ಕೊಪ್ಪಳ: ’ಮುಂಬರುವ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಸಂದರ್ಭದಲ್ಲಿ ಜಿಲ್ಲೆಯ ಜನ ಸೌಹಾರ್ದದಿಂದ ಹಬ್ಬ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡಬಾರದು’ ಎಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಎರಡೂ ಸಮುದಾಯಗಳ ಮುಖಂಡರಿಗೆ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಡೆದ ಜಿಲ್ಲಾಮಟ್ಟದ ಶಾಂತಿ ಸಭೆಯಲ್ಲಿ ಸೂಚನೆ ನೀಡಿದ ಅವರು ‘ನಾವೆಲ್ಲರೂ ವಿವಿಧ ಜಾತಿ ಧರ್ಮದವರಾಗಿದ್ದರೂ ಪರಸ್ಪರ ಸಹೋದರರಂತೆ ಇಲ್ಲಿ ಬಾಳುತ್ತಿದ್ದೇವೆ. ಹೀಗಾಗಿ ಗೌರಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಎರಡೂ ಹಬ್ಬಗಳನ್ನು ಸೌಹಾರ್ದದಿಂದ ಆಚರಿಸಬೇಕು’ ಎಂದರು.
‘ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳು ನಿಷೇಧವಾಗಿ ಅನೇಕ ವರ್ಷಗಳಾಗಿದ್ದರೂ ಕೆಲವೆಡೆ ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುತ್ತಿರುವುದು ಕಂಡುಬರುತ್ತಿದೆ. ಇದಕ್ಕೆ ಅವಕಾಶವಿಲ್ಲ. ಕಡ್ಡಾಯವಾಗಿ ಪರಿಸರ ಸ್ನೇಹಿ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ಪಿಒಪಿ ಮೂರ್ತಿಗಳಿದ್ದರೆ ಅವುಗಳನ್ನು ವಶಕ್ಕೆ ಪಡೆದುಕೊಳ್ಳುವಂತೆ ಪರಿಸರ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರು ಮಾತನಾಡಿ ‘ಈಗಾಗಲೇ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಶಾಂತಿ ಸಭೆಗಳನ್ನು ಕೈಗೊಳ್ಳಲಾಗಿದ್ದು, ಅವಶ್ಯವಿದ್ದಲ್ಲಿ ಇನ್ನಷ್ಟು ಸಭೆಗಳನ್ನು ನಡೆಸಲಾಗುವುದು. ಕಳೆದ ಬಾರಿ ಯಾವುದೇ ಸಮಸ್ಯೆಗಳಾದಂತೆ ಶಾಂತಿಯುತವಾಗಿ ಆಚರಣೆ ಮಾಡಲಾಗಿದೆ. ಅದೇ ರೀತಿ ಈ ವರ್ಷವು ಈ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು’ ಎಂದು ಹೇಳಿದರು.
‘ಗಣೇಶ ಪ್ರತಿಷ್ಠಾಪನೆಗೆ ಅಗತ್ಯವಿರುವ ಪರವಾನಿಗೆ ಪಡೆಯಬೇಕು. ಸಾರ್ವಜನಿಕರ ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರ ಮಾರ್ಗ ನಿರ್ಮಿಸಬೇಕು. ಗಣೇಶ ಪ್ರತಿಷ್ಠಾಪನಾ ಮಂಡಳಿಯವರು ಮೂರ್ತಿಗಳ ವಿಸರ್ಜನೆ, ಮೆರವಣಿಗೆ ಮಾಡುವ ಮಾರ್ಗಗಳ ಮಹಿತಿಯನ್ನು ಮುಂಚಿತವಾಗಿ ಸಂಬಂಧಪಟ್ಟ ಆಯಾ ಪೊಲೀಸ್ ಠಾಣೆಗೆ ತಿಳಿಸಿ ಅನುಮತಿ ಪಡೆದುಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.
ವಿವಿಧ ಸಮಾಜದ ಮುಖಂಡರಾದ ಸೈಯದ್ ನಾಸೀರ ಹುಸೇನಿ, ಸಿದ್ದಪ್ಪ ಹಂಚಿನಾಳ, ವಸಂತಕುಮಾರ ಬಾವಿಮನಿ, ಶಾಮಿದ್ ಮನಿಯಾರ್, ಕರಿಬಸಪ್ಪ ಬಿನ್ನಾಳ, ಹನುಮಂತಪ್ಪ ಹ್ಯಾಟಿ ಹಾಗೂ ಮತ್ತಿತರರು ತಮ್ಮ ಸಲಹೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಮಾರ್, ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಸಂಘಟಕರು ಪರವಾನಿಗೆ ಪಡೆದ ಮಾರ್ಗ ಬಿಟ್ಟು ಯಾವುದೇ ಕಾರಣಕ್ಕೂ ಮಾರ್ಗ ಬದಲಾವಣೆ ಮಾಡುವಂತಿಲ್ಲ.ಡಾ. ರಾಮ್ ಎಲ್. ಅರಸಿದ್ಧಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಹಬ್ಬಗಳ ಆಚರಣೆ ಸಂದರ್ಭದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಹಾಗೇನಾದರೂ ಆದರೆ ಅಂಥವರ ವಿರುದ್ಧ ಕಾನೂನು ಕ್ರಮ ನಿಶ್ಚಿತ.ಸುರೇಶ ಇಟ್ನಾಳ ಜಿಲ್ಲಾಧಿಕಾರಿ
ಕೊಪ್ಪಳ: ಹಬ್ಬಗಳ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು. ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಪೊಲೀಸ್ ಜೆಸ್ಕಾಂ ಅರಣ್ಯ ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಪ್ರತ್ಯೇಕ ಸಭೆ ನಡೆಸಿದರು. ‘ರಸ್ತೆಗಳಲ್ಲಿ ಎಲ್ಲಾ ಕಡೆ ಬೀದಿ ದೀಪಗಳನ್ನು ಅಳವಡಿಸಬೇಕು. ಎಲ್ಲಿಯೂ ಶಾರ್ಟ್ ಸರ್ಕಿಟ್ ಆಗದಂತೆ ನೋಡಿಕೊಳ್ಳಬೇಕು’ ಎಂದರು. ಡಾ. ರಾಮ್ ಎಲ್. ಅರಸಿದ್ದಿ ಅವರು ಮಾತನಾಡಿ ‘ಗಣಪತಿ ವಿಸರ್ಜನಾ ಸ್ಥಳಗಳಾದ ದಾಸನಾಳ ಬ್ರಿಜ್ ಕೊಪ್ಪಳದ ಹುಲಿಕೇರಿ ಸೇರಿದಂತೆ ಇತರೆ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ ಬೆಳಕಿನ ವ್ಯವಸ್ಥೆ ಮಾಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.