ADVERTISEMENT

ಕೊಪ್ಪಳ | ಯುವಜನೋತ್ಸವ: ಸುಮಾ, ಶಿವಾನಿಗೆ ಪ್ರಥಮ ಸ್ಥಾನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 6:21 IST
Last Updated 18 ಅಕ್ಟೋಬರ್ 2025, 6:21 IST
ಕೊಪ್ಪಳದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ತೊಗಲುಗೊಂಬೆಯಾಟ ಕಲಾವಿದೆ ಭೀಮವ್ವ ಶಿಳ್ಳೇಕ್ಯಾತರ್ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಉದ್ಘಾಟಿಸಿದರು
ಕೊಪ್ಪಳದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ತೊಗಲುಗೊಂಬೆಯಾಟ ಕಲಾವಿದೆ ಭೀಮವ್ವ ಶಿಳ್ಳೇಕ್ಯಾತರ್ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಉದ್ಘಾಟಿಸಿದರು   

ಕೊಪ್ಪಳ: ಇಲ್ಲಿನ ಸಾಹಿತ್ಯ ಭವನದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ಕಥಾ ವಿಭಾಗದಲ್ಲಿ ಸುಮಾ ಎಂ. ಪ್ರಥಮ ಸ್ಥಾನ ಪಡೆದರೆ, ರೇಷ್ಮಾಬೇಗಂ ವಡ್ಡಟ್ಟಿ ದ್ವಿತೀಯ ಸ್ಥಾನ ಪಡೆದುಕೊಂಡರು. ಚಿತ್ರಕಲಾ ವಿಭಾಗದಲ್ಲಿ ಶಿವಾನಿ ಮೊದಲಿಗರಾದರೆ, ಯಂಕನಗೌಡ ದ್ವಿತೀಯ ಸ್ಥಾನ ಗಳಿಸಿದರು.

ಘೋಷಣೆ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಭೂಮಿಕಾ (ಪ್ರಥಮ), ಅನುಶ್ರೀ (ದ್ವಿತೀಯ), ಕವಿತೆ ಬರೆಯುವ ಸ್ಪರ್ಧೆಯಲ್ಲಿ ಮಾಲಾ ಆರ್‌. (ಪ್ರಥಮ), ಬಸಮ್ಮ ಬ್ಯಾಳಿ (ದ್ವಿತೀಯ), ವಿಜ್ಞಾನ ವಸ್ತುಗಳ ಪ್ರದರ್ಶನದಲ್ಲಿ ಸ್ವಾಮಿ ವಿವೇಕಾನಂದ ಶಾಲೆಯ ಡಿಸ್ಕವರಿ ಡೈನಮೊ ಪ್ರಾತ್ಯಕ್ಷಿಕೆ ಪ್ರಥಮ ಸ್ಥಾನ ಗಳಿಸಿತು. ಜಾನಪದ ಗೀತೆ ಹಾಡುವ ಗುಂಪು ವಿಭಾಗದಲ್ಲಿ ಕುಷ್ಟಗಿಯ ದೇವರಾಜ ಹಾಗೂ ತಂಡ, ಕೊಪ್ಪಳದ ಜಯಶ್ರೀ ಹಾಗೂ ತಂಡ, ಜಾನಪದ ನೃತ್ಯ ಗುಂಪು ವಿಭಾಗದ ಸ್ಪರ್ಧೆಯಲ್ಲಿ ಕಾರಟಗಿಯ ಅಂಜಲಿ ಹಾಗೂ ತಂಡ ಮತ್ತು ಕೊಪ್ಪಳದ ವೈಷ್ಣವಿ ಹಾಗೂ ತಂಡ ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡವು.

ಪ್ರತಿಭೆ ಗುರುತಿಸಲು ವೇದಿಕೆ: ಇದಕ್ಕೂ ಮೊದಲು ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ ‘ರಾಜ್ಯ ಸರ್ಕಾರ ಯುವ ಸಬಲಿಕರಣಕ್ಕಾಗಿ ಯುವಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಯುವಜನರಲ್ಲಿರುವ ಜನಪದ ಕಲೆ, ಸಾಹಿತ್ಯ ಮತ್ತು ಕ್ರೀಡೆಯಂತಹ ಪ್ರತಿಭೆಗಳನ್ನು ಗುರುತಿಸಲು ಯುವಜನೋತ್ಸವ ವೇದಿಕೆಯಾಗಿದೆ’ ಎಂದರು.

