ADVERTISEMENT

ಹಣ್ಣು, ಜೇನು, ಅಣಬೆ ಮೇಳ ಸಮಾರೋಪ: ₹45 ಲಕ್ಷಕ್ಕೂ ಅಧಿಕ ವಹಿವಾಟು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 6:34 IST
Last Updated 18 ಫೆಬ್ರುವರಿ 2026, 6:34 IST
.
.   

ಕೊಪ್ಪಳ: ತೋಟಗಾರಿಕೆ ಇಲಾಖೆ ವತಿಯಿಂದ ಮಹಾ ಶಿವರಾತ್ರಿ ಅಂಗವಾಗಿ ನಡೆದ ಹಣ್ಣು, ಜೇನು ಮತ್ತು ಅಣಬೆ ಮೇಳದಲ್ಲಿ ಈ  ಬಾರಿ ₹45 ಲಕ್ಷಕ್ಕೂ ಅಧಿಕ ವಹಿವಾಟು ನಡೆದಿದೆ.

ಮೇಳದಲ್ಲಿ ಹತ್ತಕ್ಕೂ ಹೆಚ್ಚಿನ ವಿವಿಧ ಜಾತಿಯ ಅಣಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಪ್ರತಿ ಅಣಬೆಯು ಪ್ರತಿ ಕೆ.ಜಿ.ಗೆ ₹5 ಸಾವಿರದಿಂದ ₹3 ಲಕ್ಷಕ್ಕೂ ಹೆಚ್ಚಿನ ಬೆಲೆಗಳನ್ನು ಹೊಂದಿದ್ದವು. ಜನ ಅಣಬೆಗಳನ್ನು ವೀಕ್ಷಿಸಿ ಬೆಳೆಯುವ ಕುರಿತು ಮಾಹಿತಿ ಪಡೆದರು. ತಾಜಾ ಅಣಬೆಗಳು ಹಾಗೂ ಅಣಬೆಯ ವಿವಿಧ ಪರಿಕರಗಳಾದ ಒಣಗಿದ ಅಣಬೆ, ಅಣಬೆ ಪೌಡರ್, ಅಣಬೆಯಲ್ಲಿ ತಯಾರಿಸಿದ ಬಿಸ್ಕೇಟ್, ಚಕ್ಕಲಿ, ಉಪ್ಪಿನಕಾಯಿ, ಅಣಬೆ ಮಸಾಲ ಪೌಡರ್ ಹಾಗೂ ಅಣಬೆಯಲ್ಲಿ ತಯಾರಿಸಿದ ವಿವಿಧ ಪದಾರ್ಥಗಳನ್ನು ಮಾರಾಟ ಮಾಡಿದರು.

ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ, ಕರಬೂಜ, ಅಂಜೂರ, ಪೇರಲ, ಬಾಳೆ, ಡ್ರ್ಯಾಗನ್ ಹಣ್ಣು, ಸಪೋಟಾ, ಪಪ್ಪಾಯ ಹಾಗೂ ಜೇನು ಹಾಗೂ ಜೇನಿನ ವಿವಿಧ ಉತ್ಪನ್ನಗಳನ್ನು ಸಹ ಮಾರಾಟ ಮಾಡಲಾಯಿತು.

ADVERTISEMENT

‘ಐದು ದಿನಗಳ ಕಾಲ ನಡೆದ ಮೇಳದಲ್ಲಿ 30,000ಕ್ಕೂ ಹೆಚ್ಚು ಗ್ರಾಹಕರು ಭಾಗವಹಿಸಿದ್ದರು. ₹45 ಲಕ್ಷಕ್ಕೂ ಹೆಚ್ಚಿನ ವಹಿವಾಟು ನಡೆದಿದೆ. ಗ್ರಾಹಕರು ಹಳದಿ ತಿರುಳಿನ ಕಲ್ಲಂಗಡಿ ಹಣ್ಣನ್ನು  ಹೆಚ್ಚು ಖರೀದಿಸಿದರು. ಕೆಂಪು ತಿರುಳಿನ ಕಲ್ಲಂಗಡಿ ಸಹ ಮಾರಾಟವಾಗಿ ಒಟ್ಟು 30 ಟನ್‌ಗೂ ಹೆಚ್ಚು ಮಾರಾಟವಾಯಿತು’ ಎಂದು ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣ ಸಿ. ಉಕ್ಕುಂದ ತಿಳಿಸಿದ್ದಾರೆ. ಮೂರೂ ಸಾವಿರಕ್ಕೂ ಹೆಚ್ಚು ಟನ್‌ನ ಕಲ್ಲಂಗಡಿ ಹಣ್ಣುಗಳನ್ನು ಗ್ರಾಹಕರು ಸವಿದರು. 

‘ತೋಟಗಾರಿಕೆ ಇಲಾಖೆಯಿಂದ ಏರ್ಪಡಿಸಿದ ಮೇಳವು ಅಣಬೆಗೆ ಮಾರುಕಟ್ಟೆ ಒದಗಿಸಿದ್ದು, ಇಲಾಖೆಯಿಂದ ಸಹಾಯಧನ ಪಡೆದು ಅಣಬೆ ಬೆಳೆಯುತ್ತಿದ್ದೇವೆ’ ಎಂದು ಬಸಾಪುರದ ರೈತ ಭೀಮಪ್ಪ ಕೊರವರ ಅಭಿಪ್ರಾಯ ಹಂಚಿಕೊಂಡರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.