
ತಮ್ಮ ಕ್ಷೇತ್ರದಲ್ಲಿನ ಸಾಧನೆಗೆ ಹಗಲಿರುಳು ಶ್ರಮಿಸಿದ ಕೊಪ್ಪಳ ಜಿಲ್ಲೆಯ ಮೂವರು ಸಾಧಕರಿಗೆ ಈ ವರ್ಷ ರಾಜ್ಯೋತ್ಸವದ ’ಗರಿ’ಮೆ ಲಭಿಸಿದೆ. ಜಾನಪದ ಕ್ಷೇತ್ರದಲ್ಲಿನ ಸಾಧನೆಗೆ ಕುಷ್ಟಗಿ ತಾಲ್ಲೂಕಿನ ತೆಗ್ಗಿಹಾಳ ಗ್ರಾಮದ ಬಸಪ್ಪ ಭರಮಪ್ಪ ಚೌಡಕಿ, ಸಹಕಾರ ಕ್ಷೇತ್ರದಲ್ಲಿ ಅದೇ ತಾಲ್ಲೂಕಿನ ಗುಮಗೇರಾದ ಶೇಖರಗೌಡ ಮಾಲಿಪಾಟೀಲ ಮತ್ತು ಸಂಗೀತ ಕ್ಷೇತ್ರದಲ್ಲಿ ಯಲಬುರ್ಗಾ ತಾಲ್ಲೂಕಿನ ಮುಧೋಳ ಗ್ರಾಮದ ದೇವೇಂದ್ರಕುಮಾರ ಪತ್ತಾರ ಅವರು ಪ್ರಶಸ್ತಿಗೆ ಭಾಜನರಾಗಿದ್ದು, ಅವರ ಕಿರು ಪರಿಚಯವನ್ನು ನಾರಾಯಣರಾವ್ ಕುಲಕರ್ಣಿ (ಕುಷ್ಟಗಿ) ಹಾಗೂ ಉಮಾಶಂಕರ ಹಿರೇಮಠ (ಯಲಬುರ್ಗಾ) ಕಟ್ಟಿಕೊಟ್ಟಿದ್ದಾರೆ.


ಗುರು ಪುಟ್ಟರಾಜ ಗವಾಯಿಗಳವರ ಆಶೀರ್ವಾದದ ಫಲವೇ ಪ್ರಶಸ್ತಿ ಗ್ರಾಮೀಣ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಸರ್ಕಾರದ ನಿರ್ಧಾರದಿಂದಾಗಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಬಲಬಂದಿದೆ. ಇದು ಸಂಗೀತಕ್ಕೆ ಸಿಕ್ಕ ಗೌರವ.ದೇವೇಂದ್ರಕುಮಾರ ಪತ್ತಾರ ಕಲಾವಿದರು

ನನಗೆ ವಯಸ್ಸಾಗಿರಬಹುದು ಆದರೆ ಕಲೆ ಈಗಿನಂತೆಯೇ ಮುಂದುವರೆಯಬೇಕು ಇಳಿ ವಯಸ್ಸಿನಲ್ಲಿ ಕಲಾಪೋಷಣೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತೋಷ ತಂದಿದೆ.ಬಸಪ್ಪ ಚೌಡಕಿ ಕಲಾವಿದ

ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಹಕಾರ ಇತರೆ ಕ್ಷೇತ್ರಗಳಲ್ಲಿನ ನನ್ನ ಜವಾಬ್ದಾರಿಯನ್ನು ಮತ್ತಷ್ಟೂ ಹೆಚ್ಚಿಸಿದೆ. ಇನ್ನಷ್ಟು ಸಾಧನೆಗೂ ಪ್ರೇರಣೆ ನೀಡಿದೆ.ಶೇಖರಗೌಡ ಮಾಲೀಪಾಟೀಲ ಸಹಕಾರಿ ಧುರೀಣ
ಮುಧೋಳದ ಸಂಗೀತ ಪ್ರತಿಭೆಗೆ ಸಂದ ಗೌರವ
