ADVERTISEMENT

ಕೊಪ್ಪಳ| ‘ಅಮೃತ ಸರೋವರ’ದ ನಿರ್ವಹಣೆಯೇ ಸವಾಲು

ಜಿಲ್ಲೆಯಲ್ಲಿ ಕೆರೆಗಳ ಅಭಿವೃದ್ಧಿ ಯೋಜನೆ, ಅಂತರ್ಜಲ ಮಟ್ಟ ಹೆಚ್ಚಿಸಲು ಸಹಕಾರಿ, ಸ್ವಚ್ಛತೆಗೆ ಬೇಕಿದೆ ಆದ್ಯತೆ

ಪ್ರಮೋದ
Published 19 ಸೆಪ್ಟೆಂಬರ್ 2022, 19:30 IST
Last Updated 19 ಸೆಪ್ಟೆಂಬರ್ 2022, 19:30 IST
ಕೊಪ್ಪಳ ತಾಲ್ಲೂಕಿನ ಬಹದ್ದೂರ್‌ ಬಂಡಿ ಗ್ರಾಮದಲ್ಲಿ ಅಭಿವೃದ್ಧಿಗೊಂಡ ಅಮೃತ ಸರೋವರ ಕೆರೆಯ ಸುಂದರ ನೋಟ –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ
ಕೊಪ್ಪಳ ತಾಲ್ಲೂಕಿನ ಬಹದ್ದೂರ್‌ ಬಂಡಿ ಗ್ರಾಮದಲ್ಲಿ ಅಭಿವೃದ್ಧಿಗೊಂಡ ಅಮೃತ ಸರೋವರ ಕೆರೆಯ ಸುಂದರ ನೋಟ –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ   

ಕೊಪ್ಪಳ: ಪ್ರಾಕೃತಿಕವಾಗಿ ಎಲ್ಲರನ್ನೂ ಸೆಳೆಯುವ ಗುಡ್ಡದ ಅಂಚಿನಲ್ಲಿರುವ ಕೊಪ್ಪಳ ತಾಲ್ಲೂಕಿನ ಬಹದ್ದೂರ್‌ ಬಂಡಿ ಗ್ರಾಮದ ಕೆರೆ ಹಾಗೂ ಅದರ ಸುತ್ತಲಿನ ವಾತಾವರಣದಲ್ಲಿ ಮೊದಲು ಎಲ್ಲಿ ನೋಡಿದರೂ ದುರ್ನಾತ. ಕಸದ ತ್ಯಾಜ್ಯ ಸಂಗ್ರಹವಾಗುತ್ತಿತ್ತು. ಪುಡಾರಿಗಳಿಗೆ ಅದು ದುಶ್ಚಟಗಳ ಅಡ್ಡೆಯಾಗಿತ್ತು.

ಆದರೆ, ಈಗ ಅಲ್ಲಿ ಸುತ್ತಲೂ ಸ್ವಚ್ಛಂದ ಪರಿಸರ ನಳನಳಿಸುತ್ತಿದೆ. ಮಳೆಗಾಲದಲ್ಲಿ ಗುಡ್ಡದಿಂದ ನೀರು ಹರಿದು ಬಂದು ಕೆರೆ ಸೇರುವ ಚಿತ್ರಣ ನೋಡಿದರೆ ಸಣ್ಣ ಝರಿಯೊಂದು ಕಣ್ಮನ ಸೆಳೆಯುತ್ತದೆ. ಈಗ ಅದಕ್ಕೆ ಸುತ್ತಲೂ ಕಬ್ಬಿಣದ ಗ್ಯಾಲರಿ ಹಾಕಲಾಗಿದೆ. ಹೀಗಾಗಿ ಕೆರೆ ಎಲ್ಲರನ್ನೂ ಆಕರ್ಷಿಸುತ್ತಿದೆ.

ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ ರಾಜ್ಯ ಸರ್ಕಾರ ಆಯಾ ಜಿಲ್ಲಾ ಪಂಚಾಯಿತಿಗಳ ಮೂಲಕ ಜಿಲ್ಲೆಯ ಕೆರೆಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಿದ್ದು, ಇದರಲ್ಲಿ ಮೊದಲ ಹಂತದಲ್ಲಿ 21 ಕೆರೆಗಳು ಲೋಕಾರ್ಪಣೆಗೊಂಡಿವೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಗೊಂಡ ಕೆರೆಗಳು ಅನೈತಿಕ ಚಟುವಟಿಕೆಗಳ ತಾಣವಾಗದಂತೆ, ಅಸ್ವಚ್ಛತೆ ರಾರಾಜಿಸದಂತೆ ನಿರ್ವಹಣೆ ಮಾಡುವ ಸವಾಲು ಇದೆ.

