ADVERTISEMENT

ಕೊಪ್ಪಳ: ಬೇರೂರಿದ ಸಿಬ್ಬಂದಿ ಎತ್ತಂಗಡಿಗೆ ಶಿಫಾರಸು

ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿ ಕುರಿತು ಅಧಿಕಾರಿಗಳಿಂದ ಸರ್ಕಾರಕ್ಕೆ ಪತ್ರ

ಪ್ರಮೋದ ಕುಲಕರ್ಣಿ
Published 25 ಅಕ್ಟೋಬರ್ 2025, 6:45 IST
Last Updated 25 ಅಕ್ಟೋಬರ್ 2025, 6:45 IST
ಕೊಪ್ಪಳದಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ವಿಠ್ಠಲ ಚೌಗುಲಾ ಅವರಿಗೆ ಮನವಿ ಸಲ್ಲಿಸಿದರು
ಕೊಪ್ಪಳದಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ವಿಠ್ಠಲ ಚೌಗುಲಾ ಅವರಿಗೆ ಮನವಿ ಸಲ್ಲಿಸಿದರು   

ಕೊಪ್ಪಳ: ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಹಲವು ವರ್ಷಗಳಿಂದ ಬೇರೂರಿರುವ ಸಿಬ್ಬಂದಿಯನ್ನು ತ್ವರಿತವಾಗಿ ವರ್ಗಾವಣೆ ಮಾಡಬೇಕು ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಇಲ್ಲಿನ ಇಲಾಖೆಯಲ್ಲಿ ಭ್ರಷ್ಟಚಾರ ನಡೆಯುತ್ತಿದೆ. ಕಾನೂನು ಬಾಹಿರವಾಗಿ ಕೆಲಸ ನಡೆಯುತ್ತಿದ್ದು, ಸಿಬ್ಬಂದಿ ಹಾಗೂ ನಿಯಮಗಳ ಬಗ್ಗೆ ಪರಿಪೂರ್ಣ ಮಾಹಿತಿಯನ್ನೂ ಅಧಿಕಾರಿಗಳು ಕೂಡ ತಿಳಿದುಕೊಂಡಿಲ್ಲ. ಅವರನ್ನು ವರ್ಗಾವಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೂ ಆದ ಶಾಸಕ ಬಸವರಾಜ ರಾಯರಡ್ಡಿ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಈ ಪತ್ರದ ಬೆನ್ನಲ್ಲೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವರದಿ ಕೇಳಿದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮತ್ತು ಗಣಿ ಇಲಾಖೆಯ ಹಿರಿಯ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿನ ಅಂಶಗಳನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಕೊಪ್ಪಳದಲ್ಲಿ ಹಲವು ಸಿಬ್ಬಂದಿ ಅನೇಕ ವರ್ಷಗಳಿಂದ ಬೇರೂರಿದ್ದಾರೆ. ಸಿಬ್ಬಂದಿ ಹಾಗೂ ಹಿರಿಯ ಭೂ ವಿಜ್ಞಾನಿ ಪುಷ್ಪಲತಾ ಎಸ್‌. ಕವಲೂರು ಸೇರಿದಂತೆ ಹಲವರನ್ನು ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿ ಪತ್ರ ಬರೆಯಲಾಗಿದೆ’ ಎಂದು ಖಚಿತಪಡಿಸಿದರು.

ADVERTISEMENT

ಇಲಾಖೆಯಲ್ಲಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಕಿರಿಯ ಎಂಜಿನಿಯರ್‌ ನವೀನ್‌ ಕುಮಾರ್ 12 ವರ್ಷ, ಅಧೀಕ್ಷಕ ಮಲ್ಲಿಕಾರ್ಜುನ ಕಮ್ಮಾರ, ಪ್ರಥಮ ದರ್ಜೆ ಸಹಾಯಕಿ ತ್ರಿವೇಣಿ ಒಡೆಯರ್ ಒಂಬತ್ತು ವರ್ಷ, ದ್ವಿತೀಯ ದರ್ಜೆ ಸಹಾಯಕಿ ಸುಕನ್ಯಾ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಬಳ್ಳಾರಿ ಉತ್ತರ ವಲಯದ ಹೆಚ್ಚುವರಿ ನಿರ್ದೇಶಕರು ಕೂಡ ಇಲಾಖೆಯ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

