ADVERTISEMENT

ಕೊಪ್ಪಳ | ಗ್ರಾ.ಪಂ: ಬಾಕಿ ಕರ ವಸೂಲಿಗೆ ಜಿ.ಪಂ. ಅಭಿಯಾನದ ಕಸರತ್ತು

ಮೂರು ದಿನಗಳ ವಿಶೇಷ ಅಭಿಯಾನ ಕಾರ್ಯದಲ್ಲಿ ₹1.25 ಕೋಟಿ ಸಂಗ್ರಹ

ಪ್ರಮೋದ ಕುಲಕರ್ಣಿ
Published 4 ನವೆಂಬರ್ 2025, 7:17 IST
Last Updated 4 ನವೆಂಬರ್ 2025, 7:17 IST
   

ಕೊಪ್ಪಳ: ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳು ಬಾಕಿ ಉಳಿಸಿಕೊಂಡಿರುವ ಕರ ವಸೂಲಾತಿಗೆ ವೇಗ ನೀಡಲು ಜಿಲ್ಲಾ ಪಂಚಾಯಿತಿ ಇತ್ತೀಚೆಗೆ ಅಭಿಯಾನ ಹಮ್ಮಿಕೊಂಡಿದ್ದು ಮೂರು ದಿನಗಳಲ್ಲಿ ₹1.25 ಕೋಟಿ ಸಂಗ್ರಹವಾಗಿದೆ. ಹೀಗೆಯೇ ಮೇಲಿಂದ ಮೇಲೆ ಅಭಿಯಾನ ನಡೆಸಿ ಕರ ಸಂಗ್ರಹದಲ್ಲಿ ಗರಿಷ್ಠ ಸಾಧನೆ ಮಾಡಲು ಕಸರತ್ತು ನಡೆಸುತ್ತಿದೆ.

ಜಿಲ್ಲೆಯಲ್ಲಿ ಒಟ್ಟು 153 ಗ್ರಾಮ ಪಂಚಾಯಿತಿಗಳಿದ್ದು, ಹಳೆಯ ಬಾಕಿಯೂ ಸೇರಿ ಒಟ್ಟು ₹70.52 ಕೋಟಿ ಸಂಗ್ರಹಿಸಬೇಕಿದೆ. ಅಕ್ಟೋಬರ್‌ 22ರ ತನಕ ₹6.43 ಕೋಟಿ ಸಂಗ್ರಹವಾಗಿತ್ತು. 23ರಿಂದ ಐದು ದಿನಗಳ ಕಾಲ ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ 6ರ ತನಕ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಗ್ರಾಮ ಪಂಚಾಯಿತಿಯು ಅಭಿಯಾನದ ಸಮಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ಕರವಸೂಲಾತಿಗೆ ಕ್ರಮ ವಹಿಸಬೇಕು, ಆಂದೋಲನದ ಬಗ್ಗೆ ಗ್ರಾಮದಲ್ಲಿ ಬ್ಯಾನರ್‌ ಅಳವಡಿಸಿ ಪ್ರಚಾರ ಮಾಡಬೇಕು, ಬಾಕಿ ಉಳಿಸಿಕೊಂಡವರ ಪಟ್ಟಿಯನ್ನು ತಯಾರಿಸಿ ಮನೆಮನೆಗೆ ಭೇಟಿ ನೀಡಿ ವಸೂಲಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿತ್ತು.