ADVERTISEMENT

ಕೆರೆಗಳ ಅಭಿವೃದ್ಧಿಯಿಂದ ಅಂತರ್ಜಲ ಮಟ್ಟ ಹೆಚ್ಚಾದರೆ ಗ್ರಾಮೀಣ ಭಾಗದ ಜನರು ಎದುರಿಸುತ್ತಿರುವ ಜಲತೊಂದರೆ ಕಡಿಮೆಯಾಗಲಿದೆ. ಜಲಸಂರಕ್ಷಣೆಯಿಂದ ರೈತಾಪಿ ವರ್ಗದ ಜನರಿಗೆ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು, ಮಳೆಯ ಅವಲಂಬನೆ ಕಡಿಮೆ ಮಾಡುವುದು, ಗ್ರಾಮೀಣ ಜನರ ಆರೋಗ್ಯ ಸುಧಾರಣೆ ಕೆರೆಗಳ ಅಭಿವೃದ್ಧಿಯ ಮೂಲ ಆಶಯವಾಗಿದೆ.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ, ನರೇಗಾ ಸೇರಿದಂತೆ ವಿವಿಧ ಕಡೆಯಿಂದ ಕೆರೆಗಳಲ್ಲಿ ಹೂಳು ತೆಗೆದು, ಕಲ್ಲು ಪಿಂಚಿಂಗ್ ಮಾಡಲಾಗಿದೆ. ಸುಸ್ಥಿರ ಬಂಡ್‌ಗಳ ನಿರ್ಮಾಣ, ಕೆರೆಗೆಸಂಬಂಧಿಸಿದ ನೀರಿನ ಮೂಲಗಳಾದ ನಾಲಾ ಅಭಿವೃದ್ಧಿ, ಅರಣ್ಯ, ತೋಟಗಾರಿಕೆ ಸಂಬಂಧಿಸಿದ ಕೆರೆಯ ಬದುಗಳಲ್ಲಿ ಸಸಿಗಳನ್ನು ನೆಡುವುದು, ಪಾದಚಾರಿ ಮಾರ್ಗ, ಉದ್ಯಾನಗಳ ನಿರ್ಮಾಣ ಮಾಡಲಾಗಿದೆ.

ಜಿಲ್ಲೆಯಲ್ಲಿ ಆಯ್ಕೆಯಾಗಿರುವ 75 ಕೆರೆಗಳ ವಿಸ್ತೀರ್ಣ ಕನಿಷ್ಠ 2.25 ಹೆಕ್ಟೇರ್‌ನಿಂದ ಗರಿಷ್ಠ 40 ಹೆಕ್ಟೇರ್‌ ಇರುವ ಕೆರೆಗಳನ್ನು ಆಯ್ಕೆ ಮಾಡಲಾಗಿದೆ. ಅಮೃತ ಸರೋವರವು ಕನಿಷ್ಠ ಒಂದು ಎಕರೆ ಪ್ರದೇಶ ಇರುವ ಕೆರೆಗಳನ್ನು ಆಯ್ಕೆ ಮಾಡಲಾಗಿದೆ. ಈ ಕೆರೆಗಳು ಸುಮಾರು 10 ಸಾವಿರ ಘನ ಮೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿವೆ.

ಕೆರೆ ನೀರನ್ನು ಅತಿ ಹೆಚ್ಚು ಬಳಕೆ ಮಾಡುವ ಮತ್ತು ಕೆರೆಯ ನೀರಿನ ಮೇಲೆ ಹೆಚ್ಚು ಅವಲಂಬಿತವಾಗಿರುವ ಪ್ರದೇಶಗಳ ಕೆರೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಯೋಜನೆ ಅನುಷ್ಠಾನವನ್ನು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ, ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರಗಳು ನಿರ್ವಹಿಸುತ್ತಿರುತ್ತವೆ.

