
ಕನಕಗಿರಿ: ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆಸಿ ಪರಾರಿಯಾದ ಕಳ್ಳ
ಕನಕಗಿರಿ (ಕೊಪ್ಪಳ ಜಿಲ್ಲೆ): ವಾಹನವನ್ನು ಕಳ್ಳತನ ಮಾಡಿಕೊಂಡು ತಾಲ್ಲೂಕಿನ ಹುಲಿಹೈದರ ಮಾರ್ಗವಾಗಿ ತಾವರಗೇರಾ ಕಡೆಗೆ ಹೊರಟಿದ್ದ ವಾಹನ ಚಾಲಕನು 112 ಪೊಲೀಸ್ ತುರ್ತು ವಾಹನಕ್ಕೆ ಡಿಕ್ಕಿ ಹೊಡೆದು ವಾಹನ ಸಹಿತ ಪರಾರಿಯಾದ ಘಟನೆ ಜ.12ರಂದು ಹುಲಿಹೈದರ ಹೊರವಲಯದಲ್ಲಿ ನಡೆದಿದೆ.
ತುರ್ತು ವಾಹನದ ಪೊಲೀಸರು ತಾವರಗೇರಾ- ಕನಕಗಿರಿ ಮಾರ್ಗದಲ್ಲಿ ಕರ್ತವ್ಯದಲ್ಲಿದ್ದಾಗ ಯಾರೊ ಕಳ್ಳರು ಸರಕು ಸಾಗಣೆ ವಾಹನ ಕಳ್ಳತನ ಮಾಡಿಕೊಂಡು ತಾವರಗೇರಾದ ಕಡೆಗೆ ಹೋಗುತ್ತಿದ್ದಾರೆ, ಅದನ್ನು ತಡೆದು ನಿಲ್ಲಿಸಿ ಎಂದು ಕೊಪ್ಪಳ ಕಂಟ್ರೋಲ್ ಕೊಠಡಿಯಿಂದ ದೂರವಾಣಿ ಕರೆ ಮಾಡಿದ್ದಾರೆ.
ಇದರಿಂದ ಜಾಗೃತಗೊಂಡ ತುರ್ತು ವಾಹನದ ಪೊಲೀಸರು ಹುಲಿಹೈದರ ಗ್ರಾಮದ ಸ್ಮಶಾನದ ರಸ್ತೆಯಲ್ಲಿ ಕಳ್ಳತನ ಮಾಡಿಕೊಂಡು ಹೊರಟಿದ್ದ ವಾಹನ ಬರುತ್ತಿದ್ದಾಗ ಚಾಲಕನಿಗೆ ಎಡಭಾಗದಲ್ಲಿ ವಾಹನ ನಿಲ್ಲಿಸುವಂತೆ ಕೈ ಸನ್ನೆ ಮಾಡಿದ್ದಾರೆ. ಸಮವಸ್ತ್ರ ಧರಿಸಿದ್ದ ಪೊಲೀಸರನ್ನು ಕಂಡ ಕಳ್ಳ ಪಕ್ಕದಲ್ಲಿದ್ದ 112 ವಾಹನಕ್ಕೆ ಡಿಕ್ಕಿ ಹೊಡೆದು ವಾಹನ ಸಮೇತ ಪರಾರಿಯಾಗಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಪೊಲೀಸ್
ವಾಹನದ ಮುಂದಿನ ಭಾಗ ಹಾಳಾಗಿದೆ. ಘಟನೆ ಬಗ್ಗೆ ಜಿಲ್ಲೆಯ ಎಲ್ಲಾ ಠಾಣೆಗಳ ಪೊಲೀಸರು ಎಚ್ಚರಗೊಂಡು ವಾಹನ ಹಾಗೂ ಕಳ್ಳನನ್ನು ಹಿಡಿಯಲು ಪ್ರಯತ್ನಿಸಿರುವುದ್ದನ್ನು ಅರಿತ ಕಳ್ಳನು ಕಾರಟಗಿಯ ಎಪಿಎಂಸಿಯ ಆವರಣದಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸ್ ಸಿಬ್ಬಂದಿ ಮುತ್ತಣ್ಣ ನೀಡಿದ ದೂರಿನ ಮೇರೆಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.