ADVERTISEMENT

ಕೊಪ್ಪಳ | ನಗರಸಭೆ ಸಾಮಾನ್ಯ ಸಭೆ: ಅವಧಿ ಕೊನೆಯಲ್ಲಿ ಲೆಕ್ಕಪತ್ರದ ಚರ್ಚೆ!

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 6:40 IST
Last Updated 28 ಅಕ್ಟೋಬರ್ 2025, 6:40 IST
ಕೊಪ್ಪಳದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಅಮ್ಜದ್‌ ಪಟೇಲ್‌ ಮಾತನಾಡಿದರು
ಕೊಪ್ಪಳದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಅಮ್ಜದ್‌ ಪಟೇಲ್‌ ಮಾತನಾಡಿದರು   

ಕೊಪ್ಪಳ: ಇಲ್ಲಿನ ನಗರಸಭೆ ಸದಸ್ಯರ ಅವಧಿ ಮುಗಿಯಲು ನಾಲ್ಕು ದಿನಗಳಷ್ಟೇ (ಅ. 31) ಬಾಕಿ ಇರುವಾಗ ಸೋಮವಾರ ನಡೆದ ಸಾಮಾನ್ಯ ಸಭೆಯ ಬಹುತೇಕ ಸಮಯ ಲೆಕ್ಕಪತ್ರವನ್ನು ತೋರಿಸಲು ಸೀಮಿತಗೊಂಡಿತು.

ಸಭೆಯುದ್ದಕ್ಕೂ ಪಕ್ಷಬೇಧ ಮರೆತು ಸದಸ್ಯರು ನಗರಸಭೆ ಅಧ್ಯಕ್ಷ ಅಮ್ಜದ್‌ ಪಟೇಲ್‌ ಅವರ ವಿರುದ್ಧ ಮುಗಿಬಿದ್ದರೆ, ಅಧ್ಯಕ್ಷರು ಅಧಿಕಾರಿಗಳ ವಿರುದ್ಧ ಗರಂ ಆದರು. ಅನುಮೋದನೆ ನೀಡಿದ ಕಾಮಗಾರಿಗಳು, ಸ್ಥಳೀಯ ಸಂಸ್ಥೆ ನಿಧಿಯಿಂದ ಸಂಗ್ರಹ ಮಾಡಿದ ಅನುದಾನ ಖರ್ಚಿನ ಲೆಕ್ಕ ತೋರಿಸಿದ ಪತ್ರಗಳು ಬಹುತೇಕ ಎಲ್ಲ ಸದಸ್ಯರನ್ನು ಕೆರಳಿಸಿದವು.

ಹಿಂದಿನ ಅಧ್ಯಕ್ಷೆ ಕಾಂಗ್ರೆಸ್‌ನ ಶಿವಗಂಗಾ ಭೂಮಕ್ಕನವರ, ವಿರೂಪಾಕ್ಷಪ್ಪ ಮೋರನಾಳ ಹಾಗೂ ಇತರ ಸದಸ್ಯರು ’ಸಭೆಗೆ ಏಳು ದಿನಗಳ ಮೊದಲು ಸದಸ್ಯರಿಗೆ ಲೆಕ್ಕಪತ್ರದ ಪ್ರತಿ ಕೊಡಬೇಕು ಎನ್ನುವ ನಿಯಮ ಉಲ್ಲಂಘಿಸಲಾಗಿದೆ. ಸಭೆಯ ಹಿಂದಿನ ದಿನ ಕೊಟ್ಟರೆ ಓದಲು ಹೇಗೆ ಸಾಧ್ಯವಾಗುತ್ತದೆ’ ಎಂದು ಪ್ರಶ್ನಿಸಿದರು. ‘ನಗರಸಭೆಯ ಕೋಟ್ಯಂತರ ರೂಪಾಯಿ ಹಣ ಖರ್ಚಾಗಿದೆ ಎಂದು ದಾಖಲೆಯಲ್ಲಿ ತೋರಿಸಿದ್ದೀರಿ. ನನ್ನ ವಾರ್ಡ್‌ನಲ್ಲಿ ಒಂದೂ ಅಭಿವೃದ್ಧಿ ಕೆಲಸಗಳು ಆಗಿಲ್ಲ’ ಎಂದು ಬಿಜೆಪಿ ಸದಸ್ಯ ಸೋಮಣ್ಣ ಹಳ್ಳಿ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

