ADVERTISEMENT

ಮನಸೂರೆಗೊಂಡ ‘ಕೊಪಣಗಿರಿ ರಂಗ ಸಂಭ್ರಮ’

ಶಿಕ್ಷಕರ ಕಲಾ ಸಂಘದ ದಶಮಾನೋತ್ಸವ, ಮೂರು ನಾಟಕಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 5:21 IST
Last Updated 20 ಸೆಪ್ಟೆಂಬರ್ 2022, 5:21 IST
ಚೋರ ಚರಣದಾಸ... ಕೊಪ್ಪಳದ ಸಾಹಿತ್ಯ ಭವನದಲ್ಲಿ ಶಿಕ್ಷಕರ ಕಲಾ ಸಂಘದಿಂದ ನಡೆದ ‘ಚೋರ ಚರಣದಾಸ’ ನಾಟಕದ ದೃಶ್ಯ–ಪ್ರಜಾವಾಣಿ ಚಿತ್ರ
ಚೋರ ಚರಣದಾಸ... ಕೊಪ್ಪಳದ ಸಾಹಿತ್ಯ ಭವನದಲ್ಲಿ ಶಿಕ್ಷಕರ ಕಲಾ ಸಂಘದಿಂದ ನಡೆದ ‘ಚೋರ ಚರಣದಾಸ’ ನಾಟಕದ ದೃಶ್ಯ–ಪ್ರಜಾವಾಣಿ ಚಿತ್ರ   

ಕೊಪ್ಪಳ: ಮುಂದೆ ಏನಾಗುತ್ತದೆಯೋ ಎಂದು ಕುತೂಹಲ ಭರಿತವಾಗಿ ರಂಗದ ಮೇಲೆ ದೃಷ್ಟಿ ನೆಟ್ಟು ಕುಳಿತಿದ್ದ ರಂಗಾಸಕ್ತರಿಗೆ ನಾಟಕದಲ್ಲಿ ಧುತ್ತೆಂದು ಬರುತ್ತಿದ್ದ ದಿಢೀರ್‌ ತಿರುವು ಅಚ್ಚರಿ ಮೂಡಿಸುತ್ತಿತ್ತು. ಹೀಗೆ ಪ್ರತಿ ಹಂತದಲ್ಲಿ ಕುತೂಹಲ, ಕಾತರತೆ ಹಾಗೂ ನಿರೀಕ್ಷೆ ಮೂಡಿಸುತ್ತ ಸಾಗಿದ ಮೂರು ನಾಟಕಗಳು ಜನರ ಮನಸೂರೆಗೊಂಡವು.

ಶಿಕ್ಷಕರ ಕಲಾ ಸಂಘವು ದಶಮಾನೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಕೊಪಣಗಿರಿ ರಂಗ ಸಂಭ್ರಮ’ ಕಾರ್ಯಕ್ರಮ ಸೋಮವಾರ ವಿದ್ಯುಕ್ತವಾಗಿ ತೆರೆ ಕಂಡಿತು.

ಭಾನುವಾರ ರಾತ್ರಿ ಕಾರ್ಯಕ್ರಮ ಉದ್ಘಾಟನೆಗೊಂಡು ಸಂಘದ ಸದಸ್ಯರಿಂದ ಮೊದಲು ‘ಚೋರ ಚರಣದಾಸ’ ನಾಟಕ ಪ್ರದರ್ಶನವಾಯಿತು. ಶಿಕ್ಷಕರ ಕಲಾ ಸಂಘದವರೇ ಇದರಲ್ಲಿ ಅಭಿನಯಿಸಿದ್ದು ವಿಶೇಷ. ಈ ನಾಟಕವನ್ನು ಬಹಳಷ್ಟು ಜನ ಕೊನೆಯ ತನಕ ವೀಕ್ಷಿಸಿದರು.

ADVERTISEMENT

ಸೋಮವಾರ ಕೊಪ್ಪಳದ ಸಮೀಪದ ಚಿಕ್ಕಬಿಡ್ನಾಳದ ವಿಸ್ತಾರ ರಂಗ ಶಾಲೆ ಮಕ್ಕಳಿಂದ ನಡೆದ ‘ಕಡ್ಲಿಮಟ್ಟಿ ಸ್ಟೇಷನ್‌‘ ನಾಟಕದಲ್ಲಿನ ಮನೋಜ್ಞ ಅಭಿನಯಕ್ಕೆ ರಂಗಾಸಕ್ತರಿಂದ ಮೆಚ್ಚುಗೆ ವ್ಯಕ್ತವಾಯಿತು. ಧಾರವಾಡದ ರಂಗದ್ವಾರ ಸಾಂಸ್ಕೃತಿಕ ಸಂಸ್ಥೆ ಕಲಾವಿದರು ಪ್ರದರ್ಶಿಸಿದ ‘ಕನಸಿನ ಖೂನಿ’ ನಾಟಕ ಕೂಡ ಜನರ ಚಪ್ಪಾಳೆ ಗಿಟ್ಟಿಸಿತು.

ಉದ್ಘಾಟನೆ: ನಾಟಕಕ್ಕೂ ಮೊದಲು ನಡೆದ ವೇದಿಕೆ ಕಾರ್ಯಕ್ರಮವನ್ನು ಸಂಸದ ಕರಡಿ ಸಂಗಣ್ಣ ಉದ್ಘಾಟಿಸಿ ‘ಶಿಕ್ಷಕರ ಕಲಾ ಸಂಘ ಹತ್ತು ವರ್ಷಗಳಿಂದ ಮಾಡಿಕೊಂಡು ಬಂದ ಸಾಮಾಜಿಕ, ಶೈಕ್ಷಣಿಕ ಮತ್ತು ಪರಿಸರ ಕಾರ್ಯಗಳು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಮಕೃಷ್ಣ ಆಶ್ರಮದ ಚೈತನ್ಯಾನಂದ ಸ್ವಾಮೀಜಿ, ಸಮಾಜ ಸೇವಕ ಸಿ.ವಿ. ಚಂದ್ರಶೇಖರ, ವಾರ್ತಾ ಮತ್ತು ಪ್ರಚಾರ ಇಲಾಖೆ ಉಪನಿರ್ದೇಶಕ ಮಂಜುನಾಥ ಡೊಳ್ಳಿನ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ, ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸನಗೌಡ ಪಾಟೀಲ, ಕಲಾ ಸಂಘದ ಅಧ್ಯಕ್ಷ ರಾಮಣ್ಣ ಶ್ಯಾವಿ ಹಾಗೂ ಪ್ರಾಣೇಶ ಪೂಜಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.