
ಕೊಪ್ಪಳ: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಮತ್ತು ಹೊಸದಾಗಿ ವಿಸ್ತರಣೆಗೆ ಸಜ್ಜಾಗಿರುವ ಕಾರ್ಖಾನೆಗಳನ್ನು ವಿರೋಧಿಸಿ ಜಿಲ್ಲಾಕೇಂದ್ರದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಗುರುವಾರ 91 ದಿನಗಳನ್ನು ಪೂರೈಸಿದೆ. ಇದು ಜಿಲ್ಲೆಯ ಇತಿಹಾಸದಲ್ಲಿ ಸುದೀರ್ಘ ದಿನಗಳಿಂದ ನಡೆಯುತ್ತಿರುವ ನಿರಂತರ ಹೋರಾಟವೆನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.
ಮೊದಲು ರಾಯಚೂರು ಜಿಲ್ಲೆಯ ವ್ಯಾಪ್ತಿಯಲ್ಲಿದ್ದ ಕೊಪ್ಪಳವನ್ನು ಪ್ರತ್ಯೇಕವಾಗಿ ಜಿಲ್ಲೆ ಮಾಡಬೇಕು ಎಂದು ಅನೇಕ ಹೋರಾಟಗಳು, ಪ್ರತಿಭಟನೆಗಳು ನಡೆದಿದ್ದವು. ಆಗ ಜನರ ಹೋರಾಟವನ್ನು ಜವಾಹರ ರಸ್ತೆಯಲ್ಲಿದ್ದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಡೆಸಲಾಗಿತ್ತು. 1991ರಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ನಿರಂತರ 80 ದಿನಗಳ ಕಾಲ ನಡೆದಿದ್ದ ಧರಣಿಯೇ ಇದುವರೆಗಿನ ಜಿಲ್ಲೆಯ ನಿರಂತರ ಧರಣಿಯ ದಾಖಲೆಯ ಹೆಗ್ಗಳಿಕೆ ಹೊಂದಿತ್ತು.
ಆಗ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರನ್ನು ಮೇ 21ರಂದು ಹತ್ಯೆ ಮಾಡಲಾಗಿತ್ತು. ಈ ಘಟನೆ ಕಾರಣಕ್ಕಾಗಿ ಹೋರಾಟವನ್ನು ಇಲ್ಲಿ ನಿಲ್ಲಿಸಲಾಗಿತ್ತು. 1993ರಲ್ಲಿ ಕೊಪ್ಪಳದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಪ್ರತ್ಯೇಕ ಜಿಲ್ಲೆಯ ಹೋರಾಟವನ್ನು ಜೀವಂತವಾಗಿ ಇರಿಸಲಾಗಿತ್ತು. ಸಾಕಷ್ಟು ಹೋರಾಟದ ಬಳಿಕ 1997ರಲ್ಲಿ ಕೊಪ್ಪಳ ಜಿಲ್ಲೆಯಾಗಿ ಘೋಷಣೆಯಾಗಿದ್ದು ಈಗ ಇತಿಹಾಸ. ಈಗ ಜಿಲ್ಲೆಯ ಸುದೀರ್ಘ ಹೋರಾಟದ ದಾಖಲೆಯನ್ನು ಮೀರಿ ಕಾರ್ಖಾನೆಗಳ ವಿರುದ್ಧದ ಹೋರಾಟ ಮುಂದುವರಿದಿದೆ.
ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ಬಲ್ಡೋಟ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಸಿಂಡಿಯಾ, ಅಲ್ಟ್ರಾಟೆಕ್, ಕೆ.ಪಿ.ಆರ್. ಕೆಮಿಕಲ್ಸ್ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಹೋರಾಟ ನಡೆಸುತ್ತಿವೆ. ಮೊದಲ ದಿನದಿಂದಲೂ ಅನೇಕ ಸಂಘಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ವಿವಿಧ ರಾಜಕೀಯ ಪಕ್ಷಗಳು ಮುಖಂಡರು, ವಿದ್ಯಾರ್ಥಿಗಳು, ಸಾಹಿತಿಗಳು ಹೀಗೆ ಅನೇಕರು ಈಗಿನ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದು ಈಗಿನ ಧರಣಿ ’ಶತಕ’ದತ್ತ ದಾಪುಗಾಲು ಇರಿಸಿದೆ.
ಈಗಿನ ಹೋರಾಟಕ್ಕೆ 15 ಖಾನಾವಳಿಗಳ ಮಾಲೀಕರು, ಹೆಸರು ಬಹಿರಂಗಪಡಿಸಲು ಬಯಸದ 60ಕ್ಕೂ ಹೆಚ್ಚು ದಾನಿಗಳು, ಗುತ್ತಿಗೆದಾರರು, ಮಹಿಳಾ ಸಂಘದವರು, ಉದ್ಯಮಿಗಳು, ಸಾಹಿತಿಗಳು ಹೀಗೆ ಅನೇಕರು ಬೆಂಬಲ ನೀಡುವ ಮೂಲಕ ಹೋರಾಟಕ್ಕೆ ಪ್ರೋತ್ಸಾಹ ಒದಗಿಸಿದ್ದಾರೆ. ಪ್ರಸ್ತುತ ನಗರಸಭೆ ಮಳಿಗೆಗಳ ಮುಂಭಾಗದಲ್ಲಿ ನಡೆಯುತ್ತಿರುವ ಧರಣಿಗೆ ಹೊರಜಿಲ್ಲೆಗಳ ಹಾಗೂ ರಾಜ್ಯಮಟ್ಟದ ಮುಖಂಡರು, ವಿಷಯ ತಜ್ಞರು ಭೇಟಿ ನೀಡಿ ಧರಣಿಯಲ್ಲಿ ಪಾಲ್ಗೊಂಡಿದ್ದರು.