ಯಲಬುರ್ಗಾ ತಾಲ್ಲೂಕಿನ ಮುಧೋಳ ಗ್ರಾಮದ ಸಂಗೀತ ಕಲಾವಿದ ದೇವೇಂದ್ರಕುಮಾರ ಪತ್ತಾರ ತಂದೆ ಜನಪದ ಕಲಾವಿದರಾದ ಮಳಿಯಪ್ಪ ಅವರ ನೆರಳಲ್ಲಿ ಸಂಗೀತದ ಆಸಕ್ತಿ ಬೆಳೆಸಿಕೊಂಡು ನಂತರ ಗದಗಿನ ವೀರೇಶ್ವರ ಪುಣ್ಯಾಶ್ರಮದ ಪಂಡಿತ ಪುಟ್ಟರಾಜ ಗವಾಯಿಗಳಲ್ಲಿ ಅಭ್ಯಾಸ ಮಾಡಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಸುಗಮ ಸಂಗೀತವನ್ನು ಗ್ವಾಲಿಯರ್ ಘರಾಣಾ ಶೈಲಿಯಲ್ಲಿ ಅಭ್ಯಾಸ ಮಾಡಿ ವಿದ್ವತ್ ಗ್ರೇಡ್ ಹಾಗೂ ಸಂಗೀತ ವಿಶಾರದ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸಾವಿರಾರು ಸಂಖ್ಯೆಯ ಹಾಡುಗಳನ್ನು ಹಾಡಿರುವ ದೇವೇಂದ್ರಕುಮಾರ ಅವರು ಸುಮಾರು 900ಕ್ಕೂ ಅಧಿಕ ಧ್ವನಿಸುರುಳು ಸಿಡಿಗಳಲ್ಲಿ ಇವರು ಹಾಡಿದ ಹಾಡುಗಳನ್ನು ಕೇಳಬಹುದು. ಸಾಕಷ್ಟು ಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇವರ ಹಾಡುಗಾರಿಕೆಯನ್ನು ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಮೆಚ್ಚಿಕೊಂಡಿದ್ದನ್ನು ನೆನಪಿಸಿಕೊಂಡ ಪತ್ತಾರ ಅವರು ಎದೆತುಂಬಿಹಾಡುವೆನು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಎಸ್.ಪಿ.ಬಿಯವರ ಜೊತೆಗೆ ಹಾಡಿ ಮೆಚ್ಚುಗೆಗೆ ಪಾತ್ರವಾಗಿದ್ದೆ ಎಂದರು. ರೇಡಿಯೊ ದೂರದರ್ಶನ ಹಾಗೂ ವಿವಿಧ ಸುದ್ಧಿವಾಹಿನಿಗಳು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಆರಾಧಾನ ಸಂಗೀತೋತ್ಸವ ಕರ್ನಾಟಕ ಗಾನ ಕಲಾ ಪರಿಷತ್ ಆಯೋಜಿಸುವ ವಾರ್ಷಿಕ ಸಂಗೀತ ಸಮ್ಮೇಳನದಲ್ಲಿ ಗಾಯನ ಹಂಪಿ ಪುರಂದರ ಉತ್ಸವ ಆನೆಗೊಂದಿ ಇಟಗಿ ಹೀಗೆ ಅನೇಕ ಉತ್ಸವಗಳಲ್ಲಿ ಸಂಗೀತದ ಕಂಪು ಪಸರಿಸಿದ್ದಾರೆ. ಕಲಾಶ್ರೀ ಶರಣ ಸಂಗೀತರತ್ನ ನಾಡಪ್ರಭು ಕೆಂಪೇಗೌಡ ವಚನಗಾನ ಪ್ರಶಸ್ತಿ ಮಹರ್ಷಿ ವಾಲ್ಮೀಕಿ ಹೀಗೆ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಹಾಡುಗಾರಿಕೆ ಜೊತೆಗೆ ಸಂಗೀತವನ್ನೂ ಬೆಳಸಲು ಅಖಿಲ ಕರ್ನಾಟಕ ಗಾನಯೋಗಿ ಸ್ವರಸಾನಿಧ್ಯ ಟ್ರಸ್ಟ್ ಸ್ಥಾಪಿಸಿದ್ದಾರೆ.