ADVERTISEMENT

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಯುವ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತೊಗಲುಗೊಂಬೆಯಾಟ ಕಲಾವಿದೆ ಭೀಮವ್ವ ಶಿಳ್ಳೇಕ್ಯಾತರ ಮಾತನಾಡಿ ‘ಇಂದಿನ ಮಕ್ಕಳು ಮತ್ತು ಯುವ ಸಮುದಾಯವು ಮೊಬೈಲ್ ಬಳಕೆಗೆ ಹೆಚ್ಚು ಸಮಯ ವ್ಯಯ ಮಾಡುತ್ತಾರೆ. ಕಲೆ, ಸಾಹಿತ್ಯ ಮತ್ತು ಕ್ರೀಡೆಗಳಲ್ಲಿ ಭಾಗವಹಿಸಿ, ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಬೇಕು. ಪೋಷಕರು ತಮ್ಮ ಮಕ್ಕಳಿಗೆ ಹೆಚ್ಚು ಮೊಬೈಲ್ ಬಳಕೆ ಮಾಡದಂತೆ ತಿಳಿ ಹೇಳಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಮಾತನಾಡಿ ‘ಯುವಜನತೆ ದುಶ್ಚಟಗಳ ದಾಸರಾಗುವುದು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದ್ದು, ಇದರಿಂದ ಹೊರಬಂದು ಸಾಧನೆಯತ್ತ ಮುನ್ನುಗ್ಗಬೇಕು’ ಎಂದು ಹೇಳಿದರು. 

ಕಲಾವಿದ ಶರಣಪ್ಪ ವಡಿಗೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ್ ಬಿ. ಜಾಬಗೌಡರ, ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ತಾಲ್ಲೂಕು ಕ್ರೀಡಾಧಿಕಾರಿ ಶರಬಸಪ್ಪ ಬಂಡಿಹಾಳ, ಬದರಿನಾಥ ಪುರೋಹಿತ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ 
ಭಾರತ ಜಗತ್ತಿನಲ್ಲಿ ಹೆಚ್ಚು ಜನಸಂಖ್ಯೆ ಹೊಂದಿದ್ದರೂ ಒಲಿಂಪಿಕ್ಸ್‌ನಂಥ ವಿಶ್ವದರ್ಜೆಯ ಕ್ರೀಡಾಕೂಟದಲ್ಲಿ ಸಾಧನೆ ಕಡಿಮೆಯಾಗಿದೆ. ಯುವಜನತೆಗೆ ಕ್ರೀಡೆ ಸಾಂಸ್ಕೃತಿಕ ಕ್ಷೇತ್ರದತ್ತ ಸಾಧನೆ ಮಾಡಬೇಕು.
ರಾಘವೇಂದ್ರ ಹಿಟ್ನಾಳ ಶಾಸಕ
ರಾಜ್ಯ ಸರ್ಕಾರ ಯುವಕರು ಮತ್ತು ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ದೇಶದ ಯುವ ಜನತೆಯ ಶಕ್ತಿ ಹಾಗೂ ಅವರ ಪ್ರತಿಭೆಯನ್ನು ಪ್ರದರ್ಶಿಸಲು ಯುವಜನೋತ್ಸವ ವೇದಿಕೆಯಾಗಿದೆ.
ಅಮ್ಜದ್‌ ಪಟೇಲ್‌ ನಗರಸಭೆ ಅಧ್ಯಕ್ಷ
ಕ್ರೀಡಾ ಇಲಾಖೆ ಜೊತೆಯಲ್ಲಿಯೇ ಯುವ ಸಬಲೀಕರಣವೂ ಇದ್ದು ರಾಜ್ಯ ಸರ್ಕಾರ ಯುವಕರ ಸಬಲೀಕರಣಕ್ಕೆ ಒತ್ತು ನೀಡಬೇಕು. ರಾಜ್ಯ ಯುವ ನೀತಿ ಜಾರಿಗೆ ತರಬೇಕು. 
ಎಸ್.ಬಾಲಾಜಿ ರಾಜ್ಯ ಯುವ ಸಂಘಗಳ ಒಕ್ಕೂಟ ಅಧ್ಯಕ್ಷ
ಜಿಲ್ಲೆಯಲ್ಲಿ ಉತ್ತಮ ಸಂಪನ್ಮೂಲ ವ್ಯಕ್ತಿಗಳಿದ್ದು ಅವರಿಂದ ಮಾರ್ಗದರ್ಶನ ಪಡೆದು ಯುವಜನತೆ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು. ಅಲ್ಲಿಯೂ ಪ್ರಶಸ್ತಿ ಗೆಲ್ಲಬೇಕು.
ವಿಠ್ಠಲ ಜಾಬಗೌಡರ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.