ADVERTISEMENT

ಕೊಪ್ಪಳ: ಹದಗೆಟ್ಟ ಕೇಂದ್ರಿಯ ವಿದ್ಯಾಲಯದ ರಸ್ತೆ

ನೂರಾರು ಸಂಖ್ಯೆಯಲ್ಲಿ ಮಕ್ಕಳು ಓಡಾಡುತ್ತಿದ್ದರೂ ಇಲ್ಲ ಬಸ್‌ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 6:20 IST
Last Updated 9 ಆಗಸ್ಟ್ 2025, 6:20 IST
ಕೊಪ್ಪಳದ ಹೊರವಲಯದಲ್ಲಿರುವ ಕೇಂದ್ರಿಯ ವಿದ್ಯಾಲಯಕ್ಕೆ ಹೋಗುವ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು –ಪ್ರಜಾವಾಣಿ ಚಿತ್ರಗಳು/ಭರತ್ ಕಂದಕೂರ
ಕೊಪ್ಪಳದ ಹೊರವಲಯದಲ್ಲಿರುವ ಕೇಂದ್ರಿಯ ವಿದ್ಯಾಲಯಕ್ಕೆ ಹೋಗುವ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು –ಪ್ರಜಾವಾಣಿ ಚಿತ್ರಗಳು/ಭರತ್ ಕಂದಕೂರ   

ಕೊಪ್ಪಳ: ನಗರದ ಹೊರವಲಯದಲ್ಲಿರುವ ಪಿಎಂ ಶ್ರೀ ಕೇಂದ್ರಿಯ ವಿದ್ಯಾಲಯಕ್ಕೆ ನಿತ್ಯ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಓಡಾಡುತ್ತಿದ್ದು, ಅಲ್ಲಿನ ಹದಗೆಟ್ಟ ರಸ್ತೆಗಳ ಅವರಿಗೆ ಜೀವಭಯ ಉಂಟು ಮಾಡುತ್ತಿವೆ.  

ಜಿಲ್ಲಾ ಕೇಂದ್ರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದಲೂ ಕೇಂದ್ರಿಯ ವಿದ್ಯಾರ್ಥಿಗಳಿಗೆ ನಿತ್ಯ ಅಂದಾಜು 400ಕ್ಕಿಂತಲೂ ಹೆಚ್ಚು ಮಕ್ಕಳು ಹಾಗೂ 40ಕ್ಕಿಂತಲೂ ಹೆಚ್ಚು ಆಟೊರಿಕ್ಷಾಗಳು ಓಡಾಡುತ್ತಿವೆ. ಅಲ್ಲಿಗೆ ತೆರಳಲು ಎಲ್ಲಿಂದಲೂ ಸರ್ಕಾರಿ ಬಸ್‌ಗಳ ಸೌಲಭ್ಯಗಳು ಕೂಡ ಇಲ್ಲದ ಕಾರಣ ತಮ್ಮ ಮಕ್ಕಳನ್ನು ಕಳುಹಿಸಲು ಪೋಷಕರು ಮಾಸಿಕ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗಿದೆ.

ಜಿಲ್ಲಾ ಕೇಂದ್ರದಿಂದ ತೆರಳುವವರು ರಾಷ್ಟ್ರೀಯ ಹೆದ್ದಾರಿಯನ್ನು ದಾಟಿಕೊಂಡು ಹೋಗಬೇಕಾಗಿದೆ. ಆದ್ದರಿಂದ ಅಲ್ಲಿ ಫ್ಲೈ ಓವರ್‌ ನಿರ್ಮಿಸಬೇಕು ಅಥವಾ ಅಂಡರ್‌ಪಾಸ್‌ ಮಾಡಿಕೊಡಬೇಕು ಎನ್ನುವುದು ಪೋಷಕರ ಅನೇಕ ವರ್ಷಗಳ ಬೇಡಿಕೆಯಾಗಿದ್ದರೂ ಸ್ಪಂದನೆ ಲಭಿಸಿಲ್ಲ ಎನ್ನುವುದು ಪೋಷಕರ ದೂರು.

ADVERTISEMENT

ಕೇಂದ್ರಿಯ ಬಸ್‌ ನಿಲ್ದಾಣದಿಂದ ವಿದ್ಯಾಲಯ ಸುಮಾರು ಎಂಟು ಕಿ.ಮೀ.ನಷ್ಟು ದೂರವಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯಿಂದ ಬಹದ್ದೂರ್‌ ಬಂಡಿಗೆ ಹೋಗುವ ಒಂದಷ್ಟು ಮಾರ್ಗ, ಇನ್ನುಳಿದ ವಿದ್ಯಾಲಯ ಹೋಗುವ ಮಾರ್ಗದಲ್ಲಿ ಇರುವ ಒಂದು ವಾಹನ ಓಡಾಡುವಷ್ಟು ಜಾಗದಲ್ಲಿ ಎಲ್ಲೆಂದರಲ್ಲಿ ಆಳವಾಗಿ ಗುಂಡಿಗಳು ಬಿದ್ದಿವೆ.

ಮಳೆಗಾಲ ಬಂದರಂತೂ ಎಲ್ಲಿ ಗುಂಡಿಗಳು ಇವೆ ಎನ್ನುವುದು ಕೂಡ ನಿರ್ದಿಷ್ಟವಾಗಿ ಗೊತ್ತಾಗುವುದಿಲ್ಲ. ಈ ರಸ್ತೆಯಲ್ಲಿ ಹೋಗುವಾಗ ಅನೇಕರು ಬಿದ್ದು ಗಾಯಗೊಂಡ ಉದಾಹರಣೆಗಳು ಕೂಡ ಸಾಕಷ್ಟಿವೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿಯಿಂದ ಕೇಂದ್ರಿಯ ವಿದ್ಯಾಲಯದ ತನಕ ಚತುಷ್ಪಥ ರಸ್ತೆ ಮಾಡಿಕೊಡಬೇಕು ಎನ್ನುವುದು ಪೋಷಕರ ಬೇಡಿಕೆಯಾಗಿದ್ದು, ಈ ಕುರಿತು ಇತ್ತೀಚೆಗೆ ಹಲವು ಪೋಷಕರು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರನ್ನು ಭೇಟಿಯಾಗಿದ್ದಾರೆ. ಕನಿಷ್ಠ ಬಸ್ ಸೌಲಭ್ಯವನ್ನಾದರೂ ಕಲ್ಪಿಸಿದರೆ ಅನುಕೂಲವಾಗುತ್ತದೆ ಎನ್ನವುದನ್ನು ಗಮನಕ್ಕೆ ತಂದಿದ್ದಾರೆ.

ಕೇಂದ್ರಿಯ ವಿದ್ಯಾಲಯಕ್ಕೆ ಹೋಗುವ ರಸ್ತೆಯಲ್ಲಿ ಗುಂಡಿಗಳ ಅವ್ಯವಸ್ಥೆ
ನಗರದ ಹೊರವಲಯದಲ್ಲಿರುವ ಕೇಂದ್ರಿಯ ವಿದ್ಯಾಲಯಕ್ಕೆ ಬಸ್‌ ಸೌಲಭ್ಯ ಕಲ್ಪಿಸುವಂತೆ ಮನವಿ ಬಂದಿದೆ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
 ಆರ್.ಬಿ. ಜಾಧವ್ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.