
ದಿನಗಳು ಉರುಳಿ ಮತ್ತೊಂದು ವರ್ಷದ ಮಗ್ಗಲು ಬದಲಿಸುವ ಹೊಸ್ತಿಲಿಗೆ ಬಂದಿದ್ದೇವೆ. 2025ರ ವರ್ಷಾರಂಭದಲ್ಲಿದ್ದ ಕೊಪ್ಪಳ ಜಿಲ್ಲೆಯ ಜನರಲ್ಲಿದ್ದ ಸಾಧನೆಯ ತುಡಿತಕ್ಕೆ ತುಸು ಹೆಚ್ಚೇ ಖುಷಿ ಸಿಕ್ಕಿದೆ. ಅಷ್ಟೇ ನೋವು, ದುಃಖ ಆವರಿಸಿದೆ. ಜಿಲ್ಲೆಗೆ ಮೊದಲ ಪದ್ಮಶ್ರೀ ಪ್ರಶಸ್ತಿಯ ಗರಿಯೂ ಲಭಿಸಿದೆ. ವರ್ಷಪೂರ್ತಿ ಜಿಲ್ಲೆಯ ಜನ ಕಂಡ ನೋವು ನಲಿವುಗಳ ‘ಹೊರಳು ನೋಟ’ದ ಕುರಿತು ಪ್ರಮೋದ ಕುಲಕರ್ಣಿ ಮಾಹಿತಿ ನೀಡಿದ್ದಾರೆ.

ಕೊಲೆ ಪ್ರಕರಣ; ಮಹತ್ವದ ಪ್ರಕರಣದಲ್ಲಿ ಜಾಮೀನು
ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದ ಕೊಪ್ಪಳದ ಗವಿಸಿದ್ದಪ್ಪ ನಾಯಕ ಎನ್ನುವ ಹಿಂದೂ ಯುವಕನ ಕೊಲೆಯಾಗಿತ್ತು. ಇದು ರಾಜ್ಯದಾದ್ಯಂತ ಸುದ್ದಿಯಾಗಿ ವಿವಿಧ ಪಕ್ಷಗಳ ರಾಜಕೀಯ ನಾಯಕರ ವಾಗ್ವಾದ ಹಾಗೂ ಹೋರಾಟಕ್ಕೆ ಕಾರಣವಾಗಿತ್ತು. ಗಂಗಾವತಿಯ ಬಿಜೆಪಿ ನಗರ ಘಟಕದ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರ ಅವರನ್ನು ಮಧ್ಯರಾತ್ರಿ ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿತ್ತು. ಆರೋಪ ಮುಕ್ತ: ದಶಕದ ಹಿಂದೆ ರಾಜ್ಯದ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿದ್ದ ವಿದ್ಯಾರ್ಥಿ ಯಲ್ಲಾಲಿಂಗನ ಸಾವಿನ ಪ್ರಕರಣದ ಅಂತಿಮ ಆದೇಶವನ್ನು ಕೊಪ್ಪಳ ಜಿಲ್ಲಾ ನ್ಯಾಯಾಲಯ ಪ್ರಕಟಿಸಿ ಎಲ್ಲ ಆರೋಪಿಗಳನ್ನು ನಿರ್ದೋಷಿ ಎಂದು ಹೇಳಿತ್ತು. ಸಚಿವ ಶಿವರಾಜ ತಂಗಡಗಿ ಅವರ ರಾಜೀನಾಮೆಗೂ ಯಲ್ಲಾಲಿಂಗನ ಕೊಲೆ ಪ್ರಕರಣ ಕಾರಣವಾಗಿತ್ತು. 2015ರಲ್ಲಿ ಕೊಪ್ಪಳ ರೈಲ್ವೆ ಹಳಿ ಬಳಿ ಯಲ್ಲಾಲಿಂಗನ ಮೃತದೇಹ ಪತ್ತೆಯಾಗಿತ್ತು. ತನಿಖೆಯನ್ನು ಸಿಐಡಿಗೆ ಒಪ್ಪಿಸಿ ಈ ವರ್ಷ ಆದೇಶ ಬಂದಿದೆ.
