ADVERTISEMENT

ಕೊಪ್ಪಳ| ಕಾರ್ಖಾನೆಗಳ ವಿಷಾನಿಲದಿಂದ ಬದುಕು ನರಕ: ಸಾಹಿತಿ ಬಿ. ಪೀರಬಾಷ

82ನೇ ದಿನದ ಧರಣಿಗೆ ಗವಿಸಿದ್ದೇಶ್ವರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಬೆಂಬಲ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 5:19 IST
Last Updated 21 ಜನವರಿ 2026, 5:19 IST
ಕೊಪ್ಪಳದಲ್ಲಿ ಮಂಗಳವಾರ ನಡೆದ ಹೋರಾಟದಲ್ಲಿ ಗವಿಸಿದ್ದೇಶ್ವರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಬೆಂಬಲ ನೀಡಿದರು
ಕೊಪ್ಪಳದಲ್ಲಿ ಮಂಗಳವಾರ ನಡೆದ ಹೋರಾಟದಲ್ಲಿ ಗವಿಸಿದ್ದೇಶ್ವರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಬೆಂಬಲ ನೀಡಿದರು   

ಕೊಪ್ಪಳ: ಬಂಕಿಮ್‌ಚಂದ್ರ ಚಟರ್ಜಿ ಅವರ ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ ವಂದೇ ಮಾತರಂ ಗೀತೆಯ ಮಹತ್ವವನ್ನು ಸಾಹಿತಿ ಬಿ. ಪೀರಬಾಷ ಉಲ್ಲೇಖಿಸಿ ಮಾತನಾಡಿ, ‘ಇಲ್ಲಿ ಶುದ್ಧವಾದ ತಿಳಿಯಾದ ಜಲ, ಹಣ್ಣು ಹಂಪಲು ಇದ್ದರೂ ಕಾರ್ಖಾನೆಗಳ ಮಾಲಿನ್ಯದಿಂದ ಇಲ್ಲಿನ ನೆಲ ವಿಷಾನಿಲವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ವೇದಿಕೆ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯ 82ನೇ ದಿನದ ಹೋರಾಟದಲ್ಲಿ ಅವರು ಮಾತನಾಡಿದರು. ಬಲ್ಡೋಟ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸ್ ಇಂಡಿಯಾ ಸೇರಿದಂತೆ ವಿವಿಧ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಧರಣಿ ನಡೆಯುತ್ತಿದೆ. 

‘ದೇಶದ ತಿಳಿಕೊಳದ ಗಂಗೆ ಈ ಕಾರ್ಖಾನೆಗಳ ದಾಹ ತೀರಿಸಲಾಗದೆ ವಿಷವಾಗಿದ್ದಾಳೆ. ಆ ವಿಷದ ನಂಜು ಭಾರತ ಮಾತೆಯ ಮಕ್ಕಳಾದ ನಾವು ಕುಡಿದು ನಂಜುಂಡರಾಗಲು ಸಾಧ್ಯವೇ? ಮಲಯಗಳ ಮೇಲಿಂದ ಬರುವ ತಂಗಾಳಿಯಾಗಿ ಬೀಸುವ ಗಾಳಿ ಇಲ್ಲಿಯೇ ನಮ್ಮ ವಾಯುಪುತ್ರ ಆಂಜನೇಯ ಉದಯಿಸಿದ ನಾಡು ನಮ್ಮದು. ಅಂಥ ಜೀವಾತ್ಮ ಗಾಳಿದೇವ ಉದಯಿಸಿದ ಈ ನೆಲವೀಗ ಕಾರ್ಖಾನೆಗಳ ಉಗುಳುವ ವಿಷಾನಿಲವು ಜನರ ಜೀವ ತೆಗೆಯುತ್ತಿದೆ’ ಎಂದರು.

ADVERTISEMENT

ಎಸ್.ಜಿ. ಕಾಲೇಜು ವಿದ್ಯಾರ್ಥಿಗಳಾದ ನಂದೀಶ ಅಗಸಿಮನಿ, ಬಸವರಾಜ ಗಾರವಾಡ, ಯಶವಂತ ಪಾಟೀಲ, ಸಚಿನ್ ಗಡಾದ, ಸಾಹಿತಿ ಎಚ್.ಎಸ್. ಪಾಟೀಲ, ವೇದಿಕೆ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ.ಗೊಂಡಬಾಳ, ಬಿ.ಜಿ.ಕರಿಗಾರ, ಮಹಾದೇವಪ್ಪ ಎಸ್. ಮಾವಿನಮಡು, ವಿಜಯ ಮಹಾಂತೇಶ ಹಟ್ಟಿ, ಮಂಜುನಾಥ ಕವಲೂರು, ರತ್ನಮ್ಮ ದೊಡ್ಡಮನಿ, ವಿದ್ಯಾರ್ಥಿ ವಿನಾಯಕ ಮೇಟಿ, ಹನುಮಂತ ಪೂಜಾರ, ಮಲ್ಲಿಕಾರ್ಜುನ ಹುಲಿಕೇರಿ, ಮಲ್ಲೇಶಗೌಡ ಕುಷ್ಟಗಿ ಪಾಲ್ಗೊಂಡಿದ್ದರು.

ಕರಿಬೂದಿ ತೋರಿಸಿ ಗ್ರಾಮಸ್ಥರ ತರಾಟೆ

ಕೊಪ್ಪಳ ತಾಲ್ಲೂಕಿನ ಹಿರೇಬಗನಾಳ ಗ್ರಾಮದಲ್ಲಿ ಸೋಮವಾರ ವಿವಿಧ ಕಾರ್ಖಾನೆಗಳ ಪ್ರತಿನಿಧಿಗಳ ಜೊತೆ ಗ್ರಾಮಸ್ಥರು ಸಭೆ ನಡೆಸಿ ಮಾಲಿನ್ಯದ ಪರಿಣಾಮಗಳ ಬಗ್ಗೆ ತೋರಿಸಿದರು. ‘ವ್ಯಾಪಕವಾಗುತ್ತಿರುವ ಮಾಲಿನ್ಯ ಕಡಿಮೆ ಮಾಡಬೇಕು. ಇಲ್ಲವಾದರೆ ಕೆಲಸ ನಿಲ್ಲಿಸಬೇಕು’ ಎಂದು ಒಕ್ಕೊರಲಿನಿಂದ ಆಗ್ರಹಿಸಿದ ಗ್ರಾಮಸ್ಥರು ಕಾರ್ಖಾನೆಗಳ ಪ್ರತಿನಿಧಿಗಳಿಗೆ ಗ್ರಾಮ ಶಾಲೆ ಗುಡಿ ಹಾಗೂ ಮನೆಗಳನ್ನು ಸುತ್ತಾಡಿಸಿ ಕಪ್ಪುಬೂದಿ ತೋರಿಸಿದ್ದಾರೆ. ‘ಕಾರ್ಖಾನೆಗಳ ಮಾಲಿನ್ಯದಿಂದ ಪರಿಸರ ಸಂಪೂರ್ಣ ಹಾಳಾಗಿದೆ. ಕೃಷಿ ಚಟುವಟಿಕೆಗೆ ಗರ ಬಡಿದಿದೆ. ಇದರಿಂದಾಗಿ ಇಲ್ಲಿ ಬದುಕಲು ಕೂಡ ಸಾಧ್ಯವಾಗುತ್ತಿಲ್ಲ’ ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.