ಜಿಲ್ಲೆಯಲ್ಲಿ 93 ಗ್ರಾಮ ಪಂಚಾಯತಿ ಮಟ್ಟದ ಕೆರೆಗಳನ್ನು ಗುರುತಿಸಲಾಗಿದ್ದು, ಅಂತರ್ಜಲ ಹೆಚ್ಚಿಸಲೆಂದು ಈ ಕೆರೆಗಳನ್ನು ‘ಅಮೃತ ಸರೋವರ‘ ಕೆರೆಗಳನ್ನಾಗಿ ನಿರ್ಮಿಸಲಾಗುತ್ತಿದೆ. ಕೆರೆಗಳ ಅಭಿವೃದ್ಧಿ ಸಾಂಪ್ರದಾಯಿಕ ಜಲಮೂಲಗಳ ಪುನಶ್ಚೇತನ ಮತ್ತು ಜಲಮೂಲಗಳನ್ನು ನಿರ್ಮಾಣಕ್ಕೆ ಅನುಕೂಲವಾಗಿದೆ.

ಮೀನುಗಾರಿಕೆಗೆ ಉತ್ತೇಜನ: ಬಹದ್ದೂರ್ ಬಂಡಿಯ ಅಮೃತ ಸರೋವರ ಕೆರೆಯಲ್ಲಿ ಮೀನುಗಾರಿಕೆ ಇಲಾಖೆಯಿಂದ ತಂದಿದ್ದ ಎರಡು ಸಾವಿರ ಮೀನುಗಳನ್ನು ಕೆರೆಯಲ್ಲಿ ಬಿಡುವ ಮೂಲಕ ಮೀನು ಸಾಕಾಣಿಕೆಗೂ ಉತ್ತೇಜನ ನೀಡಲಾಗಿದೆ.

ಗಂಗಾವತಿಯ 10, ಕೊಪ್ಪಳ 24, ಕಾರಟಗಿಯ 3, ಕುಕನೂರಿನ 7, ಕನಕಗಿರಿ 10, ಕುಷ್ಟಗಿ 24 ಹಾಗೂ ಯಲಬುರ್ಗಾದ 15 ಸೇರಿದಂತೆ ಒಟ್ಟು 93 ಕೆರಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಇದರಲ್ಲಿ ಕೆಲ ಕೆರೆಗಳು ಈಗಾಗಲೇ ಲೋಕಾರ್ಪಣೆಯಾಗಿವೆ.

ನಿರ್ವಹಣೆಯ ಸವಾಲು: ಕೆರೆಗಳ ಉಳಿವಿಗೆ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ನಿರ್ವಹಣೆ ಕೊರತೆಯಿಂದಾಗಿ ಕೆರೆಗಳು ಮತ್ತೆ ಹಳೇ ಸ್ಥಿತಿಗೆ ತಲುಪುತ್ತಿವೆ. ಆದ್ದರಿಂದ ಕೆರೆಗಳಲ್ಲಿ ಕಸ ಹಾಕದಂತೆ, ಪ್ರಾಣಿಗಳು ಮೈ ತೊಳೆಯದಂತೆ, ಕುಡುಕರ ತಾಣವಾಗದಂತೆ ಮಾಡಬೇಕಾದ ಕೆಲಸ ಕೆರೆಗಳ ನಿರ್ವಹಣೆ ಹೊತ್ತ ಆಯಾ ಗ್ರಾಮ ಪಂಚಾಯಿತಿಯವರು ಮಾಡಬೇಕಾಗಿದೆ.

‘ನೀರು ಸಮರ್ಥವಾಗಿ ಬಳಸಿಕೊಳ್ಳುವ ಪ್ರಯತ್ನ‘

ಕೊಪ್ಪಳ: ಜೀವಿಗಳ ಉಳಿವಿಗೆ ನೀರು ಮುಖ್ಯವಾಗಿದೆ. ನೀರನ್ನು ನೈಸರ್ಗಿಕವಾಗಿ ಮರುಬಳಕೆ ಮಾಡಿದರೂ ಭೂಮಿಯ ಮೇಲಿನ ತಾಜಾ ನೀರಿನ ಪ್ರಮಾಣವು ವೇಗವಾಗಿ ಕಡಿಮೆಯಾಗುತ್ತಿದೆ. ಮನುಷ್ಯರ ನಿರ್ಲಕ್ಷ್ಯದಿಂದ ಇದೆಲ್ಲಾ ನಡೆದಿದೆ. ದಿನವಿಡೀ ನೀರನ್ನು ಹಲವು ಉದ್ದೇಶಗಳಿಗೆ ಬಳಸುತ್ತೇವೆ. ಆದರೆ ನಾವು ಅದನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿಲ್ಲ.

