ಪ್ರಮೋದ ಕುಲಕರ್ಣಿ
ಕೊಪ್ಪಳ: ಮೂರು ಜನ ಮಕ್ಕಳ ಪೈಕಿ ಇಬ್ಬರ ದೇಹದ ಅಂಗಾಂಗಗಳಲ್ಲಿ ಸ್ವಾಧೀನವಿಲ್ಲ, ತಂದೆಗೆ ಮಕ್ಕಳನ್ನು ನೋಡಿಕೊಳ್ಳುವುದು ಬಿಟ್ಟರೆ ಹೊರಗಡೆ ಹೋಗಿ ಕೆಲಸ ಮಾಡುವಷ್ಟು ಶಕ್ತಿಯಿಲ್ಲ. ನಿಶ್ಚಿತ ಆದಾಯವೂ ಇಲ್ಲ, ಮನೆಯ ಆಧಾರಸ್ಥಂಭವಾಗಿದ್ದ ಯಜಮಾನಿಯೇ ಮೃತಪಟ್ಟ ಬಳಿಕ ಅವರ ಕುಟುಂಬದಲ್ಲಿ ನಿರಂತರವಾಗಿ ಉಳಿದಿದ್ದು ಶೋಕ ಹಾಗೂ ಕಣ್ಣೀರು ಮಾತ್ರ.
ಇದು ಪ್ರಸ್ತುತ ಇಲ್ಲಿನ ಗಾಂಧಿನಗರದಲ್ಲಿ ವಾಸವಾಗಿರುವ ಗಂಗಮ್ಮ ದೊಡ್ಡಮನಿ ಅವರ ಕುಟುಂಬದ ಅಸಹಾಯಕ ಪರಿಸ್ಥಿತಿ. ಇತ್ತೀಚೆಗೆ ನಗರದಲ್ಲಿ ನಡೆದ ಅಪಘಾತದಲ್ಲಿ ಮನೆಗೆ ಆಸರೆಯಾಗಿದ್ದ ಗಂಗಮ್ಮ ಮೃತಪಟ್ಟಿದ್ದಾರೆ. ನಿತ್ಯ ಕೂದಲು, ಬೊಂಬಾಯಿ ಮಿಠಾಯಿ, ಚಾಪೆ... ಹೀಗೆ ಅನೇಕ ವಸ್ತುಗಳನ್ನು ಮಾರಾಟ ಮಾಡಿ ಬಂದಷ್ಟು ಒಂದಷ್ಟು ಕಿರು ಆದಾಯದಲ್ಲಿ ಮನೆ ನಡೆಸುತ್ತಿಳು. ಆಕೆ ದುಡಿದು ತರುತ್ತಿದ್ದ ಹಣವೇ ಕುಟುಂಬ ಸದಸ್ಯರ ಹೊಟ್ಟೆಗೆ ಆಸರೆಯಾಗಿತ್ತು. ಗಂಗಮ್ಮ ಮೃತಪಟ್ಟ ಬಳಿಕ ಅವರ ಕುಟುಂಬ ಬೀದಿಪಾಲಾಗಿದೆ. ದುಡಿಯುವವರು ದಿಕ್ಕಿಲ್ಲದೆ ಮುಂದಿನ ಬದುಕು ಹೇಗೆ ಎನ್ನುವ ಚಿಂತೆಗೆ ಸಿಲುಕಿದೆ.
ತಗಡಿನ ಸ್ವಂತ ಸೂರು ಹೊಂದಿದ್ದ ಕಾರಣ 15 ವರ್ಷಗಳ ಹಿಂದೆ ಗಂಗಮ್ಮ ಹಾಗೂ ಪತಿ ಗಂಗಪ್ಪ ಅವರ ಕುಟುಂಬ ಗಾಂಧಿನಗರದಿಂದ ಕೊಪ್ಪಳದಲ್ಲಿಯೇ ಇರುವ ಸಿದ್ದೇಶ್ವರ ನಗರದಲ್ಲಿ ವಾಸ ಮಾಡುತ್ತಿದೆ. ಗಂಗಮ್ಮನ ಪತಿಯ ಮನೆಯಿರುವ ಗಾಂಧಿನಗರಕ್ಕೆ ಮಕ್ಕಳು ಮತ್ತ ಪತಿ ವಾಪಸ್ ಬಂದಿದ್ದಾರೆ.
