ADVERTISEMENT

ಗಂಗಾವತಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡದ ಕಳಪೆ ಕಾಮಗಾರಿ: ಇಬ್ಬರು ಅಮಾನತು

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 4:35 IST
Last Updated 26 ಜೂನ್ 2025, 4:35 IST
   

ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಕಾಮಗಾರಿಯನ್ನು ಕಳಪೆಯಾಗಿ ನಿರ್ವಹಣೆ ಮಾಡಿದ್ದಕ್ಕೆ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

‌ಇಲಾಖೆಯ ಕೊಪ್ಪಳದ ಕಾರ್ಯಪಾಲಕ ಎಂಜಿನಿಯರ್‌ ಎಚ್‌. ಸತ್ಯಪ್ಪ ಮತ್ತು ಗಂಗಾವತಿ ಉಪವಿಭಾಗದ ಪ್ರಭಾರ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪಿ. ವಿಜಯಕುಮಾರ್ ಅಮಾನತುಗೊಂಡವರು.

ಎಂಜಿನಿಯರಿಂಗ್‌ ಕಾಲೇಜಿಗೆ ಲ್ಯಾಬೋರೇಟರಿ ಉಪಕರಣಗಳು, ಡಿಜಿಟಲ್‌ ಗ್ರಂಥಾಲಯ, ವಾಚನಾಲಯಕ್ಕೆ ಪೀಠೋಪಕರಣಗಳು, ಐದು ಕಂಪ್ಯೂಟರ್‌ಗಳ ಸೆಟ್‌, ವಾಹನ ನಿಲುಗಡೆ ವ್ಯವಸ್ಥೆ ಸೇರಿದಂತೆ ಇತರ ಕಾಮಗಾರಿಗಳನ್ನು ಇಲಾಖೆ ವತಿಯಿಂದ ಮಾಡಲಾಗಿತ್ತು. ಈ ಎಲ್ಲ ಕಾಮಗಾರಿಗಳನ್ನು ₹68.40 ಲಕ್ಷ ವೆಚ್ಚದಲ್ಲಿ ನಿರ್ವಹಿಸಲು ಅನುಮೋದನೆ ನೀಡಲಾಗಿತ್ತು.

ADVERTISEMENT

ಕಾರ್ಯಾದೇಶದ ಅನ್ವಯ ಒಟ್ಟು 90 ಸಾಮಗ್ರಿಗಳನ್ನು ಒದಗಿಸಬೇಕಿತ್ತು. ಇದರಲ್ಲಿ 82 ಸಾಮಗ್ರಿಗಳನ್ನು ಮಾತ್ರ ನೀಡಲಾಗಿದೆ. ಲ್ಯಾಬೋರೇಟರಿಗಳಿಗೆ ಒದಗಿಸಿದ 47 ಯಂತ್ರೋಪಕರಣಗಳಲ್ಲಿ 18ರಲ್ಲಿ ಸಾಕಷ್ಟು ನ್ಯೂನ್ಯತೆಗಳು ಕಂಡುಬಂದಿವೆ. ನಿಯಮಗಳಿಗೆ ಅನುಗುಣವಾಗಿ ಅವುಗಳನ್ನು ಅಳವಡಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಮಾನತಿನ ಜೊತೆಗೆ ಇಬ್ಬರೂ ಅಧಿಕಾರಿಗಳನ್ನು ಇಲಾಖಾ ವಿಚಾರಣೆಗೆ ಹೊರಡಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಚೇತನ ಎಂ. ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.