ADVERTISEMENT

ಕೊಪ್ಪಳ | ಕವನ ಸಂಕಲನಕ್ಕೆ ಸಿಗದ ಆದ್ಯತೆ; ಅಸಮಾಧಾನ

ಸಾಮಾಜಿಕ ತಾಣದಲ್ಲಿ ಬೇಸರ ಹೊರಹಾಕಿದ ಜಿಲ್ಲೆಯ ಬರಹಗಾರರು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 7:43 IST
Last Updated 9 ಅಕ್ಟೋಬರ್ 2024, 7:43 IST
ಕೊಪ್ಪಳದ ಸಾಹಿತಿ ಮಹೇಶ ಬಳ್ಳಾರಿ ಅವರ ಪುಸ್ತಕದ ಮೇಲೆ ಓದುಗರ ಬೇಡಿಕೆಯಿಲ್ಲದ ಕಾರಣಕ್ಕೆ ಆಯ್ಕೆ ಮಾಡಿಲ್ಲ ಎಂದು ಬರೆದಿರುವುದು  
ಕೊಪ್ಪಳದ ಸಾಹಿತಿ ಮಹೇಶ ಬಳ್ಳಾರಿ ಅವರ ಪುಸ್ತಕದ ಮೇಲೆ ಓದುಗರ ಬೇಡಿಕೆಯಿಲ್ಲದ ಕಾರಣಕ್ಕೆ ಆಯ್ಕೆ ಮಾಡಿಲ್ಲ ಎಂದು ಬರೆದಿರುವುದು     

ಕೊಪ್ಪಳ: ರಾಜ್ಯದಲ್ಲಿರುವ ಸಾರ್ವಜನಿಕರ ಗ್ರಂಥಾಲಯಗಳಿಗೆ ಒದಗಿಸಲು ಪ್ರಥಮ ಸುತ್ತಿನಲ್ಲಿ ಆಯ್ಕೆಯಾದ ಕವನ ಸಂಕಲನಗಳನ್ನು ಮರುಪರಿಶೀಲನೆ ವೇಳೆ ‘ಓದುಗರ ಬೇಡಿಕೆಯ ಕೊರತೆ’ ಎನ್ನುವ ಕಾರಣಕ್ಕೆ ಕೆಲ ಪುಸ್ತಕಗಳನ್ನು ತಿರಸ್ಕರಿಸಲಾಗಿದ್ದು, ಇದು ಜಿಲ್ಲೆಯ ಹಲವು ಬರಹಗಾರರ ಅಸಮಾಧಾನಕ್ಕೆ ಕಾರಣವಾಗಿದೆ.

ನಗರದ ಸಾಹಿತಿ ಮಹೇಶ ಬಳ್ಳಾರಿ ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು ‘ಮೊದಲ ಟಿಪ್ಪಣಿಯಲ್ಲಿ ನನ್ನ ಪುಸ್ತಕ ಆಯ್ಕೆಯಾಗಿದೆ. ಆದರೆ ಎರಡನೇ ಟಿಪ್ಪಣಿಯಲ್ಲಿ ‘ಓದುಗರ ಬೇಡಿಕೆಯ ಕೊರತೆ’ ಎನ್ನುವ ಕಾರಣ ಕೊಟ್ಟಿದ್ದಾರೆ. ಈ ಮಾನದಂಡ ನಮ್ಮಂತಹ ಬರಹಗಾರರಿಗೆ ಮಾತ್ರವೇ’ ಎಂದು ಪ್ರಶ್ನಿಸಿದ್ದಾರೆ.

ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಬೆಂಗಳೂರಿನಲ್ಲಿ 2021ನೇ ಸಾಲಿಗೆ ಆಯ್ಕೆಯಾದ ಪುಸ್ತಕಗಳ ಪ್ರದರ್ಶನವನ್ನು ಅ. 4 ಹಾಗೂ 5ರಂದು ಮಾಡಿ ಅಲ್ಲಿ ಆಯ್ಕೆಯಾಗದ ಪುಸ್ತಕಗಳಿಗೆ ಕಾರಣಗಳನ್ನೂ ನೀಡಿದೆ. ‘ಸಾಲ ಮಾಡಿ ಪುಸ್ತಕಗಳನ್ನು ಪ್ರಕಟಿಸುವ ಕವಿಗಳಿಗೆ ಏಕಗವಾಕ್ಷಿ ಯೋಜನೆ ಒಂದಷ್ಟು ಆಶಾದಾಯಕವಾಗಿತ್ತು. ಕವಿಗಳನ್ನು ಸಂಕಷ್ಟಕ್ಕೆ ನೂಕುವ ಕೆಲಸ ಪರೋಕ್ಷವಾಗಿ ನಡೆಯುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ

ADVERTISEMENT

ಈ ಕುರಿತು ಕೆಲವೇ ಕೆಲವು ಬರಹಗಾರರು, ಪ್ರಕಾಶಕರು ಧ್ವನಿ ಎತ್ತಿದ್ದಾರೆ. ದೊಡ್ಡ ದೊಡ್ಡ ಪ್ರಕಾಶನಗಳ ನೂರಾರು ಪುಸ್ತಕಗಳನ್ನು ಖರೀದಿ ಮಾಡುವ ಇಲಾಖೆಗೆ ನನ್ನಂಥ ಬರಹಗಾರನ ಒಂದೆರಡು ಪುಸ್ತಕಗಳು ಹೊರೆಯಾಗುತ್ತವೆಯೇ? ಎಂದಿದ್ದಾರೆ.

ಇದಕ್ಕೆ ಫೇಸ್‌ಬುಕ್‌ನಲ್ಲಿಯೇ ಅನೇಕರು ಪ್ರತಿಕ್ರಿಯೆ ನೀಡಿದ್ದು ವಿಜಯಲಕ್ಷ್ಮಿ ಕೊಟಗಿ, ‘ಹಿರಿಯ ಕವಿಗಳು ಬೆಂಗಳೂರು ನಿವಾಸಿಗಳು ಈ ಕುರಿತು ಧ್ವನಿ ಎತ್ತಲೇಬೇಕು’ ಎಂದರೆ, ಇಲ್ಲಿನ ಬರಹಗಾರ ಪಿ.ಎಸ್‌. ಅಮರದೀಪ್‌, ‘ಸರಿಯಾಗಿಯೇ ಪ್ರಶ್ನೆ ಕೇಳಿದ್ದೀರಿ’ ಎಂದು ಹೇಳಿದ್ದಾರೆ. ಕೊಪ್ಪಳದ ಸಾಹಿತಿ ಅಕ್ಬರ್‌ ಖಾಲಿಮಿರ್ಜಿ ‘ಗ್ರಂಥಾಲಯದ ವಿತಂಡವಾದಕ್ಕೆ ಯಾರೂ ಬಗ್ಗದಿರಲಿ, ಅವರ ಧೋರಣೆಗೆ ಧಿಕ್ಕಾರ. ಇಲಾಖೆಯ ಯೋಜನೆಗಳು ನಿಲ್ಲದಿರಲಿ, ನಾಡಿನ ಒಕ್ಕೂರಲ ಧ್ವನಿಬೇಕು. ಹೋರಾಟವಿರದೇ ಇಲ್ಲಿ ಯಾವ ಕಾರ್ಯಗಳು ಜಾರಿಯಾಗುವುದಿಲ್ಲ. ಪ್ರತಿ ಲೇಖಕರ ಪತ್ರ ಚಳವಲಿ ಇಂದೇ ಆರಂಭವಾಗಲಿ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ‘ಕಾವ್ಯ ಬೇಡವೆನ್ನುವುದು ಸಾಹಿತ್ಯಕ್ಕೆ ಮಾಡುವ
ಅಪಚಾರ. ಮಹೇಶ ಅವರ ಕೃತಿ ಮೊದಲು ಆಯ್ಕೆ ಮಾಡಿ ನಂತರ ಕೈಬಿಟ್ಟಿರುವುದು ಸರಿಯಲ್ಲ. ಕನ್ನಡ ಸಾಹಿತ್ಯ ಆರಂಭವಾದದ್ದು ಕವಿರಾಜಮಾರ್ಗದಿಂದ. ಅದು ಪದ್ಯ ಕೃತಿ. ಈ ಲೋಪ ಸಂಬಂಧಪಟ್ಟವರ ಸರಿಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ಸಾಹಿತಿ ಕಾಶಿನಾಥ ಅಂಬಲಗಿ ‘ಓದುಗರು ಬೇಡಿಕೆಯ ಕೊರತೆಯ ಕೊರತೆ, ಆಯ್ಕೆ ಆಗಿಲ್ಲ ಎನ್ನುವುದು ಸರಿಯಲ್ಲ. ಈ ಕುರಿತು ಗ್ರಂಥಾಲಯ ಇಲಾಖೆಯ ಸ್ಪಷ್ಟೀಕರಣ ಬಯಸುತ್ತೇವೆ’ ಎಂದು ಹೇಳಿದ್ದಾರೆ.