ನಾವು ಬಳಸುವುದಕ್ಕಿಂತ ಹೆಚ್ಚಿನದನ್ನು ನಾವು ವ್ಯರ್ಥ ಮಾಡುತ್ತೇವೆ. ಇದರಿಂದಾಗಿ ನೀರು ವೇಗವಾಗಿ ಕಡಿಮೆಯಾಗುತ್ತಿದೆ. ನಾವು ನೀರನ್ನು ಬುದ್ಧಿವಂತಿಕೆಯಿಂದ ಬಳಸಬೇಕಾದ ಮತ್ತು ಅದನ್ನು ಕಲುಷಿತಗೊಳಿಸುವ ಚಟುವಟಿಕೆಗಳನ್ನು ಮಿತಿಗೊಳಿಸಲು ಇದು ಉತ್ತಮ ಸಮಯ. ವೈಯಕ್ತಿಕವಾಗಿ ಎಲ್ಲರೂ ಹೆಚ್ಚು ಜವಾಬ್ದಾರರಾಗಿರಬೇಕು. ನೀರು ವ್ಯರ್ಥ ಮಾಡುವುದನ್ನು ತಪ್ಪಿಸಬೇಕು. ಅಮೃತ ಕೆರೆಗಳನ್ನು ಆಯಾ ಗ್ರಾಮ ಪಂಚಾಯಿತಿಯವರು ಕಾಳಜಿ ವಹಿಸಿ ನಿರ್ವಹಣೆ ಮಾಡಬೇಕು.

- ಫೌಜಿಯಾ ತರುನ್ನುಮ್, ಸಿಇಒ, ಜಿಲ್ಲಾ ಪಂಚಾಯಿತಿ

ಕೆರೆಗಳ ಉಳಿವಿಗೆ ಆಗಬೇಕಾದ ಕೆಲಸಗಳು

* ಕೆರೆಗಳ ಉಳಿವು ಮತ್ತು ಅಭಿವೃದ್ಧಿ ಸರ್ಕಾರದ ಹೊಣೆ ಮಾತ್ರ ಎನ್ನುವ ಮನೋಭಾವ ಜನರಿಂದ ಹೋಗಿ ಸಾರ್ವಜನಿಕ ಜವಾಬ್ದಾರಿಯ ಅರಿವು ಮೂಡಬೇಕು.

* ಕೆರೆ ರಕ್ಷಣೆಗೆ ಜಿಲ್ಲಾ ಮಟ್ಟದಲ್ಲಿ ರಚಿಸಲಾದ ಸಮಿತಿಗಳು ಆಗಾಗ್ಗೆ ಸಭೆ ನಡೆಸಿ ಕೆರೆ ಸಂರಕ್ಷಣೆಗೆ ಕ್ರಮ ವಹಿಸಬೇಕು

* ಅಭಿವೃದ್ಧಿ ಪಡಿಸಿರುವ ಕೆರೆಯಲ್ಲಿ ಪುಂಡರ ಹಾವಳಿ ನಡೆಯದಂತೆ ನೋಡಿಕೊಳ್ಳಬೇಕು.

* ಕೆರೆಗಳ ಸಂರಕ್ಷಣೆಗೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮದ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡ ಕೆರೆ ಸಂರಕ್ಷಣಾ ತಂಡ ರಚಿಸಬೇಕು.

* ಕೆರೆಗಳಲ್ಲಿ ಕಸ ಚೆಲ್ಲದಂತೆ ನಿಗಾ ವಹಿಸಬೇಕು.

* ಜಿಲ್ಲೆಯ ಗ್ರಾಮೀಣ ಭಾಗ ಮಾತ್ರವಲ್ಲದೇ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿನ ಕೆರೆಗಳ ಅಭಿವೃದ್ಧಿಗೂ ಸರ್ಕಾರ ಆದ್ಯತೆ ಕೊಡಬೇಕು.

* ಅವಕಾಶವಿರುವ ಕೆರೆಗಳಲ್ಲಿ ಬೋಟಿಂಗ್‌ ಸೌಲಭ್ಯ ಕಲ್ಪಿಸಿ ಆದಾಯ ಸೃಷ್ಟಿ ಬಗ್ಗೆ ಗಮನ ಹರಿಸಬೇಕು.

* ಕೆರೆಗಳ ಅಂದ ಇನ್ನಷ್ಟು ಹೆಚ್ಚಿಸಿ ವಿದ್ಯುತ್‌ ದೀಪಗಳನ್ನು ಅಳವಡಿಸಿ ಸ್ಥಳೀಯವಾಗಿ ಕಿರು ಪ್ರವಾಸಿ ತಾಣ ಮಾಡಬೇಕು.