ಪಾವತಿಯಾಗದ ವೇತನ: ಮೂರು ವರ್ಷಗಳ ಹಿಂದೆ ನೇಮಕವಾದ 15 ಜನ ಲೋಡರ್ಸ್‌ ಮತ್ತು ಇನ್ನು 15 ಜನ ಸ್ವೀಪರ್ಸ್‌ ಕೆಲಸಗಾರರ ಗೌರವ ಧನ ಆರು ತಿಂಗಳುಗಳಿಂದ ಬಾಕಿ ಉಳಿದಿದೆ. ಇವರನ್ನು ಕೆಲಸಕ್ಕೆ ನೇಮಿಸಿಕೊಂಡ ಎಜೆನ್ಸಿ ಕೂಡ ಹಣ ನೀಡಿಲ್ಲ. ಗಣಪತಿ ಮೂರ್ತಿ ವಿಸರ್ಜನೆಗೆ ನಗರದ ಪ್ರಮುಖ ಪ್ರದೇಶದಲ್ಲಿ ದಿನಕ್ಕೆ ₹1000 ಲೆಕ್ಕದಲ್ಲಿ 170 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇದಕ್ಕೆ ₹12 ಲಕ್ಷ ಪಾವತಿಸಲು ಯೋಜನೆ ರೂಪಿಸಲಾಗಿದೆ. ಈ ವಿಷಯ ಕೂಡ ಸಭೆಯಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು.

ಸದಸ್ಯ ರಾಜಶೇಖರ ಆಡೂರು ‘ಸ್ವಚ್ಛತಾ ಸಿಬ್ಬಂದಿಯ ಆರು ತಿಂಗಳು ಗೌರವಧನ ಬಾಕಿ ಉಳಿಸಿಕೊಂಡರೆ ಅವರು ಹೇಗೆ ಬದುಕಬೇಕು. ನೀವು (ಅಧಿಕಾರಿಗಳು) ಮಾತ್ರ ನಿಯಮಿತವಾಗಿ ವೇತನ ಪಡೆಯುತ್ತೀರಿ’ ಎಂದು ತರಾಟೆಗೆ ತೆಗೆದುಕೊಂಡರು. ಅವರನ್ನು ಕೆಲಸದಲ್ಲಿ ಮುಂದುವರಿಸಬೇಕು ಎಂದು ಆಡೂರು ಸೇರಿದಂತೆ ಬಹಳಷ್ಟು ಸದಸ್ಯರು ಆಗ್ರಹಿಸಿದರು.

ಆಗ ಪ್ರತಿಕ್ರಿಯಿಸಿದ ಪೌರಾಯುಕ್ತ ವೆಂಕಟೇಶ್ ನಾಗನೂರ ’ಸದ್ಯಕ್ಕೆ ನಗರಸಭೆಯ ಖಜಾನೆ ಖಾಲಿಯಾಗಿದ್ದು, ಈ ಸಲದ ಆರ್ಥಿಕ ವರ್ಷದ ತನಕ ಬಹುತೇಕ ಇದೇ ಪರಿಸ್ಥಿತಿ ಮುಂದುವರಿಯುತ್ತದೆ. ದುಡಿಸಿಕೊಂಡು ಕೆಲಸಗಾರರಿಗೆ ಸಂಬಳ ಕೊಡದೇ ಇರುವುದು ಸರಿಯಲ್ಲ ಎನ್ನುವ ಕಾರಣಕ್ಕೆ ಕೈ ಬಿಡಲಾಗಿದೆ. ಸದಸ್ಯರೆಲ್ಲರೂ ಅನುಮತಿ ಕೊಟ್ಟರೆ ಟೆಂಡರ್ ಕರೆದು ಮರಳಿ ಅವರನ್ನೇ ಕೆಲಸಕ್ಕೆ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

ನಗರಸಭೆಯ ಹಿರಿಯ ಸದಸ್ಯನಾಗಿದ್ದೇನೆ. ಅಧ್ಯಕ್ಷನಾಗಿರುವ ಅವಧಿಯಲ್ಲಿ ₹25 ಕೋಟಿ ಮೊತ್ತದ ಕಾಮಗಾರಿಯಾಗಿದೆ ಎನ್ನುವ ಲೆಕ್ಕವಿದೆ. ಇದರ ಬಗ್ಗೆ ಯಾರೂ ಲೆಕ್ಕ ಕೊಟ್ಟಿಲ್ಲ.
ಅಮ್ಜದ್‌ ಪಟೇಲ್‌ ನಗರಸಭೆ ಅಧ್ಯಕ್ಷ
ಹಿಂದೆ ಅಧ್ಯಕ್ಷೆಯಾಗಿದ್ದಾಗ ಸಹಿ ಮಾಡಿದ ಕಡತಕ್ಕೆ ವೈಟ್‌ನೈರ್‌ ಹಚ್ಚಲಾಗಿತ್ತು. ಹೀಗೆ ತಪ್ಪು ಮಾಡಿದವರು ಮನೆಗೆ ಬಂದು ಕ್ಷಮೆ ಕೇಳಿದ್ದರಿಂದ ಸುಮ್ಮನಾದೆ. ನಗರಸಭೆಯಲ್ಲಿ ಸಾಕಷ್ಟು ರೀತಿಯಲ್ಲಿ ಭ್ರಷ್ಟಾಚಾರ ಮಾಡುತ್ತಾರೆ.
ಶಿವಗಂಗಾ ಭೂಮಕ್ಕನವರ ನಗರಸಭೆ ಸದಸ್ಯೆ
ಖಾಲಿ ನಿವೇಶನ ಸ್ವಚ್ಛಗೊಳಿಸಲು ಮಾಲೀಕರು ಹೇಳುತ್ತಿದ್ದರೂ ಪ್ರಯೋಜನವಾಗಿಲ್ಲ. ನಗರಸಭೆಯಿಂದಲೇ ಸ್ವ‌ಚ್ಛಗೊಳಿಸಿ ಭೋಜಾ ಕೂಡಿಸಲು ಕ್ರಮ ಕೈಗೊಳ್ಳುವ ಯೋಜನೆಯಿದೆ.
ವೆಂಕಟೇಶ್ ನಾಗನೂರ ಪೌರಾಯುಕ್ತ

ಸಭೆಯಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳು

* ನಗರಸಭೆ ಸದಸ್ಯರಿಗೆ ಹತ್ತು ತಿಂಗಳಿಂದ ಗೌರವ ಧನ ಬಾಕಿ.

* ಹೊರಗುತ್ತಿಗೆ ಕೆಲಸಗಾರರಿಗೆ ಗೌರವಧನ ಪಾವತಿಸದ ಎಜೆನ್ಸಿ ಜೊತೆ ಒಪ್ಪಂದ ರದ್ದುಪಡಿಸಲು ಆಗ್ರಹ.

* ಸರ್ವ ಸದಸ್ಯರ ಗಮನಕ್ಕೆ ತರದೇ ಯಾವುದೇ ಕಾಮಗಾರಿಗೆ ಟೆಂಡರ್‌ ಕರೆಯಬಾರದು ಎಂದು ಸದಸ್ಯರ ಹಕ್ಕೊತ್ತಾಯ.

* ನಗರಸಭೆ ಜಾಗ ಖಾಸಗಿಯವರಿಗೆ ಬಿಟ್ಟುಕೊಟ್ಟು ಆದಾಯ ನಷ್ಟ ಸದಸ್ಯರ ಒಕ್ಕೊರಲ ಹೇಳಿಕೆ.

* ಆರ್‌ಟಿಐ ಅರ್ಜಿ ಹಾಕಿ ಬೆದರಿಸುವ ತಂತ್ರಕ್ಕೆ ಅಧಿಕಾರಿಗಳು ಮಣಿಯಬಾರದು ಎಂದ ಸದಸ್ಯರು.

* ಚರಂಡಿ ಸ್ವಚ್ಛಗೊಳಿಸಿ ಬೀದಿ ದೀಪ ಅಳವಡಿಸಲು ವಿವಿಧ ವಾರ್ಡ್‌ಗಳ ಸದಸ್ಯರ ಆಗ್ರಹ.

* ಹೈಪರ್‌ ಮಾರ್ಟ್‌ ಮಾತಾ ಹೋಟೆಲ್‌ ಸೇರಿದಂತೆ ಹಲವು ಕಡೆ ಫುಟ್‌ಪಾತ್‌ ಜಾಗ ಅತಿಕ್ರಮಣ ಮಾಡಲಾಗಿದ್ದು ತೆರವು ಮಾಡಿಸಿ. ನಗರಸಭೆ ಆಸ್ತಿಯಲ್ಲಿ ಬೇರೆಯವರು ಬಾಡಿಗೆ ಹಣ ತಿನ್ನುತ್ತಿದ್ದಾರೆ ಎಂದು ಆರೋಪಿಸಿದ ಸದಸ್ಯರು.

ಲೋಕಾಯುಕ್ತರ ದಾಳಿ; ಚರ್ಚೆ

ನಗರಸಭೆಯಲ್ಲಿ ಇತ್ತೀಚೆಗೆ ನಡೆದ ಲೋಕಾಯುಕ್ತ ದಾಳಿ ಬಗ್ಗೆಯೂ ಚರ್ಚೆಯಾಯಿತು. ಇದರಿಂದ ಸದಸ್ಯರ ಗೌರವಕ್ಕೆ ಚ್ಯುತಿಯಾಗಿದೆ ಎಂದು ಅಕ್ಬರ್‌ ಪಾಷಾ ಪಲ್ಟನ್‌ ಹೇಳಿದ್ದಕ್ಕೆ ಪೌರಾಯುಕ್ತ ಹಾಗೂ ಕಿರಿಯ ಎಂಜಿನಿಯರ್‌ ಸೋಮಲಿಂಗಪ್ಪ ಮಾಹಿತಿ ನೀಡಿದರು. ’ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು 336 ಕಾಮಗಾರಿಗಳ ಬಗ್ಗೆ ಪರಿಶೀಲನೆ ಮಾಡಿದ್ದಾರೆ. ಕೆಲವು ದಾಖಲೆಗಳನ್ನು ಕೊಡಬೇಕಿದೆ’ ಎಂದು ಪೌರಾಯುಕ್ತರು ಹೇಳಿದರೆ  ಸೋಮಲಿಂಗಪ್ಪ ‘ಕಾನೂನಾತ್ಮಕವಾಗಿ ಕೈಗೊಂಡ ಕಾಮಗಾರಿಗಳ ದಾಖಲೆಗಳು ನಮ್ಮ ಬಳಿಯಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.