ಪಿಎಸ್ಐ ಗುರುರಾಜ
ಕುಕನೂರು (ಕೊಪ್ಪಳ ಜಿಲ್ಲೆ): ದಂಪತಿ ಕಲಹದ ಕುರಿತು ದೂರು ನೀಡಲು ಬಂದಾಗ ದೂರುದಾರನ ಮೇಲೆಯೇ ಹಲ್ಲೆ ಮಾಡಿದ ಕಾರಣಕ್ಕಾಗಿ ಜಿಲ್ಲೆಯ ಕುಕನೂರು ಪೊಲೀಸ್ ಠಾಣೆಯ ಸಬ್ ಇನ್‌ಸ್ಟೆಕ್ಟರ್ ಗುರುರಾಜ್ ಟಿ. ಅವರನ್ನು ಅಮಾನತು ಮಾಡಲಾಗಿದೆ.
ಕೊಪ್ಪಳ ತಾಲ್ಲೂಕಿನ ಯಲಮಗೇರಿಯ ಗಾಳೆಪ್ಪ ಹಿರೇಮನಿ ಎಂಬುವವರು ದೂರು ನೀಡಿ ‘ಜಗಳ ಪರಿಹರಿಸಲು ಬಂದ ನನ್ನ ಮೇಲೆ ಹಲ್ಲೆ ಮಾಡಿ ಕುಕನೂರು ಪಿಎಸ್‌ಐ ದೌರ್ಜನ್ಯ ಎಸಗಿದ್ದಾರೆ' ಎಂದು ಆರೋಪಿಸಿದ್ದರು.
ಇದಕ್ಕಾಗಿ ದಲಿತ ಸಮುದಾಯದ ಮುಖಂಡರು ಠಾಣೆ ಎದುರು ತಡರಾತ್ರಿ ತನಕ ಪ್ರತಿಭಟನೆ ನಡೆಸಿ ಅಮಾನತು ಮಾಡುವ ತನಕ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಹಾಗೂ ದೂರುದಾರನ ಜೊತೆ ಬಳ್ಳಾರಿ ಐಜಿಪಿ ವರ್ತಿಕಾ ಕಟಿಯಾರ್ ದೂರವಾಣಿಯಲ್ಲಿ ಮಾತನಾಡಿ ಪಿಎಸ್ಐ ವಿರುದ್ಧ ಕ್ರಮದ ಭರವಸೆ ನೀಡಿದ್ದರು.
ತಡರಾತ್ರಿ ಆದೇಶ ಹೊರಡಿಸಿರುವ ಎಸ್.ಪಿ. ಅರಸಿದ್ದಿ 'ಸಾರ್ವಜನಿಕರು ದೂರು ನೀಡಲು ಬಂದಾಗ ಅವರೊಂದಿಗೆ ಸೌಜನ್ಯದೊಂದಿಗೆ ವರ್ತಿಸಬೇಕಿತ್ತು. ಸಿಟ್ಟಿನ ಭರದಲ್ಲಿ ದೂರುದಾರ ಗಾಳೆಪ್ಪ ಅವರನ್ನು ತಳ್ಳಾಡಿ ಹೊಡೆದು ಅನುಚಿತವಾಗಿ ನಡೆದುಕೊಂಡಿದ್ದು ಸರಿಯಲ್ಲ. ಆದ್ದರಿಂದ ಸೇವೆಯಿಂದ ಅಮಾನತು ಮಾಡಲಾಗಿದೆ' ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.