ಗಂಗಮ್ಮ ಹಾಗೂ ಗಂಗಪ್ಪ ದಂಪತಿಗೆ ಒಂಬತ್ತು ವರ್ಷದ ಶಿವಾನಂದ ಎನ್ನುವ ಮಗನಿದ್ದು ಅವನಿಗೆ ತಿಳಿವಳಿಕೆ ಸಾಲದು. ವೀರೇಶ ಎನ್ನುವ ಇನ್ನೊಬ್ಬ ಮಗನಿಗೆ ಎದ್ದು ಅಡ್ಡಾಡಲು ಆಗುವುದಿಲ್ಲ. ಹುಟ್ಟಿನಿಂದಲೇ ಈ ಸಮಸ್ಯೆಯಿದ್ದು, ಮೊದಲಿನಿಂದಲೂ ತಾಯಿಯೇ ಆಸರೆಯಾಗಿದ್ದಳು. ಈಗಲೂ ಕಾಯಂ ಆಗಿ ಒಬ್ಬರು ಆರೈಕೆದಾರರು ಬೇಕು. ಒಬ್ಬ ಮಗಳಿದ್ದು ಸ್ವತಂತ್ರವಾಗಿ ಓಡಾಡಲು ಕಾಲುಗಳಲ್ಲಿ ಸ್ವಾಧೀನವಿಲ್ಲ. ಮಕ್ಕಳಲ್ಲಿ ಕಾಡುತ್ತಿರುವ ಅಂಗವಿಕಲತೆ ತಂದೆಯನ್ನು ಮೊದಲಿನಿಂದಲೂ ಚಿಂತೆಗೆ ದೂಡಿದ್ದು, ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿ ಇರುತ್ತಿದ್ದರು. ಪತ್ನಿ ಊರೂರು ಅಲೆದಾಡಿ ಒಂದಷ್ಡು ಬಿಡಿಗಾಸು ಸಂಪಾದಿಸುತ್ತಿದ್ದಳು. ಈಗ ಗಂಗಮ್ಮ ಮೃತಪಟ್ಟಿದ್ದರಿಂದ ಅವರ ಕುಟುಂಬ ಬೀದಿಗೆ ಬಂದುಬಿದ್ದಿದೆ.
ಗಂಗಪ್ಪ ದೊಡ್ಡಮನಿಗೆ ಒಟ್ಟು ಆರು ಜನ ಸಹೋದರರು ಇದ್ದು, ತಾತ್ಕಾಲಿಕವಾಗಿ ಅವರ ಹಿರಿಯ ಸಹೋದರ ಸಂಜೀವಪ್ಪ ದೊಡ್ಡಮನಿ ಆಸರೆಯಾಗಿದ್ದಾರೆ. ಮುಂದಿನ ಬದುಕು ಹೇಗೆ, ಮಕ್ಕಳು ನಿರ್ವಹಣೆ ಹೇಗೆ? ಎನ್ನುವುದು ಅವರಿಗೆ ತೋಚದಾಗಿದೆ ಎನ್ನುತ್ತಾರೆ ಅವರ ಸಂಬಂಧಿಕರು.
‘ಅಂಗವಿಕಲ ಮಕ್ಕಳು, ಸ್ಥಿತಪ್ರಜ್ಞೆಯಿಲ್ಲದೆ ಗಂಡನನ್ನು ಕಟ್ಟಿಕೊಂಡು ಗಂಗಮ್ಮ ಹೇಗೊ ಜೀವನ ನಡೆಸಿಕೊಂಡು ಹೋಗುತ್ತಿದ್ದಳು. ಅನ್ನಕ್ಕಾಗಿ ಚಾಪೆ ಹೊತ್ತು ಬಸ್ ನಿಲ್ದಾಣದ ಕಡೆ ಹೋಗುತ್ತಿದ್ದ ಆಕೆಯ ಬದುಕು ಅಪಘಾತದಲ್ಲಿ ಮುರುಟಿ ಹೋಗಿದೆ. ಇನ್ನು ಆ ಕುಟುಂಬಕ್ಕೆ ಯಾರು ದಿಕ್ಕು’ ಎಂದು ಸಂಬಂಧಿಕರು ಕಣ್ಣೀರು ಹಾಕಿದರು.
ನನ್ನ ತಮ್ಮನ ಎರಡು ಅಂಗವಿಕಲ ಮಕ್ಕಳು ಮತ್ತು ತಮ್ಮನ ಕುಟುಂಬದ ದಯನೀಯ ಸ್ಥಿತಿ ಕಂಡು ನೋವಾಗಿದೆ. ಮಾನವೀಯ ನೆಲೆಗಟ್ಟಿನಲ್ಲಿ ಯಾರಾದರೂ ನೆರವಾಗಬೇಕುಸಂಜೀವಪ್ಪ ದೊಡ್ಡಮನಿ ಗಂಗಪ್ಪನ ಸಹೋದರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.