ADVERTISEMENT

ಕೊಪ್ಪಳ: ಸಿದ್ದೇಶ್ವರ ನಗರದಲ್ಲಿ ‘ಇಲ್ಲ’ಗಳ ಸರಮಾಲೆ

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮುಂದೆ ನೋವು ತೋಡಿಕೊಂಡ ಸ್ಥಳೀಯ ನಿವಾಸಿಗಳು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 5:12 IST
Last Updated 7 ಫೆಬ್ರುವರಿ 2026, 5:12 IST
ಕೊಪ್ಪಳದ ತಾಯಿ ಮತ್ತು ಮಗುವಿನ ಆಸ್ಪತ್ರೆಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ನವಜಾತ ಶಿಶುವನ್ನು ಎತ್ತಿಕೊಂಡಿದ್ದ ಕ್ಷಣ
ಕೊಪ್ಪಳದ ತಾಯಿ ಮತ್ತು ಮಗುವಿನ ಆಸ್ಪತ್ರೆಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ನವಜಾತ ಶಿಶುವನ್ನು ಎತ್ತಿಕೊಂಡಿದ್ದ ಕ್ಷಣ   

ಕೊಪ್ಪಳ: ‘ಸರಿಯಾಗಿ ಚರಂಡಿ ಇಲ್ಲ, ಎಲ್ಲರಿಗೂ ಹಕ್ಕುಪತ್ರ ಸಿಕ್ಕಿಲ್ಲ, ರಸ್ತೆ ನಿರ್ಮಿಸಿದ್ದರೂ ಕಾಮಗಾರಿ ಕಳಪೆಯಾಗಿದೆ, ಕೆಲವು ವರ್ಷಗಳ ಹಿಂದೆಯಷ್ಟೇ ಅಂಗನವಾಡಿ ಕಟ್ಟಡ ನಿರ್ಮಿಸಿದ್ದರೂ ಎಲ್ಲ ಕಡೆ ಬಿರುಕು ಬಿಟ್ಟಿದೆ. ಮಳೆಗಾಲ ಬಂದರೆ ಮೊಣಕಾಲ ತನಕ ನೀರು ನಿಲ್ಲುತ್ತವೆ’

ಇದು ಇಲ್ಲಿನ ಕುಷ್ಟಗಿ ರಸ್ತೆಯಲ್ಲಿರುವ ಸಿದ್ದೇಶ್ವರ ನಗರದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಶುಕ್ರವಾರ ಭೇಟಿ ನೀಡಿದಾಗ ಸ್ಥಳೀಯ ನಿವಾಸಿಗಳಿಂದ ಕೇಳಿಬಂದ ’ಇಲ್ಲ’ಗಳ ದೂರಿನ ಸರಮಾಲೆ.

ಎಲ್ಲವನ್ನೂ ಸಮಾಧಾನದಿಂದ ಆಲಿಸಿದ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ತ್ವರಿತವಾಗಿ ಕ್ರಮ ವಹಿಸುವಂತೆ ಸೂಚಿಸಿದರು. ತಮ್ಮ ಮಕ್ಕಳ ಆರೋಗ್ಯ ಸಮಸ್ಯೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಸಮಸ್ಯೆ ‍ಪರಿಹಾರವಾಗಿಲ್ಲ, ಗಂಡ ಕಿರುಕುಳ ನೀಡುತ್ತಿದ್ದಾನೆ. ಪತಿ ತೀರಿಕೊಂಡಿದ್ದು, ಗಂಡನ ಮನೆಯವರು ತೊಂದರೆ ಕೊಡುತ್ತಿದ್ದಾರೆ. ನನ್ನ ಗಂಡನ ವಿಮೆ ಹಣ ಕೇಳುತ್ತಿದ್ದಾರೆ ಎಂದು ಹೀಗೆ ಅನೇಕ ಮಹಿಳೆಯರು ಸಮಸ್ಯೆಗಳನ್ನು ತೋಡಿಕೊಂಡರು. ಆಗ ನಾಗಲಕ್ಷ್ಮೀ ಚೌಧರಿ ಅವರು ಕಿರುಕುಳ ನೀಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಸ್ಥಳದಲ್ಲಿದ್ದ ಡಿವೈಎಸ್‌ಪಿ ಮುತ್ತಣ್ಣ ಸವರಗೋಳ ಅವರಿಗೆ ಸೂಚಿಸಿದರು.