ಮಹೇಶ ಬಳ್ಳಾರಿ ಅವರ ಕವನ ಸಂಕಲನ ಪ್ರಥಮ ಸುತ್ತಿನಲ್ಲಿ ಆಯ್ಕೆ ಮಾಡಿ ಕಳುಹಿಸಲಾಗಿತ್ತು. ಬಳಿಕ ಏನಾಗಿದೆ ಎಂಬುದು ಗೊತ್ತಾಗಿಲ್ಲ.
–ಮುಮ್ತಾಜ್‌ ಬೇಗಂ, ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಸದಸ್ಯೆ
ಎಲ್ಲ ಲೇಖಕರ ಕವನ ಸಂಕಲನ ತಿರಸ್ಕರಿಸಿಲ್ಲ. ಎಲ್ಲ ಪ್ರಕಾರದ ಸಾಹಿತ್ಯಕ್ಕೆ ಆದ್ಯತೆ ಕೊಡಲು ಸಮಿತಿ ತೀರ್ಮಾನಿಸಿದೆ. ಕೆಲ ಕವನ ಸಂಕಲನಗಳನ್ನು ಆಯ್ಕೆಗೆ ಮರುಪರಿಶೀಲಿಸಲಾಗುತ್ತಿದೆ.
–ಕಿಶನರಾವ್‌ ಕುಲಕರ್ಣಿ, ಗ್ರಂಥಾಲಯ ಪುಸ್ತಕ ಆಯ್ಕೆ ಮರುಪರಿಶೀಲನಾ ಸಮಿತಿ ಸದಸ್ಯ

‘ಕವನ ಸಂಕಲನಗಳ ಗ್ರಂಥಾಲಯ’

ಹೆಸರು ಹೇಳಲು ಬಯಸದ ಗ್ರಂಥಾಲಯದ ಅಧಿಕಾರಿಯೊಬ್ಬರು ಈ ಕುರಿತು ಪ್ರತಿಕ್ರಿಯಿಸಿ ‘ರಾಜ್ಯದ ಬಹುತೇಕ ಗ್ರಂಥಾಲಯಗಳಲ್ಲಿ ಕವನ ಸಂಕಲನ ಹಾಗೂ ನಾಲ್ಕೈದು ಸಂಕಲನಗಳ ಗುಚ್ಛಗಳೇ ತುಂಬಿಕೊಂಡಿವೆ. ಒಮ್ಮೆ ಓದಿದ್ದನ್ನು ಮರಳಿ ಓದುವುದು ಯಾರು’ ಎಂದು ಪ್ರಶ್ನಿಸಿದರು.

‘ಕಥೆ ಮಕ್ಕಳ ಸಾಹಿತ್ಯ ವಿಮರ್ಶಾತ್ಮಕ ಬರಹ ಕಾದಂಬರಿ ವ್ಯಕ್ತಿತ್ವ ವಿಕಾಸ ಹೀಗೆ ಸಾಹಿತ್ಯದಲ್ಲಿ ಅನೇಕ ಪ್ರಕಾರಗಳಿದ್ದರೂ ಬಹಳಷ್ಟು ಜನ ಕವನ ಸಂಕಲನಕ್ಕೆ ಅಂಟಿಕೊಂಡಿದ್ದಾರೆ. ಹೊಸ ಪ್ರಕಾರದಲ್ಲಿ ಸಾಹಿತ್ಯ ಕೃಷಿ ಮಾಡಿದರೆ ಹೊಸ ಓದುಗರನ್ನೂ ಸೆಳೆಯಲು ಸಾಧ್ಯವಾಗುತ್ತದೆ. ಇಲ್ಲವಾದರೆ ಸಾರ್ವಜನಿಕ ಗ್ರಂಥಾಲಯ ಕವನ ಸಂಕಲನಗಳ ಗ್ರಂಥಾಲಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.