ನನಸಾದ ಕುಷ್ಟಗಿ ಯಲಬುರ್ಗಾ ರೈಲಿನ ಕನಸು
ಕುಕನೂರು ಪಟ್ಟಣ ಯಲಬುರ್ಗಾ ಹಾಗೂ ಕುಷ್ಟಗಿ ತಾಲ್ಲೂಕುಗಳ ಜನರಿಗೆ ಕನಸಿನ ಕೂಸಾಗಿದ್ದ ರೈಲು ರೆಕ್ಕೆ ಬಿಚ್ಚಿಕೊಂಡು ಈ ವರ್ಷದಲ್ಲಿ ಓಡಾಡಿದ್ದು ಆ ಭಾಗದ ಜನರ ಸಂಭ್ರಮ ಹೆಚ್ಚಿಸಿತು. ಪ್ರಸ್ತುತ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಹಿಂದೆ ಸಂಸದರಾಗಿದ್ದಾಗಿನಿಂದ ರೈಲಿನ ಕನಸು ಒಡಮೂಡಿತ್ತು. ಈಗ ಆ ಆಸೆ ಈಡೇರಿದೆ. ಮೇ 15ರಂದು ಗದಗ–ತಳಕಲ್–ವಾಡಿ ನೂತನ ರೈಲು ಮಾರ್ಗದಲ್ಲಿ ಕುಷ್ಟಗಿಯಿಂದ ಹುಬ್ಬಳ್ಳಿಗೆ ಪ್ರಯಾಣಿಕರ ರೈಲಿನ ಸಂಚಾರಕ್ಕೆ ಚಾಲನೆ ದೊರೆಯಿತು.
ಎರಡು ಬಾರಿ ಕೊಪ್ಪಳ ಬಂದ್
ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಖಂಡಿಸಿ ಸಂವಿಧಾನ ಸಂರಕ್ಷಣಾ ಸಮಿತಿ ಜನವರಿ 6ರಂದು ಕೊಪ್ಪಳ ಬಂದ್ ನಡೆಸಿತ್ತು. ಇದು ಈ ವರ್ಷದಲ್ಲಿ ನಡೆದ ಮೊದಲ ಬಂದ್. ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆಗೆ ವಿರೋಧಿಸಿ ಫೆ. 24ರಂದು ಎರಡನೇ ಬಾರಿ ಕೊಪ್ಪಳ ಬಂದ್ ನಡೆದಿತ್ತು. ಸ್ವಾಮೀಜಿಗಳು ಸಂಘ ಸಂಸ್ಥೆಗಳು ಗಣ್ಯರು ಒಕ್ಕೊರಲಿನಿಂದ ಬಂದ್‌ಗೆ ಬೆಂಬಲ ನೀಡಿ ಹೋರಾಟದಲ್ಲಿ ಪಾಲ್ಗೊಂಡರು. ಇದಾದ ಬಳಿಕವೂ ಜಿಲ್ಲಾ ಬಚಾವೊ ಆಂದೋಲನ ಸಮಿತಿಯವರು ಅನಿರ್ದಿಷ್ಟ ಧರಣಿ ಮುಂದುವರಿಸಿದೆ. ಇನ್ನೊಂದೆಡೆ ಕಾರ್ಖಾನೆಗಳಿಗಾಗಿ ಭೂಮಿ ಕಳೆದುಕೊಂಡ ರೈತರು ಕೂಡ ಕಾರ್ಖಾನೆ ಆರಂಭಿಸಿ ಇಲ್ಲವೇ ನಮ್ಮ ಭೂಮಿ ನಮಗೆ ಕೊಡಿ ಎಂದು ಹೋರಾಟ ಮಾಡುತ್ತಿದ್ದಾರೆ.
‘ಪದ್ಮಶ್ರೀ’ ತಂದುಕೊಟ್ಟ ಭೀಮವ್ವ
ಕೊಪ್ಪಳ ತಾಲ್ಲೂಕಿನ ಮೋರನಾಳ ಗ್ರಾಮದ ತೊಗಲು ಗೊಂಬೆಯಾಟದ ಕಲಾವಿದೆ ಶತಾಯುಷಿ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರಿಗೆ ಈ ಬಾರಿಯ ಪದ್ಮಶ್ರೀ ಗೌರವ ಒಲಿದಿದ್ದು ವರ್ಷದ ಖುಷಿ ಹೆಚ್ಚಿಸಿತು. ಅನಕ್ಷರಸ್ಥೆಯಾದರೂ ಅಜ್ಜಿ ಅಮೆರಿಕ ಪ್ಯಾರಿಸ್ ಇಟಲಿ ಇರಾನ್ ನೆದರ್ಲೆಂಡ್ಸ್ ಹೀಗೆ ಅನೇಕ ದೇಶಗಳಲ್ಲಿ ರಾಮಾಯಣ ಹಾಗೂ ಮಹಾಭಾರತದಂಥ ಮಹಾಕಾವ್ಯಗಳನ್ನು ಪ್ರಸ್ತುತಪಡಿಸಿದ್ದಾರೆ. ಇದು ಕೊಪ್ಪಳ ಜಿಲ್ಲೆಗೆ ಒಲಿದ ಮೊದಲ ಪದ್ಮಶ್ರೀ.
