ADVERTISEMENT

ಕೊಪ್ಪಳ: ಯಲಬುರ್ಗಾದಲ್ಲಿ ಹೆಚ್ಚು ಕುಸಿತ, ರೈತರಿಗೆ ಬೆಳೆ ಹಾಳಾಗುವ ಆತಂಕ

ಜಿಟಿಜಿಟಿ ಮಳೆ: 22ಕ್ಕೂ ಹೆಚ್ಚು ಮನೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 14:42 IST
Last Updated 12 ಜುಲೈ 2022, 14:42 IST
ಟ್ಟು 22 ಮನೆಗಳಿಗೆ ಹಾನಿ
ಟ್ಟು 22 ಮನೆಗಳಿಗೆ ಹಾನಿ   

ಕೊಪ್ಪಳ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇತ್ತೀಚಿಗೆ ಸುರಿದ ಜಿಟಿಜಿಟಿ ಮಳೆಗೆ ಜಿಲ್ಲೆಯಲ್ಲಿ ಒಟ್ಟು 22 ಮನೆಗಳಿಗೆ ಹಾನಿಯಾಗಿದೆ. ಹಲವೆಡೆ ಬೆಳೆ ಹಾಳಾಗಿದೆ.

ಯಲಬುರ್ಗಾ ತಾಲ್ಲೂಕಿನ ಬುಡಕುಂಟಿ, ತಮ್ಮರಗುದ್ದಿ, ಕಳಕಬಂಡಿ, ಸಂಗನಾಳ, ನಸರಾಪುರ, ಹೊಸೂರ, ಚಿಕ್ಕಮ್ಯಾಗೇರಿ ತಾಂಡಾ, ಚಿಕ್ಕಮನ್ನಾಪುರದಲ್ಲಿ ತಲಾ ಒಂದು, ಕೊನಸಾಗರ, ತಾಳಕೇರಿಯಲ್ಲಿ ತಲಾ ಮೂರು ಮತ್ತು ಹುಣಸಿಹಾಲದಲ್ಲಿ ನಾಲ್ಕು ಮನೆಗಳಿಗೆ ಭಾಗಶಃ ಕುಸಿದಿವೆ. ಕುಕನೂರಿನಲ್ಲಿ ಮೂರು ಮತ್ತು ಹನುಮಸಾಗರದಲ್ಲಿ ಒಂದು ಮನೆ ಕುಸಿದಿವೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಹನುಮಸಾಗರ ವರದಿ: ಸಮೀಪದ ಗಡಚಿಂತಿ ಗ್ರಾಮದ ಕಳಕಪ್ಪ ಯಮನಪ್ಪ ರಾಜೂರ ಎಂಬುವವರ ಮನೆ ಅತಿಯಾದ ಮಳೆಗೆ ಒಂದು ಕೋಣೆಯ ಚಾವಣಿ ಮಂಗಳವಾರ ಕುಸಿದಿದೆ.

ADVERTISEMENT

ಕುಟುಂಬದ ಸದಸ್ಯರು ಅದೇ ಮನೆಯಲ್ಲಿ ವಾಸವಾಗಿದ್ದರು. ಬೆಳಿಗ್ಗಿನ ಹೊತ್ತಿನಲ್ಲಿ ಮನೆಯಿಂದ ಹೊರಗಡೆ ಇದ್ದ ಕಾರಣ ಯಾವುದೇ ಅವಘಡ ಸಂಭವಿಸಿಲ್ಲ. ಮನೆಯಲ್ಲಿದ್ದ ಧಾನ್ಯ, ಬಟ್ಟೆ ಹಾಗೂ ಪಾತ್ರೆಗಳು ಹಾಳಾಗಿವೆ ಎಂದು ಕುಟುಂಬದ ಸದಸ್ಯರು ಹೇಳಿದರು.

‘ನಮಗೆ ಜಮೀನು ಇಲ್ಲ, ಕೂಲಿ ಮಾಡಿಯೇ ಜೀವನ ಸಾಗಿಸಬೇಕು. ಮನೆ ಬಿದ್ದ ಕಾರಣ ತೀವ್ರ ತೊಂದರೆಯಾಗಿದೆ. ಸರ್ಕಾರ ಗರಿಷ್ಠ ಪರಿಹಾರ ನೀಡಬೇಕು. ಮನೆ ದುರಸ್ತಿ ಮಾಡಿಕೊಳ್ಳುವಷ್ಟು ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ’ ಎಂದು ಮನೆ ಮಾಲೀಕ ಕಳಕಪ್ಪ ನೋವು ತೋಡಿಕೊಂಡರು.

ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಕುಟುಂಬಕ್ಕೆ ಇದೊಂದೆ ಮನೆ ಇರುವುದರಿಂದ ಸದ್ಯ ಹೊರಗೆ ಹಾಕಿರುವ ತಗಡಿನ ಶೆಡ್‍ನಲ್ಲಿ ಆ ಕುಟುಂಬ ವಾಸವಾಗಿದೆ.

ಗ್ರಾಮದ ಮುಖಂಡ ಯಮನೂರಪ್ಪ ಅಬ್ಬಿಗೇರಿ ಮಾತನಾಡಿ ’ಈ ಬಡ ಕುಟುಂಬಕ್ಕೆ ಸರ್ಕಾರ ಪ್ರಕೃತಿ ವಿಕೋಪದಡಿಯಲ್ಲಿ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ಮಳೆಗೆ ಹಾಳಾದ ಬೆಂಡೆ ಬೆಳೆ

ಹನುಮಸಾಗರ: ಸಮೀಪದ ಕಡೇಕೊಪ್ಪ ಗ್ರಾಮದ ರೈತ ಈರಣ್ಣ ಜೀಗೇರಿ ಎಂಬುವವರಿಗೆ ಸೇರಿದ ಒಂದು ಎಕರೆ ಬೆಂಡೆ ಬೆಳೆ ಮಳೆಗೆ ಹಾಳಾಗಿದೆ.

‘ಹತ್ತಾರು ಸಾವಿರ ರೂಪಾಯಿ ಖರ್ಚು ಮಾಡಿ ಒಂದು ಎಕರೆ ಭೂಮಿಯಲ್ಲಿ ಬೆಳೆದಿದ್ದ ಬೆಂಡೆ ಫಸಲು ಕಾಯಿ ಹೀಚು ಕಟ್ಟುವ ಈ ಸಮಯದಲ್ಲಿ ಮಳೆಯಿಂದಾಗಿ ಹಾಳಾಗಿದೆ. ತರಕಾರಿ ಬೆಳೆಗಳನ್ನೇ ಅವಲಂಬಿಸಿದ್ದೇನೆ. ಈಗಿನ ಹಾನಿಯಿಂದ ಕುಟುಂಬ ನಡೆಸಲು ಕಷ್ಟವಾಗುತ್ತದೆ’ ಎಂದು ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.