ADVERTISEMENT

ಕೊಪ್ಪಳ | ಒಡೆದ ಮುಖ್ಯಕೊಳವೆ: ಭಾರಿ ಪ್ರಮಾಣ ನೀರು ಪೋಲು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 5:24 IST
Last Updated 15 ಸೆಪ್ಟೆಂಬರ್ 2025, 5:24 IST
   

ಕುಷ್ಟಗಿ: ಕೊಪ್ಪಳ ಜಿಲ್ಲೆಯ ಬಹಳಷ್ಟು ಕೆರೆಗಳಿಗೆ ನೀರು ಪೂರೈಸುವ ಕೊಪ್ಪಳ ಏತ ನೀರಾವರಿ ಯೋಜನೆಯ ಮುಖ್ಯಕೊಳವೆ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವ ಘಟನೆ ಭಾನುವಾರ ಸಂಜೆ ಈ ತಾಲ್ಲೂಕಿನ ಮುದೂಟಗಿ ಬಳಿ ನಡೆದಿದೆ.

ಕೃಷ್ಣಾ ಜಲ ಭಾಗ್ಯ ನಿಗಮಕ್ಕೆ ಸೇರಿದ ಇಳಕಲ್‌ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ಬಲಕುಂದಿ-ಮುದೂಟಗಿ ಗ್ರಾಮದ ಸೀಮಾಂತರದಲ್ಲಿ ಕೊಳವೆ ಹಾನಿಗೆ ಒಳಗಾಗಿದೆ. ಸುಮಾರು ಮೂರು ತಾಸಿನವರೆಗೂ ಭಾರಿ ಪ್ರಮಾಣದಲ್ಲಿ ರಭಸವಾಗಿ ಚಿಮ್ಮಿದ ನೀರು ಅಕ್ಕಪಕ್ಕದ ಹೊಲಗದ್ದೆಗಳಿಗೆ ನುಗ್ಗಿ ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಕೃಷಿ, ತೋಟಗಾರಿಕೆ ಬೆಳೆಗಳಿಗೆ ಬಹಳಷ್ಟು ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ. ನಂತರ ನೀರು ಹಳ್ಳಗಳಲ್ಲಿ ಪ್ರವಾಹದ ರೂಪದಲ್ಲಿ ಹರಿದಿದೆ ಎಂಬುದು ತಿಳಿದಿದೆ.

ಕೃಷ್ಣಾ ಬಿ ಸ್ಕೀಂ ಯೋಜನೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಂಡಿದ್ದು ಬಲಕುಂದಿ ಜಾಕ್‌ವೆಲ್‌ ಮೂಲಕ ಕಲಾಲಬಂಡಿ ಬಳಿ ಇರುವ ಜಾಕ್‌ವೆಲ್‌ ಇತರೆ ಮಾರ್ಗಗಳಲ್ಲಿ ನೀರು ಹರಿಯುತ್ತಿತ್ತು. ಈಗ ಕೊಳವೆ ಒಡೆದಿರುವುದರಿಂದ ಕೊಪ್ಪಳ ಜಿಲ್ಲೆಯ ವಿವಿಧ ತಾಲ್ಲೂಕುಗಳ 78 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಸ್ಥಗಿತಗೊಂಡಿದೆ. ಕೊಳವೆ ಒಡೆದ ಮಾಹಿತಿ ತಿಳಿದ ನಂತರ ನೀರು ಎತ್ತುವ ಪಂಪ್‌ಗಳನ್ನು ಬಂದ್‌ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ADVERTISEMENT

ಸ್ಥಳಕ್ಕೆ ಭೇಟಿ ನೀಡಿ ನಂತರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಇಳಕಲ್‌ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವಪ್ಪ ಛಲವಾದಿ, ಕೊಳವೆ ಒಡೆದ ನಂತರ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಏಕ ಕಾಲಕ್ಕೆ ಎಲ್ಲ ಕೆರೆಗಳಿಗೂ ನೀರು ಹರಿಸಲಾಗುತ್ತಿತ್ತು. ಎರಡು ಪಂಪ್‌ಗಳು ಚಾಲೂ ಇದ್ದವು, ಒತ್ತಡ ಹೆಚ್ಚಾಗಿ ಬೆಸುಗೆ ಇದ್ದ ಸ್ಥಳದಲ್ಲಿ ಕೊಳವೆ ಒಡೆದಿದೆ ಎಂದರು. ನೀರು ಖಾಲಿಯಾಗಲು 24 ತಾಸು ಸಮಯ ಬೇಕಾಗುತ್ತದೆ. ನಂತರ ಗುಂಡಿ ತೆಗೆದು ಕೊಳವೆ ಒಡೆದ ಪ್ರಮಾಣ ಗಮನಿಸಿ ದುರಸ್ತಿ ನಡೆಸಬೇಕು. ಈ ಕೆಲಸಕ್ಕಕ್ಕಾಗಿ ಸುಮಾರು ಐದಾರು ದಿನಗಳ ಸಮಯ ಹಿಡಿಯುತ್ತದೆ ಎಂದು ಸ್ಪಷ್ಟಪಡಿಸಿದರು.