‘ಬೇರೂರಿರುವವರ ಪೈಕಿ ಕೆಲ ಸಿಬ್ಬಂದಿ ಗಣಿ ಗುತ್ತಿಗೆಗಳ ಅನಧಿಕೃತ ಗಣಿಗಾರಿಕೆ, ಸಾಗಾಣಿಕೆಗೆ ಪರೋಕ್ಷವಾಗಿ ಗುತ್ತಿಗೆದಾರರಿಗೆ ಸಹಕಾರ ನೀಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅನೇಕ ದೂರುಗಳು ಕೂಡ ಬಂದಿವೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ದೂರು: ರಾಯರಡ್ಡಿ ಅವರ ಪತ್ರದ ಬಳಿಕ ಸಾಮಾಜಿಕ ತಾಣಗಳಲ್ಲಿ ಹರಿದಾಡಿದ 20 ಪ್ರಶ್ನೆಗಳನ್ನು ಒಳಗೊಂಡ ಅನಾಮಧೇಯ ಪತ್ರದ ಮೂಲದ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ದೂರು ನೀಡಿದ್ದೇನೆ ಎಂದು ಹಿರಿಯ ಭೂ ವಿಜ್ಞಾನಿ ಪುಷ್ಪಲತಾ ಕವಲೂರು ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ತಿಳಿಸಿದರು. 

ಗಣಿ ಅಕ್ರಮ ತಡೆಯಲು ಆಗ್ರಹಿಸಿ ಪ್ರತಿಭಟನೆ

ಕೊಪ್ಪಳ: ಜಿಲ್ಲೆಯಲ್ಲಿ ಅನಧಿಕೃತ ಮರಳು ಹಾಗೂ ಮರಂ ಸಾಗಾಣೆಕೆ ತಡೆಗಟ್ಟದೇ ಭ್ರಷ್ಟಾಚಾರ ನಡೆಸುತ್ತಿರುವ ಸಿಬ್ಬಂದಿಯನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಕರ್ತವ್ಯದಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಪದಾಧಿಕಾರಿಗಳು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.  

ಸಂಘಟನೆ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಮಾತನಾಡಿ ‘ಗಣಿ ಇಲಾಖೆಯಲ್ಲಿ  ಭ್ರಷ್ಟಾಚಾರದ ಬಗ್ಗೆ ಬಸವರಾಜ ರಾಯರಡ್ಡಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಪತ್ರ ಬರೆದರೂ ರಾಜ್ಯ ಸರ್ಕಾರ ಜಾಣ ಕುರುಡುತನ ಪ್ರದರ್ಶಿಸುತ್ತಿದೆ’ ಎಂದರು.

ಬಳಿಕ ಕೊಪ್ಪಳ ತಹಶೀಲ್ದಾರ್‌ ವಿಠ್ಠಲ ಚೌಗುಲಾ ಅವರಿಗೆ ಮನವಿ ಸಲ್ಲಿಸಿದರು. ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸನಗೌಡ ಪೊಲೀಸ್‌ ಪಾಟೀಲ ಮುಖಂಡರಾದ ಹನುಮಂತ ಬೆಸ್ತರ ನಿಂಗಪ್ಪ ಮೂಗಿನ್ ಗವಿಸಿದ್ದಪ್ಪ ಚಕ್ಕಡಿ ವಿರೇಶ ಮುಂಡಾಸದ ರಮೇಶ ಚಂಡೂರು ಶರಣಪ್ಪ ಮದಲಗಟ್ಟಿ ಸೊಹೇಲ್ ಹನುಮಂತ ತಳಕಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. 

ಸಾಮಾಜಿಕ ತಾಣದಲ್ಲಿ ಹರಿದಾಡಿದ ಅನಾಮಧೇಯ ಪತ್ರ ಹರಿಬಿಟ್ಟವರನ್ನು ಪತ್ತೆ ಹಚ್ಚುವಂತೆ ಕೋರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದ್ದೇನೆ.  
–ಪುಷ್ಪಲತಾ ಕವಲೂರು, ಹಿರಿಯ ಭೂ ವಿಜ್ಞಾನಿ 
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕುರಿತು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಪತ್ರದ ಬಗ್ಗೆ ಯಾರೂ ದೂರು ಕೊಟ್ಟಿಲ್ಲ. ದೂರು ಕೊಟ್ಟರೆ ಕ್ರಮ ವಹಿಸುತ್ತೇವೆ.
–ಡಾ. ರಾಮ್‌ ಎಲ್‌. ಅರಸಿದ್ಧಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಕೊಪ್ಪಳದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಬಹಳಷ್ಟು ವರ್ಷಗಳಿಂದ ಇರುವ ಸಿಬ್ಬಂದಿ ಹಾಗೂ ಪುಷ್ಪಲತಾ ಅವರನ್ನು ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಹೆಸರು ಬಹಿರಂಗ ಪಡಿಸಲು ಬಯಸದ ಇಲಾಖೆಯ ಹಿರಿಯ ಅಧಿಕಾರಿ
ಕೊಪ್ಪಳದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಬಹಳಷ್ಟು ವರ್ಷಗಳಿಂದ ಇರುವ ಸಿಬ್ಬಂದಿ ಹಾಗೂ ಪುಷ್ಪಲತಾ ಅವರನ್ನು ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.
–ಹೆಸರು ಬಹಿರಂಗ ಪಡಿಸಲು ಬಯಸದ ಇಲಾಖೆಯ ಹಿರಿಯ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.