ADVERTISEMENT

ಕೊಪ್ಪಳ | ಜನರ ಪ್ರೀತಿಗೆ ಭಾವುಕರಾಗಿ ಕಣ್ಣೀರಿಟ್ಟ ಸ್ವಾಮೀಜಿ

ಪ್ರಮೋದ ಕುಲಕರ್ಣಿ
Published 6 ಜನವರಿ 2026, 3:42 IST
Last Updated 6 ಜನವರಿ 2026, 3:42 IST
ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ   

ಕೊಪ್ಪಳ: ‘ಜನರ ಪ್ರೀತಿ, ಸೇವಾ ಮನೋಭಾವನೆ, ಕಕ್ಕುಲಾತಿ, ಅವರ ಭಕ್ತಿಗೆ ಏನು ಹೇಳಿದರೂ ಕಡಿಮೆಯೇ. ಜಾತ್ರೆ ಯಶಸ್ಸು ಕಾಣುವುದು ಭಕ್ತರ ಸಡಗರ ಹಾಗೂ ಶ್ರಮದಿಂದಲೇ ಹೊರತು ಅದಕ್ಕೆ ನಾನೊಬ್ಬನೆ ಕಾರಣ ಅಲ್ಲ’

ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೀಗೆ ಅತ್ಯಂತ ಭಾವುಕರಾಗಿ ಹೇಳುತ್ತಿದ್ದರೆ ಭಾವನೆಗಳನ್ನು ಹತ್ತಿಕ್ಕಿಕೊಳ್ಳಲು ಅವರಿಗೆ ಸಾಧ್ಯವಾಗದೆ ಕಣ್ಣೀರು ಸುರಿಸಿದರು. ಕಣ್ಣಂಚಿಗೆ ಸುರಿದ ನೀರು ಕೈಯಿಂದ ಒರೆಯಿಸಿಕೊಳ್ಳುತ್ತಲೆ ಮಹಾರಥೋತ್ಸವದ ಅಂಗವಾಗಿ ಬಂದ ಲಕ್ಷಾಂತರ ಭಕ್ತರನ್ನು ಪ್ರೀತಿಯಿಂದ ಹಿತವಾಗಿ ಮಾತನಾಡಿಸಿ ಆಶೀರ್ವದಿಸುತ್ತಿದ್ದರು.

ಗವಿಮಠದ ಜಾತ್ರೆಯ ಸೇವಾ ಕೈಂಕರ್ಯಕ್ಕೆ ಯಾವ ಆಡಂಬರ ಹಾಗೂ ಅಬ್ಬರವಿಲ್ಲದೆ ಸ್ವಯಂಸೇವಕರು, ಸೇವಾಕರ್ತರು ಶ್ರಮ ಪಡುತ್ತಿರುವುದರ ಬಗ್ಗೆ ಭಾವುಕರಾಗಿ ಮಾತನಾಡಿದ ಸ್ವಾಮೀಜಿ ಕಣ್ಣೀರು ಹಾಕಿದರು. ಭಕ್ತರ ಭಕ್ತಿಗೆ ನಾವು ಏನು ತಾನೆ ಕೊಡಲು ಸಾಧ್ಯ? ಎಂದು ಕೇಳಿದರು.

ADVERTISEMENT

ಜೊತೆಗೆ ಬೈಲಹೊಂಗಲದ ತರಕಾರಿ ಮಾರುವ ಅಜ್ಜಿಯ ಸೇವಾ ಮನೋಭಾವನೆ ಹಾಗೂ ಪ್ರೀತಿ ಕೊಂಡಾಡಿದ ಸ್ವಾಮೀಜಿ,‘ತರಕಾರಿ ಮಾರುವ ಅಜ್ಜಿ ಒಂದು ಪುಟ್ಟಿ ಕೊತ್ತಂಬರಿ ಸೊಪ್ಪು ತಂದು ಜಾತ್ರೆಗೆ ನೀಡಿದ್ದಾಳೆ. ಬದುಕಿನ ಬಂಡಿ ಸಾಗಿಸಲು ತರಕಾರಿ ವ್ಯಾಪಾರ ಮಾಡುತ್ತಿದ್ದರೂ ಮಠಕ್ಕೆ ಅಜ್ಜಿಯ ರೀತಿಯ ಅನೇಕ ಭಕ್ತರು ತಮಗೆ ಸಾಧ್ಯವಾದಷ್ಟು ಕೊಡುತ್ತಿದ್ದಾರೆ’ ಎಂದು ಭಾವುಕರಾದರು.

ಸಮಾಜದಲ್ಲಿ, ದೈನಂದಿನ ಬದುಕಿನಲ್ಲಿ ಹಾಗೂ ಅನೇಕರ ವೈಯಕ್ತಿಕ ಜೀವನದಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತಿರುವುದರಿಂದ ಸಮಾಜದ ಸ್ವಾಸ್ಥ ಹಾಳಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಸ್ವಾಮೀಜಿ, ನಕಾರಾತ್ಮಕ ಇದೆ ಎಂದು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ಜನರಲ್ಲಿ ಸೇವೆ, ಪ್ರೀತಿಯ, ಅಂತಃಕರಣ ಹಾಗೂ ಸಕಾರಾತ್ಮಕ ಪರಿಣಾಮ ಬೀರುವ ಕೆಲಸಗಳನ್ನು ಮಾಡಬೇಕು. ಒತ್ತಾಯಪೂರ್ವಕವಾಗಿ ಯಾವ ಕೆಲಸವನ್ನೂ ಮಾಡಲು ಹಾಗೂ ಮಾಡಿಸಲು ಆಗುವುದಿಲ್ಲ; ಸ್ವಯಂ ಪ್ರೇರಣೆಯಿಂದ ಮಾಡುವ ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿದುಕೊಳ್ಳುತ್ತವೆ ಎಂದರು.

ವಿಚಾರಣಾ ಕೈದಿಗಳ ಕಾರ್ಯಕ್ಕೆ ಮೆಚ್ಚುಗೆ ಕೊಪ್ಪಳದ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾ ಕೈದಿಗಳು ಒಪ್ಪೊತ್ತಿನ ಉಪಾಹಾರ ತ್ಯಾಗ ಮಾಡಿ ಗವಿಮಠದ ಜಾತ್ರೆಗೆ ಧವಸ ಹಾಗೂ ಧಾನ್ಯ ನೀಡಿದ ವಿಚಾರಕ್ಕೆ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕುರಿತು ಜೈಲಿನ ಅಧಿಕಾರಿಗಳಿಗೆ ಅಭಿನಂದನಾ ಪತ್ರವನ್ನು ಕಳುಹಿಸುವಾಗಿಯೂ ಅವರು ತಿಳಿಸಿದರು. ವಿಚಾರಣಾಧೀನ ಕೈದಿಗಳು ಜಿಲ್ಲಾ ಕಾರಾಗೃಹದಲ್ಲಿ ಅಕ್ಕಿ ಮತ್ತು ಗೋಧಿ ಹಿಟ್ಟಿಗೆ ಪೂಜೆ ಸಲ್ಲಿಸಿ ನಂತರ ಕಾರಾಗೃಹದ ಅಧೀಕ್ಷಕರು ಹಾಗೂ ಸಿಬ್ಬಂದಿ ಮೂಲಕ ಮಠಕ್ಕೆ ಅರ್ಪಿಸಿದ್ದರ ಬಗ್ಗೆ ‘ಪ್ರಜಾವಾಣಿ’ ಜ.4ರಂದು ವಿಶೇಷ ವರದಿ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.