ಕರ ಪಾವತಿಗೆ ಜನರಲ್ಲಿ ಜಾಗೃತಿ ಮೂಡಿಸಲು ಸ್ವಚ್ಛ ವಾಹಿನಿ ವಾಹನದ ಜಿಂಗಲ್ಸ್‌ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಜಿಲ್ಲಾ ಪಂಚಾಯಿತಿಯಿಂದ ನಿರ್ದೇಶನ ನೀಡಲಾಯಿತು. ಕರ ಸಂಗ್ರಹಿಸಿ ಪ್ರತಿ ಗ್ರಾಮ ಪಂಚಾಯಿತಿಯು ತನ್ನ ಮಾಹಿತಿಯನ್ನು ಪ್ರತಿ ಎರಡು ಗಂಟೆಗಳಿಗೊಮ್ಮೆ ತಾಲ್ಲೂಕು ಪಂಚಾಯಿತಿ ವಿಷಯ ನಿರ್ವಾಹಕರಿಗೆ ನೀಡಬೇಕು, ಪ್ರತಿ ದಿನ ಸಂಜೆ ಜಿಲ್ಲಾ ಪಂಚಾಯಿತಿಯ ಸ್ವಚ್ಛ ಭಾರತ ಮಿಷನ್‌ ಸಮಾಲೋಚಕರಿಗೆ ಸಲ್ಲಿಸಬೇಕು ಎಂದು ಹೇಳಲಾಗಿತ್ತು. ಅಭಿಯಾನ ಒಟ್ಟು ಐದು ದಿನ ಹಮ್ಮಿಕೊಂಡಿದ್ದರೂ ಕೊನೆಯ ಎರಡು ದಿನ ಉಪಲೋಕಾಯುಕ್ತ ನ್ಯಾಯಮೂರ್ತಿ ಭೇಟಿ ನೀಡಿದ್ದರಿಂದ ಮೊದಲು ಮೂರು ದಿನ ಮಾತ್ರ ಅಭಿಯಾನ ನಡೆದಿದೆ.

ADVERTISEMENT

ಮುಂಬರುವ ದಿನಗಳಲ್ಲಿಯೂ ವಿಶೇಷ ಅಭಿಯಾನ ನಡೆಸಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಜಿಲ್ಲೆಯಲ್ಲಿ ಹೆಚ್ಚು ಗ್ರಾ.ಪಂ.ಗಳನ್ನು ಹೊಂದಿರುವ ಕೊಪ್ಪಳ ಹಾಗೂ ಕುಷ್ಟಗಿ ತಾಲ್ಲೂಕಿನಲ್ಲಿ ಈ ಅಭಿಯಾನಕ್ಕೆ ವಿಶೇಷ ಆದ್ಯತೆ ಕೊಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಪ್ಪಳ ತಾಲ್ಲೂಕು ವ್ಯಾಪ್ತಿಯ ಗ್ರಾ.ಪಂ.ಗಳಲ್ಲಿ ಪ್ರಸ್ತುತ ವರ್ಷದಲ್ಲಿ ಬರಬೇಕಾದ ಬೇಡಿಕೆ ₹3.56 ಕೋಟಿಯಲ್ಲಿ ₹1.29 ಕೋಟಿ ಸಂಗ್ರಹವಾಗಿದೆ. ಕುಷ್ಟಗಿ ತಾಲ್ಲೂಕಿನಲ್ಲಿ ₹3.61 ಕೋಟಿಯಲ್ಲಿ ₹1 ಕೋಟಿ ಕರ ಸಂಗ್ರಹವಾಗಿದೆ.

ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸೇರಿ ಒಟ್ಟು ಆರಂಭಿಕ ಬಾಕಿ ₹48.94 ಕೋಟಿ ಮತ್ತು ಪ್ರಸ್ತುತ ವರ್ಷ ಸಂಗ್ರಹವಾಗಬೇಕಾದ ಕರ ₹21.57 ಕೋಟಿ ಸೇರಿ ಒಟ್ಟು ₹70.52 ಕೋಟಿ ಕರ ಸಂಗ್ರಹದ ಗುರಿ ಹೊಂದಲಾಗಿದೆ. ಇದರಲ್ಲಿ ವಿಶೇಷ ಅಭಿಯಾನದಲ್ಲಿ ಸಂಗ್ರಹವಾದ ಹಣವೂ ಸೇರಿ ₹7.69 ಕೋಟಿ ಬಂದಿದ್ದು, ಉಳಿದ ಕರ ವಸೂಲಾತಿ ಆಗಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.