
ಬಿ. ಪ್ರಾಣೇಶ್
ಕೊಪ್ಪಳ: ಗವಿಮಠದ ಜಾತ್ರಾ ಮಹೋತ್ಸವದ ವೇದಿಕೆ ಕಾರ್ಯಕ್ರಮಗಳು ಮುಗಿದು ಒಂದು ದಿನವಾಗಿದ್ದು, ಅಪಾರ ಪ್ರಮಾಣದಲ್ಲಿ ಭಕ್ತರು ಗುರುವಾರವೂ ಗವಿಮಠದ ಸನ್ನಿಧಿಗೆ ಬಂದರು.
ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಬುಧವಾರ ತಡರಾತ್ರಿಯ ತನಕವೂ ಭಕ್ತರ ನಿರ್ವಹಣೆ ಹಾಗೂ ಮಠದ ಇನ್ನಿತರ ಕಾರ್ಯಗಳನ್ನು ಮುಗಿಸಿ ಬೆಳಿಗ್ಗೆಯೂ ಭಕ್ತರೊಂದಿಗೆ ಓಡಾಡಿದರು. ಪೂಜಾ ಕೆಲಸವನ್ನು ಮುಗಿಸಿಕೊಂಡು ಮಧ್ಯಾಹ್ನ 1 ಗಂಟೆಗೆ ಬಂದಿದ್ದು ಭಕ್ತರು ಗದ್ದುಗೆ ಹಾಗೂ ಸ್ವಾಮೀಜಿ ದರ್ಶನ ಪಡೆಯಲು ಮಠದ ಕೆಳಗಿನ ತನಕ ಸರತಿಯಲ್ಲಿ ನಿಂತಿದ್ದರು. ದಾಸೋಹದಲ್ಲಿಯೂ ಜನರ ದಟ್ಟಣೆ ಕಂಡುಬಂದಿತು.
ಮಹಾರಥೋತ್ಸವ ಹಾಗೂ ನಂತರದ ಎರಡು ದಿನ ಬರಲು ಸಾಧ್ಯವಾಗದೆ ಇದ್ದವರು ಮಠಕ್ಕೆ ಬಂದು ಗದ್ದುಗೆ ದರ್ಶನ ಪಡೆದುಕೊಂಡರು. ಬಂದವರನ್ನು ಸಮಾಧಾನದಿಂದ ಮಾತನಾಡಿಸಿದ ಸ್ವಾಮೀಜಿ ’ಪ್ರಸಾದ ಮಾಡ್ರಿ’ ಎಂದರು. ಸಂಜೆಯಾಗುತ್ತಿದ್ದಂತೆಯೇ ಭಕ್ತರ ಸಂಖ್ಯೆಯೂ ಹೆಚ್ಚಾಗಿ ಮಕ್ಕಳು ಆಟಿಕೆಗಳತ್ತ ಕಂಡುಬಂದರೆ, ಮಹಿಳೆಯರು ಬಳೆ ಖರೀದಿಯಲ್ಲಿ ತೊಡಗಿದ್ದ ಚಿತ್ರಣ ಕಂಡುಬಂದಿತು.
ಬುಧವಾರ ರಾತ್ರಿ ನಡೆದ ಹಾಸ್ಯೋತ್ಸವದಲ್ಲಿ ಮಾತಿನ ಕಚಗುಳಿ ಜೊತೆಗೆ ಬದುಕಿನ ಪಾಠವನ್ನೂ ಹೇಳಿದ ಹಾಸ್ಯ ಭಾಷಣಕಾರ ಬಿ. ಪ್ರಾಣೇಶ್ ‘ಕೊಪ್ಪಳ ಜಾತ್ರೆ ಕನಸು ಹುಟ್ಟುಹಾಕುವ ಕಾರ್ಯಕ್ರಮವಾಗಿದೆ. ಮಾತೃ ಭಾಷೆಯ ಶಿಕ್ಷಣ ಕಲಿತರೆ ಎಲ್ಲಿ ಬೇಕಾದರೂ ಬದುಕುಬಹುದು. ಮಾತೃಭಾಷೆಯ ನಮ್ಮನ್ನು ಬದುಕಿಸುವ ಭಾಷೆ’ ಎಂದರು.
