ADVERTISEMENT

ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ನದ್ದೇ ಕುತೂಹಲ

ಹಲವು ಚರ್ಚೆಗಳನ್ನು ಹುಟ್ಟುಹಾಕಿದ ದಿಢೀರ್‌ ರದ್ದಾದ ಸಂಘಟನಾ ಕಾರ್ಯಕ್ರಮ

ಉಮಾಶಂಕರ ಬ.ಹಿರೇಮಠ
Published 8 ಏಪ್ರಿಲ್ 2023, 19:30 IST
Last Updated 8 ಏಪ್ರಿಲ್ 2023, 19:30 IST
   

ಯಲಬುರ್ಗಾ: ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆಯಾದರೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಅಷ್ಟೊಂದು ಚುರುಕು ಕಾಣುತ್ತಿಲ್ಲ. ಸದ್ಯಕ್ಕೆ ಕಾಂಗ್ರೆಸ್, ಎನ್‍ಸಿಪಿ, ಜೆಡಿಎಸ್ ಮತ್ತು ಎಎಪಿ ಪಕ್ಷಗಳು ಮಾತ್ರ ತಮ್ಮ ಅಭ್ಯರ್ಥಿಗಳು ಹೆಸರುಗಳನ್ನು ಪ್ರಕಟಿಸಿವೆ. ಪ್ರಮುಖ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಅಭ್ಯರ್ಥಿ ಯಾರು ಎನ್ನುವ ವಿಷಯವೇ ಕ್ಷೇತ್ರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಅಧಿಕೃತವಾಗಿ ಅಭ್ಯರ್ಥಿ ಹೆಸರು ಘೋಷಣೆಯಾಗದಿದ್ದರೂ ಸಚಿವ ಹಾಲಪ್ಪ ಆಚಾರ್‌ ಪಕ್ಷ ಸಂಘಟನೆಯ ಹೆಸರಿನಲ್ಲಿ ಕೆಲ ಮುಖಂಡರೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿಯಿಂದ ಅಭ್ಯರ್ಥಿಗಳಾಗಲು ನವೀನ ಗುಳಗಣ್ಣವರ, ಬಸಲಿಂಗಪ್ಪ ಭೂತೆ, ಕಳಕನಗೌಡ ಜುಮ್ಲಾಪೂರ, ಶರಣಪ್ಪ ಗುಂಗಾಡಿ ಪೈಪೋಟಿ ನಡೆಸಿದ್ದಾರೆ. ಶುಕ್ರವಾರ ನಡೆಯಬೇಕಿದ್ದ ಬಿಜೆಪಿ ಸಂಘಟನಾ ಕಾರ್ಯಕ್ರಮ ದಿಢೀರ್ ರದ್ದಾಗಿದ್ದು, ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ.

ಬಿಜೆಪಿ ಪಾಳೆಯದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದರಿಂದ ಟಿಕೆಟ್ ವಂಚಿತರು ಬಂಡಾಯ ಏಳುವ ಸಾಧ್ಯತೆಗಳು ದಟ್ಟವಾಗಿವೆ. ವಂಚಿತರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಾಗಿಲು ತಟ್ಟುವ ಸಾಧ್ಯತೆಗಳಿವೆ ಎಂಬುದು ಬಿಜೆಪಿ ಮುಖಂಡರಲ್ಲಿ ಕಾಡುತ್ತಿರುವ ಅನುಮಾನ. ಬಿಜೆಪಿಯ ಅತೃಪ್ತರು ಈ ಕೆಆರ್‌ಪಿಪಿಯಿಂದ ಸ್ಪರ್ಧಿಸಿದ ಪಕ್ಷಕ್ಕೆ ಹಾನಿಯಾಗುತ್ತದ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಹರಿದಾಡುತ್ತಿವೆ.

ADVERTISEMENT

ಇವೆಲ್ಲವುಗಳ ನಡುವೆ ಮಾಜಿ ಶಾಸಕ ಶಿವಶರಣಪ್ಪಗೌಡ ಪಾಟೀಲ ಅವರ ಪುತ್ರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ ತಂದೆಯ ಜನ್ಮದಿನ ಆಚರಣೆಯ ನೆಪದಲ್ಲಿ ಬಲಪ್ರದರ್ಶನ ಮಾಡಿದ್ದಾರೆ. ಸದ್ಯ ತೆರೆಮರೆಯಲ್ಲಿ ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿದ್ದಾರೆ.

