
ಕೊಪ್ಪಳ: ಜಿಲ್ಲಾಕೇಂದ್ರದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ಸೋಮವಾರ ನಡೆದ ಸಭೆಯಲ್ಲಿ ಚಾಟಿ ಬೀಸಿದ್ದು, ತ್ವರಿತವಾಗಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ತಾಕೀತು ಮಾಡಿದ್ದಾರೆ. ಕೆಲ ದಿನಗಳಲ್ಲಿ ಮತ್ತೊಂದು ಪರಿಶೀಲನಾ ಸಭೆ ನಡೆಸಲಿದ್ದು ಅಷ್ಟರಲ್ಲಿ ಸವಲತ್ತು ಕಲ್ಪಿಸದಿದ್ದರೆ ಕ್ರಮ ವಹಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದಾಗ ಇಲ್ಲಿನ ಗಂಜ್ ವೃತ್ತ ಮತ್ತು ಬೆಳವಿನಾಳ ಬಳಿ ಇರುವ ತರಕಾರಿ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿದಾಗ ರೈತರು ಸೌಲಭ್ಯಗಳ ಕೊರತೆ ಸಮಸ್ಯೆಯನ್ನು ಹಂಚಿಕೊಂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸುವಂತೆಯೂ ಅವರು ಜಿಲ್ಲಾಧಿಕಾರಿಗೆ ಸೂಚಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಸೋಮವಾರ ಮೊದಲು ಎಪಿಎಂಸಿ ಹಾಗೂ ಇತರೆ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ವಾಹನಗಳ ನಿಲುಗಡೆ, ಬೆಳಕು, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಎಪಿಎಂಸಿಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿದ್ದರೆ ಹಳ್ಳಿಯಿಂದ ಬರುವ ರೈತರಿಗೆ ತೊಂದರೆಯಾಗುತ್ತದೆ. ಇಲ್ಲಿಗೆ ಬರುವ ರೈತರಿಗೆ ಯಾವುದೇ ಸಮಸ್ಯೆಗಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಂಬಂಧಿಸಿದ ಅಧಿಕಾರಿಗಳ ಮೇಲಿದೆ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಜಾನುವಾರುಗಳ ಮಾರುಕಟ್ಟೆಯ ಸಮಸ್ಯೆಗಳು ಏನಾದರೂ ಇವೆಯಾ ಎಂದು ಪಶು ಅಧಿಕಾರಿಗಳನ್ನು ಕೇಳಿದಾಗ ಅವರು ಯಾವುದೇ ಸಮಸ್ಯೆಗಳಿಲ್ಲ ಎಂದು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು. ತ್ಯಾಜ್ಯ ವಿಲೇವಾರಿ ನಿರ್ವಹಣೆ ಸರಿಯಾಗಿಲ್ಲ. ದಾವಣಗೆರೆ ಜಿಲ್ಲೆಯಲ್ಲಿ ಇದರ ನಿರ್ವಹಣೆ ಚೆನ್ನಾಗಿದ್ದು ಅದರಂತೆಯೇ ನಮ್ಮಲ್ಲಿಯೂ ಆಗಬೇಕು ಎಂದು ಸೂಚಿಸಿದರು.
ಕೃಷಿ ಇಲಾಖೆಯ ಉಪನಿರ್ದೇಶಕ ಎಲ್. ಸಿದ್ದೇಶ್ವರ, ಕೃಷಿ ಮಾರಾಟ ಇಲಾಖೆಯ ಅಧಿಕಾರಿ ವೀರಭದ್ರಯ್ಯ ಹಿರೇಮಠ, ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ, ಕೃಷಿ ಉತ್ಪನ್ನ ಮಾರುಕಟ್ಟೆ ಕೊಪ್ಪಳ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ ಹಿರೇಮಠ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಾರುತಿ ಹಾಗೂ ಜಿಲ್ಲೆಯ ಇತರೆ ಎಪಿಎಂಸಿ ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.
ಎಪಿಎಂಸಿ 5.30ಕ್ಕೆ ಆರಂಭಿಸಲು ಸೂಚನೆ
ಕೊಪ್ಪಳ: ಎಪಿಎಂಸಿಗಳಲ್ಲಿ ಯಾವುದೇ ಕಮಿಷನ್ ಪಡೆಯಬಾರದು ಎಂದು ದೊಡ್ಡದಾಗಿ ಕಾಯಂ ಆಗಿ ಇರುವಂತೆ ಫಲಕ ಅಳವಡಿಸಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿ ಮಧ್ಯರಾತ್ರಿ ಬದಲು ಬೆಳಗಿನ ಜಾವ 5.30ಕ್ಕೆ ಗಂಟೆಗೆ ಆರಂಭಿಸಬೇಕು. ಬೆಳವಿನಾಳ ಎಪಿಎಂಸಿಗೆ ತೆರಳಲು ಸಂಪರ್ಕ ರಸ್ತೆ ಮಾಡಿಸಬೇಕು ಜಿಲ್ಲೆಯ ಎಪಿಎಂಸಿಗಳಲ್ಲಿ ಎಷ್ಟು ನಿವೇಶನಗಳು ಇವೆ. ಅವುಗಳಲ್ಲಿ ಎಷ್ಟು ಜನ ನಿಯಮ ಉಲ್ಲಂಘನೆ ಮಾಡಿದ್ದಾರೆ. ಅವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ಎಲ್ಲಾ ಕಡೆ ವೇಬ್ರಿಡ್ಜ್ ಇದೆಯೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಕಾರ್ಮಿಕ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಕೊಡಿಸುವ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಕೃಷಿ ಮಾರುಕಟ್ಟೆ ಅಧಿಕಾರಿ ಮತ್ತು ಕಾರ್ಯದರ್ಶಿಗಳು ಏನು ಮಾಡುತ್ತಿದ್ದೀರಾ ಜಿಲ್ಲೆಯ ಕೆಲವು ಕಡೆ ಸ್ವಚ್ಚತೆ ಇಲ್ಲ. ಎಚ್ಚೆತ್ತುಕೊಳ್ಳದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.–ಸುರೇಶ ಇಟ್ನಾಳ, ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.