ಸ್ವಚ್ಛತಾ ಕಾರ್ಯ:
ಜಾತ್ರಾ ಮಹೋತ್ಸವದ ಅಂಗವಾಗಿ ಕೊಪ್ಪಳದ ಗಾಂಧಿ ಬಳಗದ ಸದಸ್ಯರು ಮೂರು ದಿನಗಳ ಕಾಲ ಮಠದ ಬಲಭಾಗದ ಬೆಟ್ಟ ಹಾಗೂ ಪ್ರಸಾದಕ್ಕೆ ಹೋಗುವ ಮಾರ್ಗವನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಿದರು.
ಬೆಳಿಗ್ಗೆ ಐದು ಗಂಟೆಯಿಂದ ಒಂದೂವರೆ ತಾಸು ಸ್ವಚ್ಛತಾ ಕಾರ್ಯ ಮಾಡಿದ ಬಳಿಕ ಧ್ಯಾನ, ಭಜನ್ ಹಾಗೂ ಗಾಂಧಿ ಚಿಂತನ ಮಾಡಿದರು. ನಾಗರಾಜನಾಯಕ ಡಿ.ಡೊಳ್ಳಿನ, ವಿರೇಶ ಮೇಟಿ, ಪ್ರಾಚಾರ್ಯ ಪ್ರಭುರಾಜ ನಾಯಕ, ಪ್ರಕಾಶಗೌಡ, ಪ್ರಾಣೇಶ ಪೂಜಾರ, ಶಿವಪ್ಪ ಜೋಗಿ, ಪತ್ರಕರ್ತ ಶರಣಪ್ಪ ಬಾಚಲಾಪುರ, ಆನಂದತೀರ್ಥ ಪ್ಯಾಟಿ, ಬಸವರಾಜ ಸವಡಿ, ಮಲ್ಲಪ್ಪ ಹವಳೆ, ಗುರುಸ್ವಾಮಿ, ಹೊಳಿಬಸಯ್ಯ, ವೀರೇಶ ಕೌಂಟಿ, ಅಂದಪ್ಪ ಬೋಳರೆಡ್ಡಿ, ಸತೀಶ ದನಗಳದೊಡ್ಡಿ, ಮಂಜುನಾಥ ಕುದುರಿ,ಗುರುರಾಜ, ಶರೀಫ್, ಶ್ರೀಪತಿ ವೀರಭದ್ರಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಘೋಷಣೆಗಳನ್ನು ಬರೆಸುವ ಮೂಲಕ ಹೋರಾಟವನ್ನು ಜನಸಮಾನ್ಯರ ಹತ್ತಿರ ತೆಗೆದುಕೊಂಡು ಹೋಗಿದ್ದಾರೆ ಇದಕ್ಕೆ ಪ್ರೇರಣೆಯಾದ ಸ್ವಾಮೀಜಿ ಕಾರ್ಖಾನೆ ವಿರೋಧಿ ಹೋರಾಟದಲ್ಲಿ ಎಲ್ಲರೊಟ್ಟಿಗೆ ಇದ್ದಾರೆಅಲ್ಲಮಪ್ರಭು ಬೆಟ್ಟದೂರು ವೇದಿಕೆಯ ಪ್ರಧಾನ ಸಂಚಾಲಕ
ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಬೆಟ್ಟ ಕಡಿದು ರಸ್ತೆ ನಿರ್ಮಿಸಬೇಕಾಯಿತು. ನಮ್ಮೂರು ಅರಣ್ಯ ಪ್ರದೇಶದಲ್ಲಿದೆ. ಈಗಲೂ ನಮ್ಮ ಮನೆಗೆ ಬಾಗಿಲು ಇಲ್ಲ. ನನ್ನ ಹೋರಾಟ ಈಗಲೂ ಮುಂದುವರಿದಿದೆಜಲಂಧರ್ ನಾಯಕ ಬೆಟ್ಟ ಕಡಿದ ಸಾಹಸಿ
ದೇಶದ ಯಾವುದೇ ಮೂಲೆಯಲ್ಲಿದ್ದರೂ ಸಾಧನೆ ಮಾಡಿದವರನ್ನು ಸಾಹಸಿಗಳನ್ನು ಗುರುತಿಸುವುದು ನಮ್ಮ ಕರ್ತವ್ಯ. ಜಾತ್ರೆ ಸಂದರ್ಭದಲ್ಲಿ ಗವಿಮಠ ಈ ಕೆಲಸವನ್ನು ನಿರಂತರ ಮಾಡುತ್ತಿದೆ.ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಗವಿಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.