ADVERTISEMENT

ಸಿದ್ದೇಶ್ವರ ನಗರದಲ್ಲಿ ಹೆಚ್ಚು ವಿದ್ಯುತ್‌ ಹರಿಯುವ ತಂತಿ ಹಾದು ಹೋಗಿದ್ದು ಮಳೆಗಾಲದಲ್ಲಿ ಎರಡು ತಂತಿಗಳು ಸ್ಪರ್ಶಿಸಿ ಬೆಂಕಿ  ಉಂಡೆಗಳು ನೆಲಕ್ಕೆ ಬೀಳುತ್ತಿದ್ದು, ಇದರಿಂದ ಜನ ಭಯದಿಂದ ಬದುಕಬೇಕಾಗಿದೆ ಎನ್ನುವ ವಿಷಯವನ್ನು ಸ್ಥಳೀಯರು ಗಮನಕ್ಕೆ  ತಂದರು. ರೈಲು ಹಳಿಯ ಪಕ್ಕದಲ್ಲಿಯೇ ಅಂಗನವಾಡಿ ಕೇಂದ್ರವಿದ್ದು ಮಕ್ಕಳ ಸುರಕ್ಷತೆಗಾಗಿ ತಂತಿ ಬೇಲಿ ಅಳವಡಿಸಬೇಕು ಎಂದು ಅಧ್ಯಕ್ಷೆ ಸೂಚಿಸಿದರು. ಇದೇ ವೇಳೆ ಜನ ‘ನೀವು ಬಂದಿದ್ದಕ್ಕೆ ಅಧಿಕಾರಿಗಳು ಬಂದಿದ್ದು, ಇಲ್ಲವಾದರೆ ಯಾರೂ ಈ ಕಡೆ ಸುಳಿಯುವುದಿಲ್ಲ’ ಎಂದು ದೂರಿದರು.

ತಮ್ಮ ಮಗ ಹೊರಗುತ್ತಿಗೆ ‌ಆಧಾರದ ಮೇಲೆ ವಿಜಯಪುರದಲ್ಲಿ ಕೆಲಸ ಮಾಡುತ್ತಿದ್ದು ಕಡಿಮೆ ವೇತನದಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಮಗನನ್ನು ಕೊಪ್ಪಳಕ್ಕೆ ವರ್ಗಾವಣೆ ಮಾಡಿಸಿಕೊಡಿ ಎಂದು ಮಹಿಳೆಯೊಬ್ಬರು ನಾಗಲಕ್ಷ್ಮೀ ಅವರ ಕಾಲಿಗೆ ಬಿದ್ದು ಬಿಕ್ಕಿಬಿಕ್ಕಿ ಅತ್ತರು.

ಇದಕ್ಕೂ ಮೊದಲು ಜಿಲ್ಲಾಸ್ಪತ್ರೆ ಆವರಣದಲ್ಲಿರುವ ತಾಯಿ ಮತ್ತು ಮಗುವಿನ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಸ್ವಚ್ಛತೆ ಹಾಗೂ ಕಟ್ಟಡದ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು, ಕಟ್ಟಡ ನಿರ್ಮಿಸಿ ಮೂರು ವರ್ಷಗಳಷ್ಟೇ ಆಗಿದ್ದರೂ ಗೋಡೆಯ ಮೇಲೆಲ್ಲ ನೀರಿನ ತೇವ ಇದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಹೆರಿಗೆಯಾಗಿದ್ದ ತಾಯಿಯನ್ನು ಮಾತನಾಡಿಸಿ ಊಟ, ಚಿಕಿತ್ಸೆ ಎಲ್ಲ ಸರಿಯಾಗಿ ನೀಡಲಾಗುತ್ತಿದೆಯೇ ಎಂದು ಕೇಳಿ ನವಜಾತ ಶಿಶುವನ್ನು ಎತ್ತಿಕೊಂಡು ಮುದ್ದಾಡಿದರು.

ಜನರಿಗಾಗಿ ಕಾದ ಅಧ್ಯಕ್ಷೆ!

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರಾಜ್ಯದಾದ್ಯಂತ ಎಲ್ಲಿಯೇ ಪ್ರವಾಸಕ್ಕೆ ಬಂದರೂ ಸಮಸ್ಯೆಗಳಿಗೆ ಪರಿಹಾರ ಲಭಿಸಬಹುದು ಎನ್ನುವ ನಿರೀಕ್ಷೆ ಹೊತ್ತು ಜನ ಕಾಯುತ್ತಿರುತ್ತಾರೆ. ಆದರೆ ಸಿದ್ದೇಶ್ವರ ನಗರದಲ್ಲಿ ಅಧ್ಯಕ್ಷೆಯೇ ಜನರಿಗಾಗಿ ಕಾಯಬೇಕಾಯಿತು! ಅಂಗನವಾಡಿ ಕಟ್ಟಡದ ಸಮೀಪದಲ್ಲಿ ಟೆಂಟ್‌ ಹಾಕಿ ಕುರ್ಚಿಗಳನ್ನು ಇರಿಸಿದ್ದರೂ ಅಲ್ಲಿ ಯಾರೂ ಇರಲಿಲ್ಲ. ಅಧ್ಯಕ್ಷರೇ ಹೋಗಿ ತಾವೇ ಕುರ್ಚಿ ಹಾಕಿಕೊಂಡು ಕುಳಿತ ಬಳಿಕ ಒಬ್ಬೊಬ್ಬರಾಗಿ ಬಂದರು. ಇದು ನಾಗಲಕ್ಷ್ಮೀ ಚೌಧರಿ ಅವರಿಗೆ ಬೇಸರ ಮೂಡಿಸಿದರೂ ಜನರ ಸಮಸ್ಯೆಗಳನ್ನು ಆಲಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.