2025ರಲ್ಲಿ ಜಿಲ್ಲೆಯಲ್ಲಿ ನಡೆದ ಪ್ರಮುಖ ಘಟನಾವಳಿಗಳು
* ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರೆಯಲ್ಲಿ ಕಣ್ಣೀರಿಟ್ಟಿದ್ದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ.
* ಗವಿಮಠಕ್ಕೆ ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯ ಶಂಕರ್ ಭೇಟಿ.
* ಮೊದಲ ಬಾರಿಗೆ ತುಂಗಭದ್ರಾ ನದಿ ತಟದ ಹುಲಿಗಿಯಲ್ಲಿ ತುಂಗಾರತಿ ಕಾರ್ಯಕ್ರಮ.
* ಜಿಲ್ಲಾಧಿಕಾರಿಯಾಗಿದ್ದ ನಲಿನ್ ಅತುಲ್ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ ವರ್ಗಾವಣೆ ಜಿಲ್ಲಾಧಿಕಾರಿಯಾಗಿ ಡಾ. ಸುರೇಶ ಇಟ್ನಾಳ ಹಾಗೂ ಜಿ.ಪಂ. ಸಿಇಒ ಆಗಿ ವರ್ಣಿತ್ ನೇಗಿ ಅಧಿಕಾರ ಸ್ವೀಕಾರ.
* ಕೇಂದ್ರ ಸರ್ಕಾರದ ಅಮೃತ ಭಾರತ್ ಯೋಜನೆಯಲ್ಲಿ ಕೊಪ್ಪಳ ತಾಲ್ಲೂಕಿನ ಮುನಿರಾಬಾದ್‌ನಲ್ಲಿ ರೈಲು ನಿಲ್ದಾಣದ ಉದ್ಘಾಟನೆ.
* ಕುಕನೂರಿನಲ್ಲಿ ರಾಜ್ಯಮಟ್ಟದ ಸಹಕಾರ ಸಮಾವೇಶ.
* ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ರಾಬಕೊವಿ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆ.
* ಕೋಲ್ಕತ್ತದಲ್ಲಿ ಫೋಟೋಗ್ರಫಿ ಈಸ್ ಮೈ ಪ್ಯಾಷನ್ ಕ್ಲಬ್‌ನಿಂದ ನಡೆದ ವಂಡರ್ಸ್ ಆಫ್ ಆರ್ಟ್-2025 ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳದ ಛಾಯಾಗ್ರಹಕ ಪ್ರಕಾಶ ಕಂದಕೂರ ಅವರ ಚಿತ್ರ ರಾಣಿ ಪ್ರಮಿಳಾದೇವಿ ಬೆಸ್ಟ್ ಫೆಸ್ಟಿವಲ್ ಅವಾರ್ಡ್ ಪಡೆದುಕೊಂಡಿತು.
* ಜಾನಪದ ಕ್ಷೇತ್ರದಲ್ಲಿನ ಸಾಧನೆಗೆ ಕುಷ್ಟಗಿ ತಾಲ್ಲೂಕಿನ ತೆಗ್ಗಿಹಾಳ ಗ್ರಾಮದ ಬಸಪ್ಪ ಭರಮಪ್ಪ ಚೌಡಕಿ ಸಹಕಾರ ಕ್ಷೇತ್ರದಲ್ಲಿ ಗುಮಗೇರಾದ ಶೇಖರಗೌಡ ಮಾಲಿಪಾಟೀಲ ಮತ್ತು ಸಂಗೀತ ಕ್ಷೇತ್ರದಲ್ಲಿ ಯಲಬುರ್ಗಾ ತಾಲ್ಲೂಕಿನ ಮುಧೋಳ ಗ್ರಾಮದ ದೇವೇಂದ್ರಕುಮಾರ ಪತ್ತಾರ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದರು.
