ADVERTISEMENT

ಕನಕಗಿರಿ: ಮನೆ ಕುಸಿತ, ಪರಿಹಾರದ ಚೆಕ್ ವಿತರಣೆ

ಪ್ರಜಾವಾಣಿ ವರದಿಗೆ ಸರ್ಕಾರದ ತ್ವರಿತ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 14:18 IST
Last Updated 28 ಜುಲೈ 2022, 14:18 IST
ಕನಕಗಿರಿ ತಹಶೀಲ್ದಾರ್ ಕಚೇರಿಯಲ್ಲಿ ದೇವಣ್ಣ ಶಿವಪ್ಪ ದಾಸನಾಳ ಅವರಿಗೆ ತಹಶೀಲ್ದಾರ್ ಧನಂಜಯ ಮಾಲಗಿತ್ತಿ ಗುರುವಾರ ಚೆಕ್ ವಿತರಿಸಿದರು
ಕನಕಗಿರಿ ತಹಶೀಲ್ದಾರ್ ಕಚೇರಿಯಲ್ಲಿ ದೇವಣ್ಣ ಶಿವಪ್ಪ ದಾಸನಾಳ ಅವರಿಗೆ ತಹಶೀಲ್ದಾರ್ ಧನಂಜಯ ಮಾಲಗಿತ್ತಿ ಗುರುವಾರ ಚೆಕ್ ವಿತರಿಸಿದರು   

ಕನಕಗಿರಿ (ಕೊಪ್ಪಳ): ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಕರಡೋಣ ಗ್ರಾಮದಲ್ಲಿ ಈಚೆಗೆ ಸುರಿದ ಮಳೆಯಿಂದಾಗಿ ಕುಸಿದಿದ್ದ ಮನೆಗೆ ರಾಜ್ಯ ಸರ್ಕಾರ ತ್ವರಿತವಾಗಿ ಸ್ಪಂದಿಸಿ ಪರಿಹಾರದ ಚೆಕ್‌ ನೀಡಿದೆ.

ಗ್ರಾಮದ ದೇವಣ್ಣ ಶಿವಪ್ಪ ದಾಸನಾಳ ಎಂಬುವವರಿಗೆ ಸೇರಿದ ಮನೆಯ ಚಾವಣೆ ಕುಸಿದು ಮೂವರು ಗಂಭೀರವಾಗಿ ಗಾಯಗೊಂಡು ಪಾಣಾಪಾಯದಿಂದ ಪಾರಾಗಿದ್ದರು.

ಈ ಕುರಿತು 'ಮನೆ ಕುಸಿತ: ಪ್ರಾಣಾಪಾಯದಿಂದ ಪಾರು' ಎಂಬ ಶೀರ್ಷಿಕೆಯಲ್ಲಿ 'ಪ್ರಜಾವಾಣಿ' ಜು. 15ರಂದು ಸಮಗ್ರ ವರದಿ ಪ್ರಕಟಿಸಿತ್ತು. ಈ ವರದಿಗೆ ಸ್ಪಂದಿಸಿದ ಮುಖ್ಯಮಂತ್ರಿ ಅವರ ಅಧೀನ ಕಾರ್ಯದರ್ಶಿ (ಆಡಳಿತ) ಸಿ. ವಿ. ಹರಿದಾಸನ್ ತಕ್ಷಣವೇ ಪರಿಹಾರ ಕೊಡಬೇಕು ಎಂದು ಸೂಚಿಸಿದ್ದರು. ಪ್ರಜಾವಾಣಿಯಲ್ಲಿ ಪ್ರಕಟವಾದ ವರದಿಯನ್ನೂ ತಮ್ಮ ಸೂಚನೆಯಲ್ಲಿ ಉಲ್ಲೇಖಿಸಿದ್ದರು.

ADVERTISEMENT

ಹರಿದಾಸನ್‌ ಅವರ ಸೂಚನೆ ಬರುತ್ತಿದ್ದಂತೆಯೇ ಕನಕಗಿರಿ ತಹಶೀಲ್ದಾರ್‌ ಧನಂಜಯ ಮಾಲಗಿತ್ತಿ ಸ್ಥಳ ಪರಿಸೀಲಿಸಿ ರಾಷ್ಟ್ರೀಯ ವಿಕೋಪ ಪರಿಹಾರ ನಿಧಿ ನಿಯಮದ ಪ್ರಕಾರ ಮೊದಲ ಕಂತಿನ ₹ 95,100 ಸಾವಿರ ಮೊತ್ತದ ಚೆಕ್‌ ಫಲಾನುಭವಿ ದೇವಣ್ಣ ಅವರಿಗೆ ಗುರುವಾರ ಹಸ್ತಾಂತರಿಸಿದರು.

ನಂತರ ಮಾತನಾಡಿದ ಮಾಲಗಿತ್ತಿ ‘ಫಲಾನುಭವಿಗೆ ಒಟ್ಟು ₹3 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದ್ದು, ಮೊದಲ ಕಂತಿನ ಹಣ ಈಗ ನೀಡಲಾಗಿದೆ’ ಎಂದರು. ಶಿರಸ್ತೇದಾರ್ ಪರಸಪ್ಪ ಘಾಟಿ, ಕಂದಾಯ ನಿರೀಕ್ಷಕ ಎನ್. ಕೆ. ಚನ್ನಪ್ಪ, ಸಿಬ್ಬಂದಿ ಶರಣಪ್ಪ ಚಳಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.