ಕೆರೆ ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ನಿರ್ವಹಣೆ ಕೆಲಸ ಜಿ.ಶಂಕರ ಎಂಬ ಗುತ್ತಿಗೆದಾರರಿಗೆ ಸೇರಿದ್ದು ಅವರೇ ದುರಸ್ತಿ ಕೆಲಸ ನಡೆಸಲಿದ್ದಾರೆ. ಶೀಘ್ರದಲ್ಲಿ ಕೊಳವೆ ದುರಸ್ತಿ ಕೆಲಸ ಮುಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಿವಪ್ಪ ತಿಳಿಸಿದರು.

ಐದು ವರ್ಷ ನಿರ್ವಹಣೆ ಜವಾಬ್ದಾರಿ ಗುತ್ತಿಗೆದಾರರದು. ಆದರೆ ಅವಧಿ ಪೂರ್ಣಗೊಳ್ಳುವ ಮೊದಲೇ ಹಿಂದಿನ ಅವಧಿಯಲ್ಲಿ ಗುತ್ತಿಗೆದಾರಗೆ ಸರ್ಕಾರ ಅಂತಿಮ ಬಿಲ್‌ ಪಾವತಿಸಿ ಕೈತೊಳೆದುಕೊಂಡಿದೆ. ಈಗ ನಾವು ಗುತ್ತಿಗೆದಾರನಿಗೆ ಕೈಮುಗಿದು ಕೆಲಸ ಮಾಡಿಸಿಕೊಳ್ಳಬೇಕಿದೆ. ದೊಡ್ಡನಗೌಡ ಪಾಟೀಲ ಶಾಸಕ.
5 ವರ್ಷ ನಿರ್ವಹಣೆ ಜವಾಬ್ದಾರಿ ಗುತ್ತಿಗೆದಾರರದ್ದು. ಅವಧಿ ಪೂರ್ಣಗೊಳ್ಳುವ ಮೊದಲೇ ಹಿಂದಿನ ಅವಧಿಯಲ್ಲಿ ಗುತ್ತಿಗೆದಾರನಿಗೆ ಸರ್ಕಾರ ಅಂತಿಮ ಬಿಲ್‌ ಪಾವತಿಸಿದೆ. ಈಗ ನಾವು ಗುತ್ತಿಗೆದಾರನಿಗೆ ಕೈಮುಗಿದು ಕೆಲಸ ಮಾಡಿಸಿಕೊಳ್ಳಬೇಕಿದೆ.
ದೊಡ್ಡನಗೌಡ ಪಾಟೀಲ ಶಾಸಕ 

ರೈತರ ಕೈಸೇರದ ಭೂಸ್ವಾಧೀನ ಪರಿಹಾರ ಈ ಮಧ್ಯೆ ಮುಖ್ಯಕೊಳವೆ ಅಳವಡಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡಿದ್ದರೂ ಸಂಬಂಧಿಸಿದ ಬಹಳಷ್ಟು ರೈತರಿಗೆ ಇನ್ನೂ ಪೂರ್ಣಪ್ರಮಾಣದ ಪರಿಹಾರ ಹಣ ಕೈಸೇರಿಲ್ಲ ಎಂದು ತಿಳಿದಿದೆ. ಈಗ ಕೊಳವೆ ಒಡೆದಿದ್ದರೂ ಭೂ ಪರಿಹಾರ ಹಣ ಪಾವತಿಯಾಗುವವರೆಗೂ ದುರಸ್ತಿ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ಹಾಗಾಗಿ ಕೊಳವೆ ದುರಸ್ತಿ ಕೆಲಸ ಜಟಿಲವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕೊಳವೆಯನ್ನು ಶೀಘ್ರದಲ್ಲಿ ದುರಸ್ತಿ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೆಬಿಜೆಎನ್‌ಎಲ್‌ ಮುಖ್ಯ ಎಂಜಿನಿಯರ್‌ಗೆ ಸೂಚಿಸಿರುವುದಾಗಿ ಶಾಸಕ ದೊಡ್ಡನಗೌಡ ಪಾಟೀಲ 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.