* ಕೊಪ್ಪಳದ ಆರೈಕೆದಾರರಾದ ವರ್ಷಾ ಹಿರೇಮಠ ಅವರಿಗೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಉತ್ತಮ ಆರೈಕೆದಾರರು ರಾಜ್ಯ ಪ್ರಶಸ್ತಿ ಲಭಿಸಿತು.
* ಜರ್ಮನಿಯ ಲಿಂಡೌನಲ್ಲಿ ನಡೆದ ನೋಬೆಲ್ ಪ್ರಶಸ್ತಿ ಪಡೆದ ರಸಾಯನಶಾಸ್ತ್ರದ ದಿಗ್ಗಜ ವಿಜ್ಞಾನಿಗಳ ದುಂಡು ಮೇಜಿನ ಪರಿಷತ್ತಿನ ಸಭೆಗೆ ಯುವ ವಿಜ್ಞಾನಿ ಗಂಗಾವತಿಯ ನಸೀಮ್ ಕೌಸರ್ ಆಯ್ಕೆಯಾಗಿದ್ದರು.
* 2023-24ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಕೃಷಿ ಇಲಾಖೆಗೆ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿತು.
* ಕೊಪ್ಪಳದ ಅನಿಕೇತ ರಾಜೇಶ ಬಳ್ಳಾರಿ ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಗ್ರಾಮದ ನಮ್ರತಾ ಸಿನ್ನೂರ ಸಾಹಿತ್ಯ ಗೊಂಡಬಾಳ ಅವರಿಗೆ ‘ಅಕಾಡೆಮಿ ಬಾಲ ಗೌರವ' ಮತ್ತು ಶಿಕ್ಷಕಿ ಅರುಣಾ ನರೇಂದ್ರ ಅವರಿಗೆ ಅಕಾಡೆಮಿಯಿಂದ ಮಕ್ಕಳ ಸಾಹಿತ್ಯ ಕೃಷಿಗೆ ಪ್ರಶಸ್ತಿ ಬಂದಿದೆ.
* ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಕೊಪ್ಪಳದಲ್ಲಿ ನಡೆಯಿತು.
* ಪಹಲ್ಗಾಮ್ ದಾಳಿ ಸಮಯದಲ್ಲಿ ಕಾಶ್ಮೀರದಲ್ಲಿ ಸಿಲುಕಿದ್ದ ಕೊಪ್ಪಳ ಜಿಲ್ಲೆಯ ಜನರ ರಕ್ಷಣೆ. * ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೊಪ್ಪಳದಲ್ಲಿ ಮತ್ತು ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ಕಾರಟಗಿಯಲ್ಲಿ ಮೊದಲ ಬಾರಿಗೆ ಹೋಳಿ ಉತ್ಸವ ಆಚರಣೆ.
* ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್ ಮೊರೆರ ಬೆಟ್ಟಕ್ಕೆ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಭೇಟಿ. ಬೆಂಗಳೂರಿನಲ್ಲಿ ಬೆಣಕಲ್ ಸ್ಮಾರಕಗಳ ವಸ್ತು ಪ್ರದರ್ಶನ ಆಯೋಜನೆ.
* ಕೊಪ್ಪಳದಲ್ಲಿ ಸರ್ಕಾರದ ವತಿಯಿಂದ ಬೃಹತ್ ಸಮಾವೇಶ ಮುಖ್ಯಮಂತ್ರಿಯಿಂದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ. ಎರಡನೇ ಅವಧಿಗೆ ಸಿ.ಎಂ. ಆದ ಬಳಿಕ ಸಿದ್ದರಾಮಯ್ಯ ಜಿಲ್ಲಾಕೇಂದ್ರಕ್ಕೆ ಮೊದಲ ಬಾರಿಗೆ ಭೇಟಿ.
* ರಸಗೊಬ್ಬರಕ್ಕಾಗಿ ಪರದಾಡಿದ ರೈತರು. ಮಣ್ಣು ತಿಂದ ರೈತ. ಬಿಜೆಪಿಯಿಂದ ಎರಡು ಚೀಲ ಗೊಬ್ಬರ ವಿತರಣೆ.
* ಗಂಗಾವತಿಯಲ್ಲಿ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಸಮ್ಮೇಳನ ಆಯೋಜನೆ.
