ADVERTISEMENT

ಕೊಪ್ಪಳ | 'ಯೋಗ, ಧ್ಯಾನ, ಕ್ರೀಡೆಗೆ ಸಮಯ ಮೀಸಲಿಡಿ'

ಪೊಲೀಸ್‌ ವಾರ್ಷಿಕ ಕ್ರೀಡಾಕೂಟದಲ್ಲಿ ಜಿಲ್ಲಾಧಿಕಾರಿ ಸುರೇಶ್‌ ಇಟ್ನಾಳ ಸಲಹೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 4:37 IST
Last Updated 16 ನವೆಂಬರ್ 2025, 4:37 IST
ಕೊಪ್ಪಳದ ಪೊಲೀಸ್‌ ಕವಾಯತು ಮೈದಾನದಲ್ಲಿ ಶನಿವಾರ ಆರಂಭಗೊಂಡ ಪೊಲೀಸ್‌ ವಾರ್ಷಿಕ ಕ್ರೀಡಾಕೂಟವನ್ನು ಜಿಲ್ಲಾಧಿಕಾರಿ ಪಾರಿವಾಳ ಮತ್ತು ಬಲೂನುಗಳನ್ನು ಹಾರಿಬಿಡುವ ಮೂಲಕ ಚಾಲನೆ ನೀಡಿದರು
ಕೊಪ್ಪಳದ ಪೊಲೀಸ್‌ ಕವಾಯತು ಮೈದಾನದಲ್ಲಿ ಶನಿವಾರ ಆರಂಭಗೊಂಡ ಪೊಲೀಸ್‌ ವಾರ್ಷಿಕ ಕ್ರೀಡಾಕೂಟವನ್ನು ಜಿಲ್ಲಾಧಿಕಾರಿ ಪಾರಿವಾಳ ಮತ್ತು ಬಲೂನುಗಳನ್ನು ಹಾರಿಬಿಡುವ ಮೂಲಕ ಚಾಲನೆ ನೀಡಿದರು    

ಕೊಪ್ಪಳ: ‘ವೈಯಕ್ತಿಕ ಹಾಗೂ ಸಾರ್ವಜನಿಕ ಬದುಕುಗಳ ನಡುವೆ ತೆಳುವಾದ ಗೆರೆಯಿದೆ. ಅದನ್ನು ಬೇರ್ಪಡಿಸುವುದು ತುಂಬಾ ಕಷ್ಟ. ಬಹಳಷ್ಟು ದಿನಗಳ ಕಾಲ ಯೂನಿಫಾರ್ಮ್‌ ಹಾಕಿಕೊಂಡು ಕೆಲಸ ಮಾಡಿ ಆ ಬಳಿಕ ಕುಟುಂಬದೊಂದಿಗೆ ಅಥವಾ ವೈಯಕ್ತಿಕ ಬದುಕಿನೊಂದಿಗೆ ಹೊಂದಿಕೊಳ್ಳುವುದು ತುಸು ಕಷ್ಟ. ಹಾಗಾಗಿ ದಿನನಿತ್ಯ ವೈಯಕ್ತಿಕ ಬದುಕಿನ ಜೊತೆಗೆ ಯೋಗ, ಧ್ಯಾನ, ಕ್ರೀಡೆಗಳಿಗೂ ಸ್ವಲ್ಪ ಸಮಯ ಮೀಸಲಿಡಬೇಕು’ ಎಂದು ಜಿಲ್ಲಾಧಿಕಾರಿ ಡಾ. ಸುರೇಶ್‌ ಬಿ.ಇಟ್ನಾಳ್‌ ಸಲಹೆ ನೀಡಿದರು.

ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ಶನಿವಾರ ಆರಂಭವಾದ ಪೊಲೀಸ್‌ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು ‘ಕರ್ನಾಟಕ ಪೊಲೀಸ್‌ ದಕ್ಷತೆ, ಕರ್ತವ್ಯ ಮತ್ತು ಸಮಯ ಪ್ರಜ್ಞೆಗೆ ಹೆಸರಾಗಿದೆ. ಆಂತರಿಕ ಭದ್ರತೆ, ಕಾನೂನು ಸುವ್ಯವಸ್ಥೆ, ಸಂಚಾರ ವ್ಯವಸ್ಥೆ ಅಥವಾ ಯಾವುದೇ ಸಭೆ ಸಮಾರಂಭ ಸೇರಿದಂತೆ ಏನೇ ಕೆಲಸ ಇದ್ದರೂ ಅಲ್ಲೆಲ್ಲ ಪೊಲೀಸ್‌ ಪಾತ್ರ ಇದ್ದೇ ಇರುತ್ತದೆ. ಪೊಲೀಸ್‌ ಅಂದರೆ ಶಿಸ್ತು. ಅದೇ ಕಾರಣಕ್ಕಾಗಿಯೇ ಈ ಇಲಾಖೆಯ ಸಿಬ್ಬಂದಿ ನಿರಂತರ ಒತ್ತಡದಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರ ಬದುಕಿನಲ್ಲಿ ಬೌದ್ಧಿಕವಾಗಿ, ದೈಹಿಕವಾಗಿ ಸಾಕಷ್ಟು ಶ್ರಮ, ಒತ್ತಡ ನಿರ್ಮಾಣವಾಗಿಬಿಡುತ್ತದೆ’ ಎಂದರು.

