
ಪರಿಸರ ಮಾಲಿನ್ಯ ವಿರೋಧಿಸಿ ಫೆಬ್ರುವರಿ 24ರಂದು ಕೊಪ್ಪಳ ಬಂದ್
ಕೊಪ್ಪಳ: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಜಿಲ್ಲಾಕೇಂದ್ರದ ಸಮೀಪದ ಕಾರ್ಖಾನೆಗಳನ್ನು ಹತೋಟಿಗೆ ತರಬೇಕು ಹಾಗೂ ಹೊಸದಾಗಿ ಕಾರ್ಖಾನೆಗಳ ವಿಸ್ತರಣೆಗೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿ 100 ದಿನಗಳಿಂದ ಇಲ್ಲಿ ಅನಿರ್ದಿಷ್ಟ ಧರಣಿ ನಡೆಯುತ್ತಿದ್ದು, ಫೆ. 24ರಂದು ಕೊಪ್ಪಳ ಬಂದ್ ಮಾಡಲು ನಿರ್ಧರಿಸಲಾಗಿದೆ.
ಧರಣಿಯ 100ನೇ ದಿನದ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ಜಂಟಿ ಕ್ರಿಯಾ ವೇದಿಕೆಯ ಪ್ರಮುಖರು ಕೊಪ್ಪಳ ಬಂದ್ ವಿಷಯ ಪ್ರಕಟಿಸಿದರು.
ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ‘2025ರಲ್ಲಿ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಕೊಪ್ಫಳ ಬಂದ್ ಮಾಡಲಾಗಿತ್ತು. ಈ ಬಾರಿಯೂ ಬಂದ್ ಮಾಡಿ ನಮ್ಮ ಹೋರಾಟ ಗಟ್ಟಿಗೊಳಿಸುತ್ತೇವೆ’ ಎಂದು ತಿಳಿಸಿದರು.
ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ’ಕೊಪ್ಪಳ ಸಮೀಪದ ಗ್ರಾಮಗಳಲ್ಲಿ ಒಂದೇ ಕಡೆ ನೂರಾರು ಕಾರ್ಖಾನೆಗಳು ಕೇಂದ್ರೀಕೃತವಾಗಿರುವುದರಿಂದ ಜನ ಉತ್ತಮ ಭೂಮಿ, ಗಾಳಿಗೆ ಪರದಾಡುವಂತಾಗಿದೆ. ಸರ್ಕಾರ ತ್ವರಿತವಾಗಿ ಜನ ಸಮಸ್ಯೆ ಪರಿಹರಿಸಬೇಕು. ಇಲ್ಲವಾದರೆ ಜನರೇ ಮುಂದಿನ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಬೇಕು’ ಎಂದು ಕರೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.