* ಅವಧಿಗೂ ಮುನ್ನಾ ಭರ್ತಿಯಾದ ತುಂಗಭದ್ರಾ ಜಲಾಶಯ. ಕ್ರಸ್ಟ್‌ಗೇಟ್ ಅಳವಡಿಕೆ ಕಾರ್ಯ ಆರಂಭಿಸಿ ಒಂದು ಬೆಳೆಗೆ ಮಾತ್ರ ನೀರು.
* ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಮೂರು ದಿನ ಕೊಪ್ಪಳ ಪ್ರವಾಸ. ತಪ್ಪು ಮಾಡಿದ ವಿವಿಧ ಇಲಾಖೆಗಳು ಹಾಗೂ ಅಧಿಕಾರಿಗಳ ವಿರುದ್ಧ 24 ಸ್ವಯಂಪ್ರೇರಿತ ದೂರು ದಾಖಲು.
* ಕೊಪ್ಪಳ ನಗರಸಭೆ ಮೇಲೆ ಲೋಕಾಯುಕ್ತರ ದಾಳಿ ನಡೆದ ಕೆಲವೇ ದಿನಗಳಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ವರ್ಗಾವಣೆ. ಕೆಆರ್ಐಡಿಎಲ್ ಗುತ್ತಿಗೆ ನೌಕರ ಕಳಕಪ್ಪ ನಿಡಗುಂದಿ ಮನೆ ಮೇಲೆ ದಾಳಿ.
* ಕೊಪ್ಪಳ ಸಮೀಪದ ಮಂಗಳಾಪುರದಲ್ಲಿ ಸ್ಮಶಾನ ಸಮಸ್ಯೆ. ನಡುರಸ್ತೆಯಲ್ಲಿಯೇ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದ ಜನ.
* ಕೊಪ್ಪಳ ತಾಲ್ಲೂಕಿನ ಮೆತಗಲ್ ಗ್ರಾಮದಲ್ಲಿ ಕೃಷಿ ಆಹಾರ ಸಂಸ್ಕರಣ ಘಟಕದ ಉದ್ಘಾಟನೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾಗಿ.
* ಕೊಪ್ಪಳದಲ್ಲಿ ವಿಶ್ವ ಶಾಂತಿ ಸಂದೇಶ ಕಾರ್ಯಕ್ರಮ. ವಿಧಾನಪರಿಷತ್ ಸದಸ್ಯ ಸಲೀಂ ಅಹಮದ್ ನೇತೃತ್ವದಲ್ಲಿ ಆಯೋಜನೆ.
* ಕೊಪ್ಪಳ ಹಾಗೂ ಗಂಗಾವತಿ ನಗರಸಭೆ ಆಡಳಿತದ ಅವಧಿ ಮುಕ್ತಾಯ.
* ಬಿಜೆಪಿ ವತಿಯಿಂದ ಜನಾಕ್ರೋಶ ಯಾತ್ರೆ. ಬಿ.ವೈ.ವಿಜಯೇಂದ್ರ ಸೇರಿದಂತೆ ಅನೇಕರು ಭಾಗಿ.
* ಹನುಮಸಾಗರ ಗ್ರಾಮ ಪಂಚಾಯಿತಿಯು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಕೆ.
* ಅಂಜನಾದ್ರಿಯಲ್ಲಿ ಪೂಜಾ ವಿವಾದ ತಾರಕಕ್ಕೆ.
ಪ್ರವಾಸೋದ್ಯಮಕ್ಕೆ ಪೆಟ್ಟು ನೀಡಿದ ಘಟನೆ
ಗಂಗಾವತಿ ತಾಲ್ಲೂಕಿನ ಸಣಾಪುರದಲ್ಲಿ ಇಸ್ರೇಲ್ ಮಹಿಳೆ ಹಾಗೂ ಸ್ಥಳೀಯ ಹೋಂ ಸ್ಟೇ ಒಡತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತು. ಬಳಿಕ ಆರೋಪಿಗಳನ್ನು ಬಂಧಿಸಿ ಈಗ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಈ ಘಟನೆಯಿಂದಾಗಿ ಕಿಷ್ಕಿಂಧೆ ಪ್ರದೇಶದ ಪ್ರವಾಸೋದ್ಯಮಕ್ಕೆ ಸಾಕಷ್ಟು ಪೆಟ್ಟು ಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.