ಸುಲಭವಾಗಿ ಟಿಕೆಟ್ ಗಿಟ್ಟಿಸಿಕೊಂಡಿರುವ ಕಾಂಗ್ರೆಸ್‌ನ ಬಸವರಾಜ ರಾಯರಡ್ಡಿ ಏ. 17ರಂದು ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಚುನಾವಣಾ ಅಧಿಸೂಚನೆ ಪೂರ್ವದಲ್ಲಿ ಕ್ಷೇತ್ರದಲ್ಲಿ ಓಡಾಡಿದ್ದ ಜೆಡಿಎಸ್ ಅಭ್ಯರ್ಥಿ ಮಲ್ಲನಗೌಡ ಕೋನನಗೌಡ್ರ ಸಾಮಾಜಿಕ ತಾಣದಲ್ಲಿ ಪ್ರಚಾರದ ಮೂಲಕ ಸಕ್ರಿಯವಾಗಿದ್ದಾರೆ.

ಆಮ್ ಆದ್ಮಿ ಪಾರ್ಟಿಯಿಂದ ನಿವೃತ್ತ ಅಧಿಕಾರಿ ಹನಮಂತಪ್ಪ ಕುರಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಎನ್‍ಸಿಪಿ ರಾಜ್ಯ ಘಟಕದ ಅಧ್ಯಕ್ಷ ಆರ್. ಹರಿ ಅವರೇ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ತಯಾರಿ ನಡೆಸಿದ್ದಾರೆ. ಯುವ ಪಡೆಯೊಂದಿಗೆ ತಮ್ಮದೇ ಆದ ತಂಡದೊಂದಿಗೆ ಸದ್ದಿಲ್ಲದೇ ಸಂಘಟನೆಗೆ ಮುಂದಾಗಿದ್ದಾರೆ. ಒಂದೂವರೆ ವರ್ಷದಿಂದಲೂ ಕ್ಷೇತ್ರದಲ್ಲಿ ಸುತ್ತಾಡುತ್ತಿರುವ ಎನ್‍ಸಿಪಿ ಮುಖಂಡರು ಜಯಂತಿ ಆಚರಣೆಗೆ, ಮಹಿಳಾ ಸ್ವಸಹಾಯ ಸಂಘಗಳ ಅಭಿವೃದ್ಧಿಗೆ ಆರ್ಥಿಕ ನೆರವು ನೀಡುತ್ತಿರುವುದು ಹಾಗೂ ನಿರುದ್ಯೋಗಿ ಯುವಕರಿಗೆ ಉದ್ಯೋಗಕ್ಕಾಗಿ ಕಾರ್ಖಾನೆ ಸ್ಥಾಪನೆ ಹೀಗೆ ಕೆಲವೊಂದು ಅಂಶಗಳನ್ನು ಮುಂದಿಟ್ಟುಕೊಂಡು ಗ್ರಾಮವಾಸ್ತವ್ಯ ಮತ್ತು ಪಾದಯಾತ್ರೆ ಆಯೋಜಿಸಿ ಕ್ಷೇತ್ರದಲ್ಲಿ ತಮ್ಮನ್ನು ಪರಿಚಯ ಮಾಡಿಕೊಳ್ಳುತ್ತಿದ್ದಾರೆ.

ಹೀಗೆ ಜಿಲ್ಲೆಯಲ್ಲಿ ಕುತೂಹಲಕ್ಕೆ ಕಾರಣವಾಗಿರುವ ಕ್ಷೇತ್ರದಲ್ಲಿ ಮುಖ್ಯವಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಪೈಪೋಟಿ ನಿಶ್ಚಿತ. ಹೀಗಾಗಿ ಕಮಲ ಪಾಳೆಯದ ಟಿಕೆಟ್‌ ಯಾರಿಗೆ ಎನ್ನುವ ಕುತೂಹಲವೂ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.