ಸಿರಿಕಂಠದ ಮೂಲಕ ಹರಡಿದ ಸಿರಿಗಂಧ
ಕುಷ್ಟಗಿ ತಾಲ್ಲೂಕಿನ ತೆಗ್ಗಿಹಾಳ ಗ್ರಾಮದ ಬಸಪ್ಪ ಭರಮಪ್ಪ ಚೌಡ್ಕಿ ಅವರಿಗೆ ಈಗ 93ರ ಹರೆಯ. ಜಾನಪದ ಕಲೆ ತಂದೆಯಿಂದ ಬಂದ ಬಳವಳಿ. ಬಾಲ್ಯದಲ್ಲಿಯೇ ಜಾನಪದ ಹಾಡುಗಳನ್ನು ಗುನುಗುತ್ತಿದ್ದ ಬಸಪ್ಪ ನಂತರ ತಮ್ಮ ಸಿರಿಕಂಠದ ಮೂಲಕ ಜನಪದ ಸಿರಿಗಂಧದ ಕಂಪು ಹರಡುವ ಮೂಲಕ ಜನರಲ್ಲಿ ಜನಪದ ಸಂಗೀತದ ಗುಂಗು ಹಿಡಿಸಿದ್ದನ್ನು ಇಲ್ಲಿಯ ಜನ ಈಗಲೂ ಗುರುತಿಸುತ್ತಾರೆ. ಕೃಷಿ ಕುಟುಂಬ ಮೂಲವಾದರೂ ಅದರತ್ತ ತಿರುಗಿನೋಡದ ಬಸಪ್ಪ ಬಾಲ್ಯದಿಂದ ಬದುಕಿನುದ್ದಕ್ಕೂ ಚೌಡ್ಕಿಪದ ಗೀಗೀ ಪದ ಲಾವಣಿ ರಿವಾಯತ್ ತತ್ವಪದಗಳನ್ನು ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮ ಕಲೆಯನ್ನು ಪ್ರಸ್ತುತಪಡಿಸುವ ಮೂಲಕ ಜನರನ್ನು ಮಂತ್ರಮುಗ್ಧಗೊಳಿಸುತ್ತ ಬಂದಿದ್ದಾರೆ. ಅಷ್ಟೇ ಅಲ್ಲದೆ ಶ್ರೀಕೃಷ್ಣ ಪಾರಿಜಾತ ಸಣ್ಣಾಟದಲ್ಲಿ ರಾಧೆ ಪಾತ್ರ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಕಲೆಗಾಗಿಯೇ ಜೀವನ ಮುಡಿಪಾಗಿಸಿದ್ದು ನೋಡಿದರೆ ಹಿರಿಯ ಜೀವಕ್ಕೆ ಎಂದೋ ಪ್ರಶಸ್ತಿ ಬರಬೇಕಿತ್ತು. ಆದರೆ ಪ್ರಶಸ್ತಿಗೆ ಬೆನ್ನುಹತ್ತದೆ ತಮ್ಮ ಕಾಯಕದಲ್ಲಿ ತೊಡಗಿ ನೇಪಥ್ಯಕ್ಕೆ ಸರಿಯುತ್ತಿದ್ದ ಮೂಲ ಜನಪದ ಅಡಿಪಾಯ ಗಟ್ಟಿಗೊಳಿಸುವಲ್ಲಿ ಬಸಪ್ಪ ಅವರ ಕೊಡುಗೆ ದೊಡ್ಡದು. ಅವರ ಈ ಸಾಧನೆಗೆ ಜನಪದ ಅಕಾಡೆಮಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದ್ದು ಹಿರಿಮೆಗೆ ಸಂದ ಗೌರವ. ಪ್ರಶಸ್ತಿಗೆ ಆಯ್ಕೆಯಾಗಿರುವ ಕುರಿತು ತೊದಲು ನುಡಿಗಳಲ್ಲಿಯೇ ಅನಿಸಿಕೆ ಹಂಚಿಕೊಂಡ ಬಸಪ್ಪ ಅವರು ಜನಪದ ಕಲೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವುದನ್ನು ಮರೆಯಲಿಲ್ಲ.
