಯಲ್ಲಿ 30 ವರ್ಷ ಕೆಲಸ ಮಾಡಿ ಬಂದಿದ್ದೇನೆ. ನನಗೇ ಅವಾಚ್ಯ ಪದಗಳಿಂದ ಬೈಯ್ದರೆ ನಾನೇಕೆ ಕೇಳಲಿ. ದೊಡ್ಡನಗೌಡ್ರ ಅವರಿಂದ ಹೇಳಿಸಿದ್ದೇನೆ ಅಷ್ಟೇ.

ಶಾಸಕ: ನನ್ನ ಏನ್‌ ಕೇಳ್ತಿಯಾ. ನೀನು ಕೊಡೊ ಹಣದಿಂದ ನಾನು ಬದುಕುತ್ತೇನೆ ಅಂದುಕೊಂಡಿದ್ದಿಯಾ.

ಪರಸಪ್ಪ: ನನ್ನನ್ನು ಕರೆಯಿಸಿ ಹೊಡೆಯಬೇಕು ಎಂದು ಮಾಡಿದ್ದೀರಿ. ಹೊಡೆಯುವುದಾದರೆ ಹೊಡೆಯಿರಿ.

ಶಾಸಕ: ನಿನ್ನ ಹಣ ನಾನು ತಿಂದಿದ್ದೇನೆ ಅಂದುಕೊಂಡೆಯಾ? ಯಾರ ಹತ್ತಿರ ಬೇಕಾದರೂ ಹೋಗು. ಪ್ರೆಸ್‌ಮೀಟ್‌ ಮಾಡ್ತಿಯಾ, ಮಾಡು ಹೋಗು. ಒಂದು ಪೋಸ್ಟ್‌ ಕೇಳಿದಿಯಾ; ಹಣ ಬೇರೆಯವರ ಬಳಿಯಿದ್ದು ಬರಬೇಕಿದೆ. ಶಾಸಕನಾಗಿ ನೂರು ಜನರ ನೂರು ಕೆಲಸಗಳನ್ನು ಒಪ್ಪಿಕೊಂಡಿರುತ್ತೇನೆ. ಸಮಸ್ಯೆ ಇದೆ, ಹಣ ವಾಪಸ್‌ ಕೊಡಿ ಎಂದು ಕೇಳಿದರೆ ಒಂದೆರೆಡು ದಿನಗಳಲ್ಲಿ ಕೊಡುತ್ತಿದ್ದೆ.

ನನ್ನ ಪಾತ್ರ ಏನೂ ಇಲ್ಲ: ದಢೇಸೂಗೂರು

ಕೊಪ್ಪಳ: ‘ಸಮಾಜದ ಹಿರಿಯನಾಗಿ ಇಬ್ಬರ ನಡುವಿನ ಸಮಸ್ಯೆ ಪರಿಹರಿಸಲು ಹೋಗಿದ್ದೆ. ಅದನ್ನೇ ಕೆಲವರು ಆಡಿಯೊ ಮಾಡಿ ಹಂಚಿದ್ದಾರೆ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸೂಗೂರು ಮಂಗಳವಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಎರಡನೇ ಆಡಿಯೊ ಬಹಿರಂಗವಾದ ಕುರಿತು ಮಾತನಾಡಿ ‘ನನ್ನ ಅಧ್ಯಕ್ಷತೆಯಲ್ಲಿ ರಾಜಿ ಪಂಚಾಯಿತಿ ನಡೆದಿದೆ. ಕ್ಷೇತ್ರದ ಶಾಸಕನಾಗಿ ಸಮಸ್ಯೆ ಪ‍ರಿಹರಿಸಲು ಮುಂದಾಗಿದ್ದಕ್ಕೆ ಈಗ ನನ್ನ ಮೇಲೆ ಉಲ್ಟಾ ಬಿದ್ದಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.