
ಕೊಪ್ಪಳ: ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ವಾಹನಗಳನ್ನು ಚಲಾವಣೆ ಮಾಡಿ ದಂಡಕ್ಕೆ ಗುರಿಯಾಗಿರುವ ಚಾಲಕರು ಹಾಗೂ ಮಾಲೀಕರಿಗೆ ಶೇ. 50ರಷ್ಟು ದಂಡ ವಿನಾಯಿತಿ ನೀಡಲು ಈಗ ಇಲ್ಲಿನ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಪೊಲೀಸ್ ಇಲಾಖೆ ಈ ಹಿಂದೆ ಹಲವು ಬಾರಿ ಶೇ. 50ರಷ್ಟು ಮಾತ್ರ ದಂಡ ಕಟ್ಟಿಸಿಕೊಂಡು ಪ್ರಕರಣಗಳನ್ನು ಮುಕ್ತಾಯಗೊಳಿಸಿತ್ತು. ಆಗ ಜನ ಕೂಡ ಉತ್ಸಾಹದಿಂದಲೇ ತಮ್ಮ ಪಾಲಿನ ದಂಡದ ಮೊತ್ತ ಪಾವತಿಸಿದ್ದರಿಂದ ಅದೇ ಮಾದರಿಯ ಮೊರೆ ಹೋಗಿರುವ ಸಾರಿಗೆ ಇಲಾಖೆ ವಿನಾಯಿತಿಯ ‘ಪ್ರಯೋಗ’ ಮಾಡುತ್ತಿದೆ.
ರಾಜ್ಯದ ಸಾರಿಗೆ ಇಲಾಖೆಯಲ್ಲಿ 1991–92ರಿಂದ 2019–20ರ ಅವಧಿಯಲ್ಲಿ ಮೋಟಾರು ವಾಹನಗಳ ಕಾಯ್ದೆ/ನಿಯಮಗಳ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ದಾಖಲಾದ ಬಾಕಿ ಇರುವ ಇಲಾಖೆ ಶಾಸನ ಪ್ರಕರಣಗಳಲ್ಲಿ ಈ ರಿಯಾಯಿತಿ ಪ್ರಕಟಿಸಲಾಗಿದೆ. ನಾಲ್ಕು ದಿನಗಳ ಹಿಂದಿನಿಂದಲೇ (ನ.21) ಅರ್ಧ ದಂಡ ಮಾತ್ರ ಕಟ್ಟುವ ಪ್ರಕ್ರಿಯೆ ಆರಂಭವಾಗಿದ್ದು ಸಾರ್ವಜನಿಕವಾಗಿ ಬಹಳಷ್ಟು ಜನರಿಗೆ ಗೊತ್ತಾಗದ ಕಾರಣ ಆರಂಭದಲ್ಲಿ ಪ್ರತಿಕ್ರಿಯೆ ನೀರಸವಾಗಿದೆ. ಇದೇ ವರ್ಷದ ಡಿಸೆಂಬರ್ 12ರ ತನಕ ರಿಯಾಯಿತಿ ಮುಂದುವರಿಯಲಿದ್ದು, ಪ್ರಕರಣ ಹೊಂದಿರುವ ವಾಹನಗಳ ಮಾಲೀಕರು ದಂಡದ ಮೊತ್ತವನ್ನು ಆರ್‌ಟಿಒ ಕಚೇರಿಯಲ್ಲಿ ಪಾವತಿಸಿ ರಸೀದಿ ಪಡೆದುಕೊಳ್ಳಬೇಕಿದೆ.
ನಿಯಮಗಳನ್ನು ಉಲ್ಲಂಘಿಸಿ ದಂಡಕ್ಕೆ ಗುರಿಯಾದವರಿಗೆ ಮಾತ್ರ ಈ ರಿಯಾಯಿತಿ ಲಭಿಸಲಿದ್ದು, ಇದು ಬಾಕಿ ಉಳಿಸಿಕೊಂಡ ತೆರಿಗೆಗೆ ಅನ್ವಯವಾಗುವುದಿಲ್ಲ ಎಂದು ಆರ್‌ಟಿಒ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವಾಹನಗಳ ಚಾಲನಾ ಪರವಾನಗಿ, ಆರ್.ಸಿ. ಇಲ್ಲದೇ ಇರುವುದು, ಸೀಟ್ ಬೆಲ್ಟ್ ಧರಿಸದೆ ಕಾರುಗಳ ಚಾಲನೆ, ಹೆಲ್ಮೆಟ್ ಧರಿಸದೇ ದ್ವಿಚಕ್ರವಾಹನ ಚಾಲನೆ, ಮದ್ಯಪಾನ ಮಾಡಿ ವಾಹನ ಚಾಲನೆ ಹೀಗೆ ವಿವಿಧ ಕಾರಣಗಳಿಗಾಗಿ ಆರ್‌ಟಿಒ ಅಧಿಕಾರಿಗಳು ದಂಡ ವಿಧಿಸಿದ ಪ್ರಕರಣಗಳು ಜಿಲ್ಲೆಯಲ್ಲಿ ಬಾಕಿ ಉಳಿದುಕೊಂಡಿವೆ.
