ಕೊಪ್ಪಳ/ಹುಬ್ಬಳ್ಳಿ: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಮೇಲೆ ಕೊಪ್ಪಳ ಜಿಲ್ಲಾ ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ಶೇಖು ಚವ್ಹಾಣ್ ಅವರ ಕೊಪ್ಪಳ ಮತ್ತು ಹುಬ್ಬಳ್ಳಿಯ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ನಡೆಸಿದ ದಾಳಿಯ ವೇಳೆ ಅಪಾರ ಪ್ರಮಾಣದ ನಗದು ಹಾಗೂ ಚಿನ್ನಾಭರಣಗಳು ಪತ್ತೆಯಾಗಿವೆ.
ಕೊಪ್ಪಳದ ಕೀರ್ತಿ ಕಾಲೊನಿ, ಜಿಲ್ಲಾ ಕೈಗಾರಿಕಾ ಇಲಾಖೆಯ ಕಚೇರಿ, ಅಭಿಷೇಕ ನಗರ ಮತ್ತು ಹುಬ್ಬಳ್ಳಿಯ ರಾಜೀವ ನಗರದ ದತ್ತಾತ್ರೇಯ ಕಾಲೊನಿ ಸೇರಿದಂತೆ ಒಟ್ಟು ನಾಲ್ಕು ಕಡೆ ಶೋಧ ನಡೆಸಲಾಗಿದೆ. ಎರಡು ದಶಕಗಳಿಂದ ಕೊಪ್ಪಳದಲ್ಲಿ ಕೆಲಸ ಮಾಡುತ್ತಿರುವ ಅವರ ಬಳಿ ಒಟ್ಟು ₹2.38 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇದು ಆದಾಯಕ್ಕಿಂತಲೂ ಶೇ 177ರಷ್ಟು ಹೆಚ್ಚು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ವೇಳೆ ಹುಬ್ಬಳ್ಳಿಯ ಮನೆಯಲ್ಲಿ ₹52.50 ಲಕ್ಷ ನಗದು, ₹61.11 ಲಕ್ಷ ಮೌಲ್ಯದ 775 ಗ್ರಾಂ ಚಿನ್ನ, 4,267 ಗ್ರಾಂ ಬೆಳ್ಳಿ, ₹12 ಲಕ್ಷ ಮೌಲ್ಯದ ಒಂದು ಕಾರು, ಎರಡು ದ್ವಿಚಕ್ರವಾಹನ, ವಿವಿಧ ಬ್ಯಾಂಕ್ ಖಾತೆಗಳಲ್ಲಿ ₹21.69 ಲಕ್ಷ ಇರುವುದು ಪತ್ತೆಯಾಗಿದೆ. ₹44 ಲಕ್ಷ ಮೌಲ್ಯ ಬೆಲೆಬಾಳುವ 13 ನಿವೇಶನಗಳು, ಮೂರು ಮನೆಗಳು, 7.28 ಎಕರೆ ಕೃಷಿ ಜಮೀನಿನ ದಾಖಲೆಗಳು ಪತ್ತೆಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.