ಕುಷ್ಟಗಿ: ಸಂಘಟನಾ ಚತುರತೆ ಸಹಕಾರಿ ಧುರೀಣ
ಸಹಕಾರ ಕ್ಷೇತ್ರದಲ್ಲಿನ ಅದ್ವಿತೀಯ ಸಾಧನೆಗಾಗಿ ತಾಲ್ಲೂಕಿನ ಗುಮಗೇರಾ ಚಿಕ್ಕಗ್ರಾಮದ 66ರ ಹರೆಯದ ಶೇಖರಗೌಡ ಮಾಲೀಪಾಟೀಲ ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಿಸಿರಕ್ತದ ದಿನಗಳಲ್ಲಿಯೇ ಸಾಮಾಜ ಸೇವೆಗೆ ಕಾಲಿಟ್ಟ ಗೌಡರು ತಾವಷ್ಟೇ ಎತ್ತರಕ್ಕೆ ಬೆಳೆಯುವ ಬದಲು ಯುವಪಡೆಯನ್ನು ಸಮಾಜ ಸಾಹಿತ್ಯ ಸಹಕಾರ ವೈಚಾರಿಕ ಶೈಕ್ಷಣಿಕ ಕೃಷಿ ಮತ್ತಿತರೆ ಕ್ಷೇತ್ರಗಳತ್ತ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ. ಗ್ರಾಮದಲ್ಲಿ ಆರಂಭಿಸಿದ ಉದಯ ಯುವ ಮಂಡಳದ ಮೂಲಕ ಅವರ ಸಾರ್ವಜನಿಕ ಬದುಕು ಉದಯವಾಗುತ್ತದೆ. ಆರಂಭದಲ್ಲಿ ರಾಜಕೀಯ ಆಡಳಿತಾತ್ಮಕ ಸಾಮಾಜಿಕ ವ್ಯವಸ್ಥೆಯಲ್ಲಿನ ಲೋಪದೋಷಗಳ ವಿರುದ್ಧ ಸೆಟೆದು ರಾಜಕೀಯ ಪ್ರಭುತ್ವದ ವಿರುದ್ಧ ಹೋರಾಟ ನಡೆಸಿದ ಶೇಖರಗೌಡರು ರಾಜಕೀಯ ವ್ಯಕ್ತಿಗಳನ್ನು ಎದುರುಹಾಕಿಕೊಂಡೇ ಬೆಳೆದು ಬಂದಿದ್ದಾರೆ. ಅಷ್ಟೇ ಅಲ್ಲ ರಾಜ್ಯ ಪ್ರಶಸ್ತಿ ದೊರಕಿಸಿಕೊಡುವ ಮೂಲಕ ಉದಯ ಯುವಕ ಮಂಡಳ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದಕ್ಕೆ ಪ್ರಮುಖ ಕಾರಣರಾಗಿದ್ದಾರೆ. ಹೆಚ್ಚಿನ ಬರವಣಿಗೆಯಲ್ಲಿ ತೊಡಗಲು ಸಾಧ್ಯವಾಗದಿದ್ದರೂ ಸಾಹಿತ್ಯ ಕ್ಷೇತ್ರದಲ್ಲಿಯ ಅವರ ಸೇವೆ ಅನುಪಮ. ಸಂಘಟನೆಯಲ್ಲೂ ಮುಂಚೂಣಿಯಲ್ಲಿದ್ದ ಶೇಖರಗೌಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಂಗಾವತಿಯಲ್ಲಿ ಯಶಸ್ವಿಯಾಗಿ ನಡೆಸಿ ಸಂಘಟನೆ ಚಾತುರ್ಯ ಮೆರೆದಿದ್ದರು. ಇನ್ನು ಸಹಕಾರ ಕ್ಷೇತ್ರದಲ್ಲಿ ಗೌಡರು ಹಿಂತಿರುಗಿ ನೋಡಿಲ್ಲ. ಯುವಕ ಮಂಡಳದಿಂದ ಹಿಡಿದು ಇಲ್ಲಿಯವರೆಗೂ ಅವರನ್ನು ಅರಸಿಬಂದ ಪ್ರಶಸ್ತಿಗಳು ಅಪಾರ. ಪ್ರಸ್ತುತ ಜಿಲ್ಲಾ ಸಹಕಾರ ಯೂನಿಯನ್ ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿದ್ದು ಅದರ ಚುಕ್ಕಾಣಿಯನ್ನೂ ಶೇಖರಗೌಡ ಅವರೇ ಹಿಡಿದ ಸಂದರ್ಭದಲ್ಲಿಯೇ ಪ್ರಶಸ್ತಿ ಬಂದಿದ್ದು ಅವರ ಖುಷಿ ಇಮ್ಮಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.