ADVERTISEMENT

ಕೊಪ್ಪಳ | ಜವಾಬ್ದಾರಿಯಿಂದ ಸಮೀಕ್ಷೆ ನಡೆಸಿ: ಜಿಲ್ಲಾಧಿಕಾರಿ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 6:47 IST
Last Updated 14 ಸೆಪ್ಟೆಂಬರ್ 2025, 6:47 IST
ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಕುರಿತ ಸಮೀಕ್ಷೆಯ ಜಿಲ್ಲಾಮಟ್ಟದ  ಮಾಸ್ಟರ್‌ ಟ್ರೇನರ್‌ಳಿಗಾಗಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಚಾಲನೆ ನೀಡಿದರು
ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಕುರಿತ ಸಮೀಕ್ಷೆಯ ಜಿಲ್ಲಾಮಟ್ಟದ  ಮಾಸ್ಟರ್‌ ಟ್ರೇನರ್‌ಳಿಗಾಗಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಚಾಲನೆ ನೀಡಿದರು   

ಕೊಪ್ಪಳ: ‘ಜಿಲ್ಲೆಯಾದ್ಯಂತ ಸೆ.22ರಿಂದ ಅಕ್ಟೋಬರ್ 7ರವರೆಗೆ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಕುರಿತ ಸಮೀಕ್ಷಾ ಕಾರ್ಯದಲ್ಲಿ ಯಾವ ಕುಟುಂಬ ಅಥವಾ ವ್ಯಕ್ತಿ ದಾಖಲಾತಿ ಪ್ರಕ್ರಿಯೆಯಿಂದ ಹೊರ ಉಳಿಯದಂತೆ ನೋಡಿಕೊಳ್ಳುವುದು ಮುಖ್ಯ’ ಎಂದು ಸುರೇಶ ಬಿ. ಇಟ್ನಾಳ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸಮೀಕ್ಷೆ-2025ರ ಕುರಿತ ಜಿಲ್ಲಾಮಟ್ಟದ ಮಾಸ್ಟರ್  ಟ್ರೇನರ್‌ಗಳಿಗಾಗಿ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದವರು.

‘ಸಮೀಕ್ಷಾ ಸಿಬ್ಬಂದಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಯಾವ ಮನೆಯೂ ಬಿಟ್ಟುಹೋಗದಂತೆ ಎಚ್ಚರವಹಿಸಬೇಕು. ಕೆಲಸ ಪ್ರಾರಂಭಿಸುವ ಮುನ್ನ ಸಮೀಕ್ಷೆಯಲ್ಲಿ ಕೇಳಬಹುದಾದ ಪ್ರತಿ ಪ್ರಶ್ನೆಯನ್ನೂ ಸರಿಯಾಗಿ ಅರ್ಥೈಸಿಕೊಂಡು ಕೆಲಸಕ್ಕೆ ಮುಂದಾಗಬೇಕು. ಗಣತಿದಾರರು ಕಡ್ಡಾಯವಾಗಿ ಐಡಿ ಕಾರ್ಡ್‍ಗಳನ್ನು ಧರಿಸಿರಬೇಕು. ಮಾಹಿತಿಯನ್ನು ಕುಟುಂಬದ ಸದಸ್ಯರಿಂದ ಕೇಳಿ ಪಡೆದುಕೊಳ್ಳಬೇಕು. ತರಬೇತಿ ಪಡೆದ ಗಣತಿದಾರರು ಯಾವುದೇ ಸಮಸ್ಯೆ ಎದುರಾದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಬೇಕು’ ಎಂದು ತಿಳಿಸಿದರು.

ADVERTISEMENT

ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಕೃಷ್ಣಮೂರ್ತಿ ದೇಸಾಯಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಅಜ್ಜಪ್ಪ ಸೊಗಲದ, ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಅಜ್ಮಿರ್ ಅಲಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರ್ ಕಾರ್ಯಾಗಾರದ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ನಾಗಮಣಿ ಹೊಸಮನಿ. ವಾರ್ತಾ ಇಲಾಖೆಯ ಸಹಾಯಕ ನಿರ್ದೆಶಕ ಸುರೇಶ ಜಿ. ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಮಾಸ್ಟರ ಟ್ರೈನರಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಗಣತಿದಾರರು ತಮ್ಮ ಮನೆಗಳ ಸಮೀಕ್ಷೆಗೆ ಬಂದಾಗ ಜಿಲ್ಲೆಯ ಸಾರ್ವಜನಿಕರು ಅವರಿಗೆ ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕು
ಸುರೇಶ ಬಿ. ಇಟ್ನಾಳ ಜಿಲ್ಲಾಧಿಕಾರಿ

150 ಮನೆಗಳಿಗೆ ಒಬ್ಬ ಗಣತಿದಾರ

‘ಜಿಲ್ಲೆಯಲ್ಲಿ 2685 ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. 150 ಮನೆಗಳಿಗೆ ಒಬ್ಬ ಗಣತಿದಾರರು ಇರಲಿದ್ದಾರೆ. ಜಿಲ್ಲೆಯಲ್ಲಿ ಅಂದಾಜು 3 ಲಕ್ಷ 55ಸಾವಿರ ಮನೆಗಳಿದ್ದು ಈ ಎಲ್ಲಾ ಮನೆಗಳಿಗೆ ಈಗಾಗಲೇ ಜೆಸ್ಕಾಂನವರು ಶೇ85 ಜಿಯೊ ಟ್ಯಾಗ್ ಮಾಡಿದ್ದಾರೆ. ಮಾಡದ ಮನೆಗಳಿಗೆ ಚೀಟಿಗಳನ್ನು ಅಂಟಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.