ADVERTISEMENT

ಕನಕಗಿರಿ: ಪಟ್ಟಣ ಪಂಚಾಯಿತಿ ಸಭೆಯಲ್ಲಿ ನವಗ್ರಾಮ ನಿವೇಶನಗಳ ಕುರಿತು ಚರ್ಚೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 6:32 IST
Last Updated 10 ಡಿಸೆಂಬರ್ 2025, 6:32 IST
ಕನಕಗಿರಿ ಪಟ್ಟಣ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಅಧ್ಯಕ್ಷೆ ಹುಸೇನಬೀ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿ ಹಾಗೂ ಸದಸ್ಯರ ಮಧ್ಯೆ ಚರ್ಚೆ ನಡೆಯಿತು
ಕನಕಗಿರಿ ಪಟ್ಟಣ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಅಧ್ಯಕ್ಷೆ ಹುಸೇನಬೀ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿ ಹಾಗೂ ಸದಸ್ಯರ ಮಧ್ಯೆ ಚರ್ಚೆ ನಡೆಯಿತು   

ಕನಕಗಿರಿ: ಕಳೆದ 23 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕಲಕೇರಿ ರಸ್ತೆಯ ನವಗ್ರಾಮ ಯೋಜನೆಯ‌ ವಸತಿ ನಿವೇಶನಗಳನ್ನು ಅರ್ಹರಿಗೆ ವಿತರಣೆಗೆ ಸಾಮಾನ್ಯ ಸಭೆ‌‌ ನಿರ್ಧರಿಸಿತು.

ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹುಸೇನಬೀ ಚಳ್ಳಮರದ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಖಾಲಿ ನಿವೇಶನಗಳ ಕುರಿತು ಚರ್ಚೆ ನಡೆಯಿತು. ಇಲ್ಲಿ ಒಟ್ಟು 171 ನಿವೇಶನಗಳಿದ್ದು ಅದರಲ್ಲಿ 40 ನಿವೇಶನಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಿ ಆದೇಶ ಪ್ರತಿ ನೀಡಲಾಗಿದೆ. ಉಳಿದ ನಿವೇಶನಗಳು ಉಳ್ಳವರ ಪಾಲಾಗಿವೆ. ಹೀಗಾಗಿ 131 ನಿವೇಶನಗಳ ಹಂಚಿಕೆ ಕ್ರಮ ಸಮರ್ಪಕವಾಗಿಲ್ಲದ‌ ಪರಿಣಾಮ ರದ್ದುಗೊಳಿಸಿ ಬಡವರು, ಅರ್ಹರಿಗೆ ನಿವೇಶನ ಹಂಚಿಕೆ ಮಾಡಲು ಆಶ್ರಯ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಅನುಮೋದನೆ‌ಯನ್ನು ತ್ವರಿತ ಗತಿಯಲ್ಲಿ
ಪಡೆಯುವಂತೆ ಮುಖ್ಯಾಧಿಕಾರಿಗಳಿಗೆ ಸೂಚಿಸಲಾಯಿತು.

ಕುಣಿ ತೆಗೆಯಲು ರಶೀದಿ: ಯಾವುದೇ ಸಮಾಜದ ವ್ಯಕ್ತಿಗಳು ಮೃತಪಟ್ಟರೆ ಪಟ್ಟಣ ಪಂಚಾಯಿತಿ ವತಿಯಿಂದ ಕುಣಿ ತೆಗೆಯಲಾಗುವುದು. ಇದಕ್ಕೆ ₹1000 ನೀಡಿ ರಶೀದಿ ಪಡೆಯುವಂತೆ ತಿಳಿಸಿದರು. ಜೆಸಿಬಿಯಿಂದ ಕುಣಿ ತೆಗೆಯುವ ವಿಷಯ ಕಡ್ಡಾಯವಲ್ಲ. ಕುಟುಂಬದವರು ಬಯಸಿದರೆ ಜೆಸಿಬಿ ಕಳಿಸಲಾಗುವುದು’ ಎಂದು ಮುಖ್ಯಾಧಿಕಾರಿ ಲಕ್ಷ್ಮಣ‌ ಕಟ್ಟಿಮನಿ ತಿಳಿಸಿದರು.

ದಾಖಲೆ ಕಳ್ಳತನ, ಕ್ರಮಕ್ಕೆ ಆಗ್ರಹ: ‘ಖಾತಾ ವರ್ಗಾವಣೆ, ಫಾರ್ಮ್-3 ಇತರೆ ದಾಖಲೆಗಳನ್ನು ಪಡೆಯಲು ಪಟ್ಟಣ‌ ಪಂಚಾಯಿತಿ ಕಚೇರಿಗೆ ಅರ್ಜಿ ಸಲ್ಲಿಸಿದರೆ ಕಡತಗಳು ಮಾಯವಾಗುತ್ತಿವೆ’ ಎಂದು ಸದಸ್ಯ ಸಂಗಪ್ಪ ಸಜ್ಜನ್ ದೂರಿದರು.