‘ಒತ್ತಡ ಕಡಿತಗೊಳಿಸಲು ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ಎಲ್ಲ ಇಲಾಖೆಗಳು ವಾರ್ಷಿಕವಾಗಿ ಇಂತಹ ಕ್ರೀಡಾಕೂಟವನ್ನು ಮಾಡಲಾಗುವುದಿಲ್ಲ. ಆದರೆ ಪೊಲೀಸ್‌ ಇಲಾಖೆಯಲ್ಲಿ ಮಾತ್ರ ಬಹಳ ಆಸಕ್ತಿಯಿಂದ, ನಿಯಮಿತವಾಗಿ, ಅಚ್ಚುಕಟ್ಟಾಗಿ ನಡೆಸಿಕೊಂಡು ಬರಲಾಗುತ್ತಿದೆ. ಒತ್ತಡ ನಿರ್ವಹಣೆಯಲ್ಲಿ ಕ್ರೀಡೆಗಳು ಸಾಕಷ್ಟು ಸಹಕಾರಿಯಾಗಿವೆ ಎಂಬುದು ಇದಕ್ಕೆ ಕಾರಣ’ ಎಂದು ಹೇಳಿದರು. 

ADVERTISEMENT

ಸಿಬ್ಬಂದಿಗೆ 100 ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಚಕ್ರ ಎಸೆತ ಮತ್ತು ಜಾವೆಲಿನ್‌ ಎಸೆತ, ಪೊಲೀಸ್ ಅಧಿಕಾರಿಗಳಿಗಾಗಿ ಗುಂಡು ಎಸೆತ, ಚಕ್ರ ಎಸೆತ ಮತ್ತು ಜಾವಲಿನ್‌ ಎಸೆತ, ಗುಂಪು ಸ್ಪರ್ಧೆಗಳಲ್ಲಿ ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟ ಮತ್ತು ಇತರೆ ಸ್ಪರ್ಧೆಗಳು ನಡೆಯಲಿವೆ.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಹೇಮಂತ್ ಕುಮಾರ್, ಡಿವೈಎಸ್‌ಪಿಗಳಾದ ಮುತ್ತಣ್ಣ ಸವರಗೋಳ, ಬಿ.ಎಸ್. ನೇಮಗೌಡ, ಸೈಬರ್ ವಿಭಾಗದ ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಪಾಟೀಲ, ಶಶಿಧರಯ್ಯ ಹಿರೇಮಠ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಪೊಲೀಸ್‌ ವಾರ್ಷಿಕ ಕ್ರೀಡಾಕೂಟದಲ್ಲಿ ಶನಿವಾರ ನಡೆದ ಪುರುಷರ 100 ಮೀಟರ್‌ ಸ್ಪರ್ಧೆಯ ನೋಟ

ನ. 17ರ ತನಕ ನಡೆಯಲಿರುವ ಪೊಲೀಸ್‌ ವಾರ್ಷಿಕ ಕ್ರೀಡಾಕೂಟ ವಾರ್ಷಿಕ ಕ್ರೀಡಾಕೂಟ ಅಂಗವಾಗಿ ಪೊಲೀಸರಿಂದ ಪಥಸಂಚಲನ ಜಿಲ್ಲೆಯ ಎಂಟು ಪೊಲೀಸ್‌ ತಂಡಗಳು ಭಾಗಿ

ಇತ್ತೀಚಿನ ಮುಖ್ಯಮಂತ್ರಿಗಳ ಕಾರ್ಯಕ್ರಮವನ್ನು ಪೊಲೀಸ್‌ ಇಲಾಖೆ ಅಚ್ಚುಕಟ್ಟಾಗಿ ನಿಭಾಯಿಸಿದೆ. ಕಾರ್ಯಕ್ರಮ ಆಯೋಜನೆ ಮಾಡಿದ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡಾ. ಸುರೇಶ ಇಟ್ನಾಳ ಜಿಲ್ಲಾಧಿಕಾರಿ
ಆರೋಗ್ಯಪೂರ್ಣ ಜೀವನಕ್ಕೆ ಕ್ರೀಡೆಗಳು ಪೂರಕವಾಗಿದ್ದು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪ್ರತಿವರ್ಷ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಪೊಲೀಸರಿಗೆ ಉತ್ತಮ ಅವಕಾಶ.
ಡಾ.ರಾಮ್ ಎಲ್.ಅರಸಿದ್ಧಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.