ADVERTISEMENT

ಕೊಪ್ಪಳ| ಯೋಜನಾ ಸಮಿತಿ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 5:41 IST
Last Updated 14 ಜನವರಿ 2026, 5:41 IST
ಕೊಪ್ಪಳದಲ್ಲಿ ಮಂಗಳವಾರ ನಡೆದ ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದ ಬಳಿಕ ವಿಜೇತರು ಹಾಗೂ ಪಕ್ಷದ ನಾಯಕರು ಸಂಭ್ರಮ ಆಚರಿಸಿದರು 
ಕೊಪ್ಪಳದಲ್ಲಿ ಮಂಗಳವಾರ ನಡೆದ ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದ ಬಳಿಕ ವಿಜೇತರು ಹಾಗೂ ಪಕ್ಷದ ನಾಯಕರು ಸಂಭ್ರಮ ಆಚರಿಸಿದರು    

ಕೊಪ್ಪಳ: ರಾಜ್ಯ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ನ ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಆಯ್ಕೆಗೆ ಮಂಗಳವಾರ ಇಲ್ಲಿನ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ನಾಲ್ಕು ಜನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಒಟ್ಟು ಆರು ಸ್ಥಾನಗಳಿಗೆ ಪೈಪೋಟಿ ನಡೆಸಿದ್ದ ಬಿಜೆಪಿ ನಾಲ್ಕು ಸ್ಥಾನ ತನ್ನದಾಗಿಸಿಕೊಂಡಿತು. ಕಾಂಗ್ರೆಸ್ ಪಕ್ಷದಿಂದ ಏಳು ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಇಬ್ಬರು ಗೆಲುವು ಪಡೆದಿದ್ದಾರೆ.  ಬಿಜೆಪಿ ಅಭ್ಯರ್ಥಿಗಳಿಗೆ ಒಟ್ಟು 94 ಮತಗಳು ಚಲಾವಣೆಯಾಗಿದ್ದು ಒಂದು ಮತ ತಿರಸ್ಕೃತಗೊಂಡಿದೆ. ಬಿಜೆಪಿ ಅಭ್ಯರ್ಥಿಗಳಾದ ಸೋಮಶೇಖರಪ್ಪ ಭೇರಿಗಿ 51, ಬಾಲರಾಜ್ ಗಾಳಿ 49, ಪರಶುರಾಮ ನಾಯಕ 46 ಹಾಗೂ ಶಿವನಗೌಡ ಪುಂಡಗೌಡರ 46 ಮತಗಳನ್ನು ಗಳಿಸಿದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಕಲ್ಲಬಾಗಿಲಮಠ ಸಿದ್ದೇಶಕುಮಾರ 54 ಹಾಗೂ ಈಶಪ್ಪ ಅಮರಪ್ಪ ಇಟ್ಟಂಗಿ 46 ಗೆಲುವು ಸಾಧಿಸಿದರು.  

ಸಂಭ್ರಮಾಚರಣೆ: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಅಲೆಯ ನಡುವೆಯೂ ಯೋಜನಾ ಸಮಿತಿ ಚುನಾವಣೆಯಲ್ಲಿ ಬಿಜೆಪಿಯ ನಾಲ್ಕು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಬದಲಾವಣೆ ಗಾಳಿ ಬೀಸಿದೆ. ಮುಂಬರುವ ಸ್ಥಳೀಯ ಚುನಾವಣೆಗೆ ಇದು ದಿಕ್ಸೂಚಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೇಸೂಗೂರು, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಹಾಗೂ ಮಾಜಿ ಸಚಿವ ಹಾಲಪ್ಪ ಆಚಾರ್ ಹರ್ಷ ವ್ಯಕ್ತಪಡಿಸಿದರು.

ADVERTISEMENT

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ್ ಕ್ಯಾವಟರ್, ಮುಖಂಡರಾದ ಚಂದ್ರಶೇಖರ್ ಪಾಟೀಲ್‌ ಹಲಗೇರಿ, ಗಣೇಶ್ ಹೊರತಟ್ನಾಳ, ಸುನೀಲ್ ಹೆಸರೂರು, ರಮೇಶ್ ನಾಡಗೇರ, ಚಂದ್ರಶೇಖರ ಕವಲೂರು, ಅಂಬರೀಶ್ ಕುಳಗಿ, ಮಹಾಂತೇಶ್ ಮೈನಳ್ಳಿ, ಅಜಯ ಅಗಡಿ, ಕೆ‌. ಮಹೇಶ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.