‘ಲಕ್ಷ್ಮಿದೇವಿ ಕೆರೆ ರಸ್ತೆಯಲ್ಲಿ ಎರಡು ದಶಕಗಳ ಹಿಂದೆ ನಿರ್ಮಾಣ ಮಾಡಿರುವ 9 ಮಳಿಗೆಗಳ‌ನ್ನು ಹರಾಜು ಮಾಡಿ ಬಾಡಿಗೆ ನೀಡಲು ಸಭೆ‌ ಒಪ್ಪಿಗೆ ಸೂಚಿಸಿತು.
ವಿವಿಧ ಸಂಘ-ಸಂಸ್ಥೆಗಳು, ‌ವಿವಿಧ ಸಮಾಜ ಬಾಂಧವರು, ಟ್ರಸ್ಟ್ ಹಾಗೂ‌ ಇತರೆ ಸಂಘಟನೆಗಳು ತಮ್ಮ‌ ಕಚೇರಿ ಸ್ಥಾಪಿಸಲು ಸಿಎ ನಿವೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದು ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳಿಸಿ ಅನುಕೂಲ‌ ಮಾಡಲಾಗುವುದು’ ಎಂದು ಅಧಿಕಾರಿ ಕಟ್ಟಿಮನಿ ಹೇಳಿದರು.

ತ್ರಿವೇಣಿ ಸಂಗಮದ ಸೇತುವೆಯಿಂದ ಹಿಡಿದು ವಿವಿಧ ವೃತ್ತಗಳಲ್ಲಿ ಪಟ್ಟಣ‌ ಪಂಚಾಯಿತಿ‌ ಜಾಗದಲ್ಲಿ ಅಂಗಡಿ ಮುಂಗಟ್ಟುಗಳನ್ನಿಟ್ಟು ವ್ಯಾಪಾರ ವಹಿವಾಟು ನಡೆಸುವವರಿಂದ ಕರ ವಸೂಲಿ ಮಾಡಿ ಆದಾಯ ಹೆಚ್ಚಿಸುವಂತೆ ಸದಸ್ಯರು ಕೋರಿದರು.

ಶವಾಗಾರ ವಾಹನ ಖರೀದಿ, ಮಹಿಳಾ ಶೌಚಾಲಯ ಅಭಿವೃದ್ಧಿ, ಬ್ಯಾನರ್ ಹಾಕುವವರಿಂದ ತೆರಿಗೆ ವಸೂಲಿ ಸೇರಿದಂತೆ ಹಲವಾರು ವಿಷಯಗಳು ಚರ್ಚೆಯಾದವು.
ಸದಸ್ಯರಾದ ಸಂಗಪ್ಪ ಸಜ್ಜನ್, ಶೇಷಪ್ಪ ಪೂಜಾರ,‌ರಾಜಾಸಾಬ ನಂದಾಪುರ, ಹನುಮಂತಪ್ಪ ಬಸರಿಗಿಡದ,‌ ಶರಣೆಗೌಡ ಪಾಟೀಲ, ಅನಿಲಕುಮಾರ ಬಿಜ್ಜಳ, ನಂದಿನಿ ಓಣಿಮನಿ,‌ಇತರರು ಚರ್ಚೆಯಲ್ಲಿ ಭಾಗವಹಿಸಿದ್ದರು.

ಉಪಾಧ್ಯಕ್ಷ ಕಂಠಿರಂಗ ನಾಯಕ, ಸದಸ್ಯರಾದ ಸುರೇಶ ಗುಗ್ಗಳಶೆಟ್ರ, ಸೈನಾಜ್‌ಬೇಗ್ಂ, ತನುಶ್ರೀ ಟಿ.ಜೆ ರಾಮಚಂದ್ರ, ಹುಸೇನಬೀ ಸಂತ್ರಾಸ್, ಬಸಮ್ಮ,‌ ಸಿದ್ದಾರ್ಥ ಕಲ್ಲಬಾಗಿಲಮಠ, ನಾಮ‌ ನಿರ್ದೇಶಕ ಸದಸ್ಯರಾದ ಶಾಂತಪ್ಪ ಬಸರಿಗಿಡದ, ಗಂಗಾಧರ ಚೌಡ್ಕಿ,‌ ಹನುಮೇಶ‌ ಹಡಪದ ಇತರರು ಹಾಜರಿದ್ದರು.

ಕುಣಿ ತೆಗೆಯಲು ₹1000 ನಿಗದಿ , ರಶೀದಿ!
ಯಾವುದೇ ಸಮಾಜದ ವ್ಯಕ್ತಿಗಳು ಮೃತಪಟ್ಟರೆ ಪಟ್ಟಣ ಪಂಚಾಯಿತಿ ವತಿಯಿಂದ ಕುಣಿ ತೆಗೆಯಲಾಗುವುದು. ಇದಕ್ಕೆ ₹1000 ನೀಡಿ ರಶೀದಿ ಪಡೆಯುವಂತೆ ತಿಳಿಸಿದರು. ಜೆಸಿಬಿಯಿಂದ ಕುಣಿ ತೆಗೆಯುವ ವಿಷಯ ಕಡ್ಡಾಯವಲ್ಲ. ಕುಟುಂಬದವರು ಬಯಸಿದರೆ ಜೆಸಿಬಿ ಕಳಿಸಲಾಗುವುದು’ ಎಂದು ಮುಖ್ಯಾಧಿಕಾರಿ ಲಕ್ಷ್ಮಣ‌ ಕಟ್ಟಿಮನಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.