
ಪರಿಸರ ಮಾಲಿನ್ಯ ಖಂಡಿಸಿ ಇಂದು ಕೊಪ್ಪಳ ಬಂದ್: ಮುಚ್ಚಿದ ಅಂಗಡಿಗಳು, ಬಾರದ ಬಸ್‌ಗಳು
ಕೊಪ್ಪಳ: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ಜಂಟಿ ಕ್ರಿಯಾವೇದಿಕೆ ಮಂಗಳವಾರ ಕೊಪ್ಪಳ ಹಾಗೂ ಭಾಗ್ಯನಗರ ಬಂದ್ ಕರೆ ನೀಡಿದ್ದು ಅಂಗಡಿಗಳು ಮುಚ್ಚಿದ್ದವು.
ಸದಾ ಜನಸಂದಣಿಯಿಂದ ಕೂಡಿರುತ್ತಿದ್ದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಬಸ್‌ಗಳ ಸಂಚಾರ ಸ್ಥಗಿತವಾಗಿತ್ತು. ಬೆಳಿಗ್ಗೆ ಬಸ್ ನಿಲ್ದಾಣದ ಸಮೀಪದಲ್ಲಿ ಬೇಕರಿ ಹಾಗೂ ಕೆಲ ಕಿರಾಣಿ ಅಂಗಡಿಗಳನ್ನು ತೆಗೆಯಲಾಗಿತ್ತು. ಬೈಕ್ ಮೂಲಕ ಬಂದ ಹೋರಾಟಗಾರರು ಬಲವಂತವಾಗಿ ಬಂದ್ ಮಾಡಿಸಿದರು. ಜವಾಹರ ರಸ್ತೆಯಲ್ಲಿಯೂ ತೆರೆದಿದ್ದ ಅಂಗಡಿಗಳನ್ನು ಮುಚ್ಚಿಸಲಾಯಿತು.
ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳು ವಿಸ್ತರಣೆಯಾದರೆ ಕೊಪ್ಪಳವನ್ನೇ ಸ್ಥಳಾಂತರಿಸಬೇಕಾದ ಅನಿವಾರ್ಯತೆ ಎದುರಾತ್ತದೆ. ಆದ್ದರಿಂದ ಬಂದ್‌ಗೆ ಬೆಂಬಲ ನೀಡಿ ಎಲ್ಲರೂ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಆಟೊದ ಮೂಲಕ ಸಂಘಟಕರು ಪ್ರಚಾರ ಮಾಡುತ್ತಿದ್ದ ಚಿತ್ರಣ ಕಂಡುಬಂದಿತು.
ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮುಂದಾಳತ್ವದಲ್ಲಿ ಕಳೆದ ವರ್ಷದ ಫೆ. 24ರಂದೇ ಕೊಪ್ಪಳ ಬಂದ್ ಮಾಡಲಾಗಿತ್ತು. ಅದೇ ನೆನಪಿಗಾಗಿ ಮಂಗಳವಾರ ಕೂಡ ಬಂದ್ ಕರೆ ನೀಡಲಾಗಿದೆ. ಆಟೊಗಳ ಸಂಚಾರ, ಜನರ ಓಡಾಟ ಮತ್ತು ಸರ್ಕಾರಿ ಶಾಲೆಗಳು ಎಂದಿನಂತೆ ನಡೆಯುತ್ತಿವೆ. ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಪೊಲೀಸರನ್ನು ನಿಯೋಜಿಸಲಾಗಿದೆ. ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಮಂಗಳವಾರ ನಿಗದಿಯಾಗಿದ್ದ ಕೊಪ್ಪಳ ವಿಶ್ವವಿದ್ಯಾಲಯದ ಮೊದಲ ಸೆಮಿಸ್ಟರ್ ಪರೀಕ್ಷೆ ಫೆ. 26ಕ್ಕೆ ಮುಂದೂಡಲಾಗಿದೆ. ಸಂಜೆ 6 ಗಂಟೆ ತನಕ ಬಂದ್ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.