ನಿರಂತರವಾಗಿ ತಪಾಸಣೆ ಮಾಡುವಾಗ ದಂಡ ಹಾಕಲಾಗಿರುತ್ತದೆ. ನಿಗದಿತ ಸಮಯದಲ್ಲಿ ಸೂಕ್ತ ದಾಖಲಾತಿ ತಂದುಕೊಟ್ಟರೆ ವಾಹನಗಳ ಚಾಲಕ ಅಥವಾ ಮಾಲೀಕ ದಂಡ ಕಟ್ಟುವ ಅಗತ್ಯ ಇರುವುದಿಲ್ಲ. ನಿಗದಿತ ಅವಧಿ ಪೂರ್ಣಗೊಂಡ ಬಳಿಕವೂ ದಾಖಲಾತಿ ಒದಗಿಸದಿದ್ದರೆ ಜಾಗೃತಿ ಮೂಡಿಸಲು ಕನಿಷ್ಠ ದಂಡ ಹಾಕಲಾಗುತ್ತದೆ. ಅಗತ್ಯ ದಾಖಲಾತಿಗಳು ಅಪ್ಡೇಟ್ ಇಲ್ಲವಾದರೆ ದಂಡ ಹಾಕಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಆರ್‌ಟಿಇ ಕಚೇರಿ ಮೊದಲು ಹೊಸಪೇಟೆಗೆ ತೆರಳುವ ಮಾರ್ಗದಲ್ಲಿತ್ತು. ಕೆಲ ವರ್ಷಗಳ ಹಿಂದೆ ತನ್ನ ಹೊಸ ಕಚೇರಿಗೆ ಸ್ಥಳಾಂತರಗೊಂಡಿದೆ. ಹಲವು ದಾಖಲೆಗಳು ಹಳೆ ಕಚೇರಿಯಲ್ಲಿಯೇ ಉಳಿದುಕೊಂಡಿದ್ದು ಅವುಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಬರಬೇಕಾದ ದಂಡ ಎಷ್ಟು ಎನ್ನುವ ಲೆಕ್ಕಾಚಾರವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ.
‘ಪೊಲೀಸ್ ಇಲಾಖೆಯ ಮಾದರಿಯಲ್ಲಿಯೇ ಸಾರಿಗೆ ಇಲಾಖೆಯಲ್ಲಿಯೂ ದಂಡ ರಿಯಾಯಿತಿ ಘೋಷಣೆ ಮಾಡಲಾಗಿದೆ. ಈಗಿನ ದಂಡ ಹೊರೆಯಾಗುತ್ತಿದೆ. ರಿಯಾಯಿತಿ ಕೊಡಿಸುವಂತೆ ಅನೇಕ ವಾಹನಗಳ ಮಾಲೀಕರು ದುಂಬಾಲು ಬಿದ್ದಿದ್ದರು. ಈಗ ಸರ್ಕಾರವೇ ರಿಯಾಯಿತಿ ಘೋಷಣೆ ಮಾಡಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಇಲ್ಲಿನ ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭುಸ್ವಾಮಿ ಹಿರೇಮಠ ತಿಳಿಸಿದ್ದಾರೆ.
ಶೇ. 50ರಷ್ಟು ಮಾತ್ರ ದಂಡ ಪಾವತಿಸಿ ಸರ್ಕಾರ ನೀಡಿರುವ ರಿಯಾಯಿತಿ ಅವಕಾಶವನ್ನು ಜನ ಬಳಸಿಕೊಳ್ಳಬೇಕು. ಈ ಅವಕಾಶ ಡಿ.12ರ ತನಕ ಮಾತ್ರ ಇರುತ್ತದೆ. ಪ್ರಭುಸ್ವಾಮಿ ಹಿರೇಮಠ ಕೊಪ್ಪಳ ಪ್ರಭಾರ ಆರ್‌ಟಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.