ಕೊಪ್ಪಳ: ಜಿಲ್ಲಾಕೇಂದ್ರದ ಸಮೀಪದಲ್ಲಿ ವಿಸ್ತರಣೆಗೆ ಉದ್ದೇಶಿಸಿರುವ ಬಲ್ದೋಟ ಉಕ್ಕಿನ ಕಾರ್ಖಾನೆ ವಿರುದ್ಧ ರೈತರು ಮತ್ತು ಹೋರಾಟಗಾರರ ಆಕ್ರೋಶ ಮತ್ತೆ ಭುಗಿಲೆದ್ದಿದ್ದು ಈಗ ಸಂಘರ್ಷದ ಹಾದಿ ತಲುಪಿದೆ.
ಉದ್ದೇಶಿತ ಕಾರ್ಖಾನೆ ಸ್ಥಳಕ್ಕೆ ಶುಕ್ರವಾರ ರೈತರು ಹಾಗೂ ಕುರಿಗಾಯಿಗಳು ಕುರಿ ಹಾಗೂ ಜಾನುವಾರು ನುಗ್ಗಿಸಿದರು. ಈ ವೇಳೆ ಬಲ್ಡೋಟಾ ಕಂಪನಿಯ ಭದ್ರತಾ ಸಿಬ್ಬಂದಿ ಜೊತೆ ಮಾತಿನ ಚಕಮಕಿ, ನೂಕಾಟ ನಡೆಯಿತು. ಬಲ್ದೋಟಾ ಮುಖ್ಯದ್ವಾರದ ಮುಂದೆ ಸೇರಿದ ರೈತರು ಜಾನುವಾರುಗಳಿಗೆ ಕುಡಿಯಲು ನೀರಿಲ್ಲ, ಮೇಯಿಸಲು ಜಾಗ ಕೂಡ ಇಲ್ಲ. ಆದ್ದರಿಂದ ಬಸಾಪುರ ಕೆರೆ ಸುತ್ತಲೂ ಕುರಿ ದನ ಮೇಯಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಭದ್ರತಾ ಸಿಬ್ಬಂದಿ ಮುಖ್ಯದ್ವಾರದ ಸುತ್ತಲೂ ಬ್ಯಾರಿಕೇಡ್ ಹಾಕಿ ಜನ, ಜಾನುವಾರು ಒಳಗೆ ಬರದಂತೆ ತಡೆದರು. ಈ ವೇಳೆ ರೈತರು ಮತ್ತು ಭದ್ರತಾ ಸಿಬ್ಬಂದಿ ನಡುವೆ ವಾಗ್ವಾದ ನಡೆದು ರೈತರು ಬ್ಯಾರಿಕೇಡ್ ಕಿತ್ತು ಹಾಕಿ ಆಕಳುಗಳನ್ನು ಕೆರೆ ಜಾಗದ ಕಡೆಗೆ ಕಳುಹಿಸಿದರು. ಈ ಹೋರಾಟದ ವೇಳೆ ಕುರಿಗಾಯಿಗಳು ಮತ್ತು ದನಗಾಯಿಗಳು ಮಾತ್ರ ಇದ್ದರು.
ಈ ಗಲಾಟೆಯಿಂದ ಕಂಪನಿಯ ಭದ್ರತಾ ಸಿಬ್ಬಂದಿಯಿಂದ ಬಸಾಪುರದ ಕುರಿಗಾಯಿ ದೇವಪ್ಪ ಹಾಲಳ್ಳಿ ಎಂಬ ಯುವಕನ ಮೇಲೆ ಹಲ್ಲೆಯಾಗಿದೆ. ನಿತ್ರಾಣವಾಗಿ ಬಿದ್ದ ದೇವಪ್ಪನನ್ನು ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತು. ಸ್ಥಳಕ್ಕೆ ಬಂದ ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ಕಾರ್ಖಾನೆ ಮುಖ್ಯದ್ವಾರದ ಮೂಲಕ ಕೆರೆ ಕಡೆ ಹೋಗುತ್ತಿದ್ದ ಕುರಿ, ದನ ತಡೆಯಲು ಪ್ರಯತ್ನಿಸಿದರು. ಸುಪ್ರೀಂ ಕೋರ್ಟ್ ಆದೇಶವಿದ್ದು ಯಾವುದೇ ಕಾರಣಕ್ಕೂ ಇಲ್ಲಿಗೆ ಕುರಿ, ದನ ಮೇಯಿಸುವಂತಿಲ್ಲ ಎಂದು ಹೇಳಿದರೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದರು.
ವಿಷಯ ತಿಳಿಯುತ್ತಿದ್ದಂತೆಯೇ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನದ ಸಮಿತಿ ಸದಸ್ಯರು ಜಿಲ್ಲಾಸ್ಪತ್ರೆ ಮುಂದೆ ಜಮಾಯಿಸಿ ಹಲ್ಲೆಗೆ ಒಳಗಾದ ದೇವಪ್ಪನನ್ನು ಚಿಕಿತ್ಸೆಗೆ ರವಾನಿಸಿದರು. ನಂತರ ಹೋರಾಟಗಾರರು ಬಲ್ದೋಟ ಕಾರ್ಖಾನೆಯ ದೌರ್ಜನ್ಯ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ: ಭದ್ರತಾ ಸಿಬ್ಬಂದಿಯಿಂದ ನಡೆದ ಹಲ್ಲೆ ಘಟನೆ ಖಂಡಿಸಿ ಕೊಪ್ಪಳ ಬಚಾವೊ ಆಂದೋಲನ ಸಮಿತಿ ಮತ್ತು ಪರಿಸರ ಉಳಿಸಿ ಜಂಟಿ ವೇದಿಕೆಯು ಶನಿವಾರ ಬೆಳಿಗ್ಗೆ 10 ಗಂಟೆಗೆ ಅಶೋಕ ವೃತ್ತದಿಂದ ಬಸವೇಶ್ವರ ವೃತ್ತದ ತನಕ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ.
ನಮ್ಮ ಮೇಲೆ ಎಷ್ಟೇ ಪ್ರಕರಣ ದಾಖಲಿಸಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಕೊಪ್ಪಳದಿಂದ ಬಲ್ಡೋಟಾ ಕಂಪನಿ ವಾಪಸ್ ಹೋಗುವ ತನಕ ಹೋರಾಟ ನಿರಂತರ.ಅಲ್ಲಮಪ್ರಭು ಬೆಟ್ಟದೂರು ಹೋರಾಟಗಾರರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.