‘ನಮ್ಮ ಹೋರಾಟಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅನೇಕರು ನೆರವು ನೀಡಿದ್ದರಿಂದ ನಿರಂತರ ಧರಣಿ ನಡೆಸಲು ಸಾಧ್ಯವಾಗಿದೆ. ಎಲ್ಲವನ್ನೂ ನಾವು ಪಾರದರ್ಶಕವಾಗಿ ಲೆಕ್ಕ ಇಟ್ಟಿದ್ದೇವೆ. ಈಗಿರುವ ಕಾರ್ಖಾನೆಗಳು ವಿಸ್ತರಣೆಯಾದರೆ ಕೊಪ್ಪಳವನ್ನು ಸ್ಥಳಾಂತರಿಸದೆ ಪರ್ಯಾಯ ಮಾರ್ಗವಿಲ್ಲ ಎನ್ನುವ ಸ್ಥಿತಿಗೆ ತಲುಪಿದ್ದೇವೆ. ಆದ್ದರಿಂದ ತಾತ್ವಿಕ ಅಂತ್ಯದ ತನಕ ಧರಣಿ ಮುಂದುವರಿಯುತ್ತದೆ’ ಎಂದು ಜಂಟಿ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದರು.
ಕೊಪ್ಪಳ ಪ್ರತ್ಯೇಕ ಜಿಲ್ಲೆಗಾಗಿ 80 ದಿನ ನಿರಂತರ ನಡೆದಿದ್ದ ಹೋರಾಟ 91ನೇ ದಿನದ ಹೋರಾಟಕ್ಕೆ ಎನ್‌ಕೆಪಿಎಂ ಪ್ರೌಢಶಾಲೆ ಮಕ್ಕಳ ಬೆಂಬಲ 100ನೇ ದಿನಕ್ಕೆ ಬಹಿರಂಗ ಸಮಾವೇಶಕ್ಕೆ ನಿರ್ಧಾರ
ನಾವು ನಡೆಸುತ್ತಿರುವುದು ಹೋರಾಟ ಯಾರ ವಿರುದ್ಧವೂ ಅಲ್ಲ. ನಮ್ಮ ಬದುಕಿಗೆ ಹಾಗೂ ಕೊಪ್ಪಳದ ಉಳಿವಿಗಾಗಿ ಮಾತ್ರ. ಜನ ಮುಕ್ತವಾಗಿ ಹೋರಾಟಕ್ಕೆ ಬರಬೇಕು.ಅಲ್ಲಮಪ್ರಭು ಬೆಟ್ಟದೂರು ವೇದಿಕೆಯ ಪ್ರಧಾನ ಸಂಚಾಲಕ
ಅಭಿವೃದ್ಧಿಯ ಹೆಸರಿನಲ್ಲಿ ಸ್ಥಾಪಿಸಿದ ಕೈಗಾರಿಕೆಗಳು ನಮ್ಮ ಜೀವಕ್ಕೆ ಬಾಧೆಯನ್ನುಂಟು ಮಾಡುತ್ತಿವೆ. ನಮಗೆ ಮೊದಲು ಜೀವ ಮತ್ತು ಆರೋಗ್ಯ ಉಳಿಯಬೇಕು. ಆನಂತರವಷ್ಟೇ ಅಭಿವೃದ್ಧಿ ಬಗ್ಗೆ ಮಾತನಾಡೋಣ.ರಂಗಮ್ಮ ಕೆ. ಶಿಕ್ಷಕಿ
100ನೇ ದಿನದ ಹೋರಾಟಕ್ಕೆ ಹಲವು ಅತಿಥಿಗಳು ಕೊಪ್ಪಳ: ಅನಿರ್ದಿಷ್ಟ ಧರಣಿ ಆರಂಭವಾಗಿ ಫೆ. 7ರಂದು ನೂರು ದಿನಗಳಾಗಲಿದ್ದು ಅಂದು ಅನೇಕರು ಹೋರಾಟದಲ್ಲಿ ಪಾಲ್ಗೊಳ್ಳುವರು. ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಗದುಗಿನ ತೋಂಟದ ಸಿದ್ಧರಾಮ ಸ್ವಾಮೀಜಿ ಕೊಪ್ಪಳ ಜಿಲ್ಲೆಯ ಮೈನಳ್ಳಿ ಸಿದ್ದೇಶ್ವರ ಶಿವಾಚಾರ್ಯರು ಸಾಹಿತಿ ರಂಜಾನ್ ದರ್ಗಾ ರಂಗನಿರ್ದೇಶಕ ಸೂರ್ಯಕಾಂತ ಗುಣಕೀಮಠ ಲೇಖಕ ಅಸ್ಲಮ್ ಪಾಷಾ ಭಾಗವಹಿಸುವುದು ಖಚಿತವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.