***

ಕೆರೆ ಚೆನ್ನಾಗಿ ಅಭಿವೃದ್ಧಿ ಕಂಡಿದೆ. ಮೊದಲು ಕೆರೆಯಲ್ಲಿ ಎಮ್ಮೆಗಳ ಮೈ ತೊಳೆಯಲಾಗುತ್ತಿತ್ತು. ಈಗಿರುವ ಸ್ವಚ್ಛತೆಯನ್ನು ಮುಂದೆಯೂ ಉಳಿಸಿಕೊಂಡು ಹೋಗಬೇಕಾಗಿದೆ.
- ಹುಸೇನಸಾಬ್ ಕಮ್ಮಾರ್, ಬಹದ್ದೂರು ಬಂಡಿ, ಕೊಪ್ಪಳ ತಾಲ್ಲೂಕು

ಮೊದಲು ಹಾಳಾದ ಸ್ಥಿತಿಯಲ್ಲಿದ್ದ ಕೆರೆ ಈಗ ಅಭಿವೃದ್ಧಿಯಿಂದ ನಳನಳಿಸುತ್ತಿದೆ. ಕೆರೆಯ ಸುತ್ತಲೂ ಬೆಳಕಿನ ವ್ಯವಸ್ಥೆ ಮಾಡಿ ಬೋಟಿಂಗ್‌ ವ್ಯವಸ್ಥೆ ಮಾಡಬೇಕು. ಇದರಿಂದ ಸ್ಥಳೀಯರಿಗೆ ಕೆರೆ ಕಿರು ಪ್ರವಾಸಿ ತಾಣವಾಗಿಸಬಹುದು.
- ಬಾಬಾಜಾನ್ ಬೇಲದಾರ, ಬಹದ್ದೂರ್ ಬಂಡಿ, ಕೊಪ್ಪಳ ತಾಲ್ಲೂಕು

ಮುಧೋಳ ಗ್ರಾಮದಿಂದ ಸ್ವಲ್ಪ ದೂರದಲ್ಲಿರುವ ಕೆರೆಯನ್ನು ಅಭಿವೃದ್ಧಿಪಡಿಸಿದ್ದು, ಇದು ಗ್ರಾಮಕ್ಕೆ ಕುಡಿಯುವ ನೀರು ಸರಬರಾಜಿಗೆ ಸಹಕಾರಿಯಾಗಲಿದೆ. ನೀರು ಸಂಗ್ರಹಿಸಿ ಗ್ರಾಮಕ್ಕೆ ಬಳಸಿಕೊಳ್ಳುವ ಯೋಜನೆಯಿದೆ. ಇದೇ ರೀತಿಯಲ್ಲಿ ಗ್ರಾಮದಲ್ಲಿರುವ ಕೆರೆಯನ್ನೂ ಅಭಿವೃದ್ಧಿ ಗೊಳಿಸಬೇಕಾಗಿದೆ.

-ಹುಸೇನ್‌ ಮೋತೆಖಾನ್ ಮುಧೋಳ, ಯಲಬುರ್ಗಾ ತಾಲ್ಲೂಕು

ಜಿನುಗು ಕೆರೆ ಮತ್ತು ಹುಲಿಕೆರೆ ಅಮೃತ ಸರೋವರ ಯೋಜನೆಗೆ ಆಯ್ಕೆಯಾಗಿದ್ದು, ಸದ್ಯ ನಡೆದಿರುವ ಕಾಮಗಾರಿಯಿಂದ ಸಂಪೂರ್ಣ ಅನುಕೂಲ ಆಗುವುವದಿಲ್ಲ. ನೀರು ಸಂರಕ್ಷಣೆ, ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಬೇಕಾಗಿದೆ. ದೂರದೃಷ್ಟಿಯ ಯೋಜನೆ ರೂಪಿಸಬೇಕಾಗಿದೆ
ಜಿನ್ನತ್ ಬೇಗಂ, ಮೆಣೇಧಾಳ ನಿವಾಸಿ, ತಾವರಗೇರಾ

ಪೂರಕ ಮಾಹಿತಿ: ಕೆ. ಶರಣಬಸವ ನವಲಹಳ್ಳಿ ಹಾಗೂ ಉಮಾಶಂಕರ ಹಿರೇಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.